ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಿನದ 24 ಗಂಟೆ ಕುಡಿಯುವ ನೀರು ಪೂರೈಕೆಯ ಜಲಸಿರಿ ಯೋಜನೆ ಕಾಮಗಾರಿ ಮೇ ತಿಂಗಳಲ್ಲೇ ಪೂರ್ತಿಯಾಗಬೇಕಿದ್ದರೂ, ಇದುವರೆಗೆ ಶೇ.60ರಷ್ಟು ಕಾಮಗಾರಿ ಮಾತ್ರ ನಡೆದಿರುವ ಬಗ್ಗೆ ಗುರುವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಯೋಜನೆಯ ಅವ್ಯವಸ್ಥೆಗಳ ಬಗ್ಗೆ ಕೂಲಂಕಶವಾಗಿ ಚರ್ಚಿಸಲು ವಲಯವಾರು ಸಭೆ ನಡೆಸುವುದಾಗಿ ಮೇಯರ್ ಮನೋಜ್ ಕುಮಾರ್ ನಿರ್ಣಯ ಪ್ರಕಟಿಸಿದರು.ನೂತನ ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯ ಆರಂಭದಲ್ಲಿ ಪ್ರತಿಪಕ್ಷ ನಾಯಕ ಅನಿಲ್ ಕುಮಾರ್ ಜಲಸಿರಿ ನಿಧಾನಗತಿ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಮಾತನಾಡಿ, ಜಲಸಿರಿ ಯೋಜನೆಯಡಿ ಅಡ್ಯಾರ್ ನೀರು ಸಂಸ್ಕರಣಾ ಸ್ಥಾವರದಿಂದ ಪಡೀಲ್‌ವರೆಗೆ ಹೆಚ್ಚುವರಿ ಪೈಪ್‌ಲೈನ್‌ಗೆ ಮತ್ತೆ 70 ಕೋಟಿ ರು. ಬೇಡಿಕೆ ಇರಿಸಲಾಗಿದೆ. ಯೋಜನೆಯ ಡಿಪಿಆರ್ ತಯಾರಿಸುವಾಗ ಈ ಬಗ್ಗೆ ಯಾಕೆ ತಿಳಿಸಲಾಗಿಲ್ಲ ಎಂದು ಪ್ರಶ್ನಿಸಿದರು.ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ಎ.ಸಿ. ವಿನಯರಾಜ್, ಕಿರಣ್ ಕುಮಾರ್ ಸಂಗೀತಾ ನಾಯಕ್ ಸೇರಿದಂತೆ ಅನೇಕ ಸದಸ್ಯರು ಜಲಸಿರಿ ಕಾಮಗಾರಿಯ ಅವ್ಯವಸ್ಥೆಗಳನ್ನು ಸಭೆಯ ಮುಂದಿಟ್ಟರು.
ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಮಾತನಾಡಿ, ಯೋಜನೆ ಕಾಮಗಾರಿಗೆ ಅಗೆಯಲಾಗಿರುವ ರಸ್ತೆಗಳ ಪುನಃಸ್ಥಾಪನೆ ಕಾರ್ಯ ಆರಂಭವಾಗಿದೆ. ಸುರತ್ಕಲ್ ವ್ಯಾಪ್ತಿಯ 12 ವಾರ್ಡ್‌ಗಳಲ್ಲಿ ಜನವರಿ ಎರಡನೆ ವಾರದಿಂದ ಜಲಸಿರಿ ನೀರು ಪೂರೈಕೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಒಟ್ಟು 1288 ಕಿ.ಮೀ. ವ್ಯಾಪ್ತಿಯಲ್ಲಿ 740 ಕಿ.ಮೀ. ಪೈಪ್‌ಲೈನ್ ಅಳವಡಿಸಲಾಗಿದ್ದು, 560 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. 27 ಸಾವಿರ ನೀರಿನ ಮೀಟರ್‌ಗಳನ್ನು ಅಳವಡಿಸಲಾಗಿದೆ ಎಂದು ಜಲಸಿರಿ ಅಧಿಕಾರಿ ಮಾಹಿತಿ ನೀಡಿದರು.ಶಾಸಕ ಐವನ್ ಡಿಸೋಜ ಮಾತನಾಡಿ, ಈಬಗ್ಗೆ ಕೆಡಿಪಿ ಸಭೆಯಲ್ಲಿಯೂ ಹಲವು ಬಾರಿ ಚರ್ಚೆ ನಡೆದಿದೆ. ಆದರೆ ಸಮಸ್ಯೆ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಟ್ರಾಫಿಕ್ ಸಮಸ್ಯೆ: ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಈ ಹಿಂದೆ ಸಭೆ ಕರೆಯಲಾಗಿದ್ದರೂ ಯಾವುದೇ ಪರಿಣಾಮ ಆಗಿಲ್ಲ. ನಂತೂರಲ್ಲಿ ಆಗೋದು ಫ್ಲೈಓವರ್ ಅಥವಾ ಅಂಡರ್‌ಪಾಸ್ ಎನ್ನುವ ಮಾಹಿತಿ ಜನರಿಗೆ ಇಲ್ಲ. ಟ್ರಾಫಿಕ್ ಪೊಲೀಸರು ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಸಭೆಗೂ ಹಾಜರಾಗುತ್ತಿಲ್ಲ ಎಂದು ಸದಸ್ಯ ನವೀನ್ ಡಿಸೋಜ ಆರೋಪಿಸಿದರು. ಈ ಕುರಿತು ಪ್ರತ್ಯೇಕ ಸಭೆ ನಡೆಸುವುದಾಗಿ ಮೇಯರ್ ತಿಳಿಸಿದರು.
ಉಪ ಮೇಯರ್ ಭಾನುಮತಿ, ವಿವಿಧ ಸ್ಥಾಯಿ ಸಮಿತಿ ಸದಸ್ಯರಾದ ವೀಣಾ ಮಂಗಳಾ, ಸರಿತಾ ಶಶಿಧರ್, ಕದ್ರಿ ಮನೋಹರ ಶೆಟ್ಟಿ, ಸುಮಿತ್ರಾ ಕರಿಯ ಇದ್ದರು.ವಸತಿ ಯೋಜನೆ: ರಾಜಕೀಯ ತಿಕ್ಕಾಟ
ಪದವು ಗ್ರಾಮದಲ್ಲಿ 930 ಬಡ ಫಲಾನುಭವಿಗಳಿಗೆ ವಸತಿ ಯೋಜನೆ ವಿಚಾರ ಸಭೆಯಲ್ಲಿ ತೀವ್ರ ರಾಜಕೀಯ ತಿಕ್ಕಾಟಕ್ಕೆ ಕಾರಣವಾಯಿತು.ಪದವು ಗ್ರಾಮದಲ್ಲಿ 2016ರಲ್ಲಿ 930 ಬಡ ಫಲಾನುಭವಿಗಳಿಗೆ ಜಿ ಪ್ಲಸ್ 3 ಮಾದರಿಯಲ್ಲಿ ವಸತಿ ಯೋಜನೆಗಾಗಿ 10 ಎಕರೆ ಮೀಸಲಿಟ್ಟು ಫಲಾನುಭವಿಗಳ ಆಯ್ಕೆಯೂ ನಡೆದಿತ್ತು. ಇಷ್ಟು ವರ್ಷ ಆದರೂ ಜನರಿಗೆ ಮನೆ ಕಟ್ಟಿಕೊಡಲು ಆಗದೆ ಅನ್ಯಾಯ ಮಾಡಿದ್ದೀರಿ ಎಂದು ಸದಸ್ಯ ವಿನಯರಾಜ್ ಆರೋಪಿಸಿದರು. ಡೀಮ್ಡ್ ಫಾರೆಸ್ಟ್ ಜಾಗವನ್ನು ಬಡವರಿಗೆ ನೀಡುವ ವಾಗ್ದಾನ ಮಾಡಿ ಮೋಸ ಮಾಡಿದ್ದು ಕಾಂಗ್ರೆಸ್‌ನ ಮಾಜಿ ಶಾಸಕರು. ಈಗಿನ ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದರು.
1984ರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಬಡವರಿಗೆ ಮನೆ ಕಟ್ಟಿಕೊಟ್ಟಿದ್ದು ಕೇವಲ ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಎಂದು ಹಿರಿಯ ಸದಸ್ಯ ಶಶಿಧರ ಹೆಗ್ಡೆ ಕಾಲನಿಗಳ ಪಟ್ಟಿ ಕೊಡುತ್ತಾ ಹೋದರು. ಎರಡೂ ಪಕ್ಷಗಳ ಸದಸ್ಯರು ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲೇ ತೊಡಗಿ ಅರ್ಧ ಗಂಟೆಗೂ ಅಧಿಕ ಕಾಲ ಸಭೆ ಗೊಂದಲದ ಗೂಡಾಗಿತ್ತು.