ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮೈಸೂರಿನ ಮೂಡಾ ಹಗರಣ ವಿಚಾರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ವಾದ-ಪ್ರತಿವಾದ ಆಲಿಸಿಯೇ ರೂಲಿಂಗ್ ನೀಡಿದ್ದೇನೆ. ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬೇಕಾಗುತ್ತದೆಯೇ ಹೊರತು, ವಿಮರ್ಶೆಗಳ ಮರ್ಜಿಗೆ ಅನುಗುಣವಾಗಿ ಅಲ್ಲ. ನಿಯಮ ಮೀರಿ ಕೆಟ್ಟ ಸಂಪ್ರದಾಯ ಹುಟ್ಟುಹಾಕುವುದಕ್ಕೆ ನಾನು ಸಿದ್ಧನಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.ಮೂಡಾ ವಿಚಾರದಲ್ಲಿ ಕಲಾಪದಲ್ಲಿ ಚರ್ಚೆಗೆ ಆಸ್ಪದ ನೀಡಿಲ್ಲ ಎಂದು ವಿಪಕ್ಷಗಳ ಆರೋಪವನ್ನು ನಿರಾಕರಿಸಿ, ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಈ ಕುರಿತು ಸ್ಪಷ್ಟನೆ ನೀಡಿದರು.
ಮುಡಾ ಹಗರಣದ ಸಂಬಂಧ ಶಾಸಕರು ಮಂಡಿಸಿದ ನಿಲುವಳಿ ಸೂಚನೆಗೆ ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ನೀಡಲಾಗಲ್ಲ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 62(7)ರ ಪ್ರಕಾರ ‘ನಿಲುವಳಿ ಸೂಚನೆಯು ಭಾರತದ ಯಾವುದೇ ಭಾಗದಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿರುವ ಯಾವುದೇ ವಿಷಯಕ್ಕೆ ಸಂಬಂಧಿಸಿ ಇರಬಾರದು’ ಎಂದು ಹೇಳುತ್ತದೆ.ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 63ರ ಪ್ರಕಾರ ‘ನ್ಯಾಯಾಧಿಕರಣಗಳು, ಆಯೋಗಗಳು ಮುಂತಾದವುಗಳ ಮುಂದಿರುವ ವಿಷಯಗಳ ಕುರಿತು ಚರ್ಚಿಸಲು ನಿಲುವಳಿ ಸೂಚನೆ ತರುವುದು, ಯಾವುದೇ ನ್ಯಾಯಿಕ ಅಥವಾ ನ್ಯಾಯಿಕ ಸ್ವರೂಪದ ಪ್ರಕಾರಗಳನ್ನು ನಿರ್ವಹಿಸುತ್ತಿರುವ ಶಾಸನಬದ್ಧ ನ್ಯಾಯಾಧಿಕರಣ ಅಥವಾ ಶಾಸನ ಪ್ರಾಧಿಕಾರದ ಮುಂದೆ ಅಥವಾ ಯಾವುದೇ ವಿಷಯದ ವಿಚಾರಣೆ, ತನಿಖೆ ನಡೆಸಲು ಆಯೋಗ ಅಥವಾ ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಇರುವ ವಿಷಯದ ಕುರಿತು ಚರ್ಚಿಸಲು ಸೂಚನೆಯನ್ನು ತರಲು ಅವಕಾಶವನ್ನು ಕೊಡಬಾರದು’ ಎಂದಿದೆ. ಸರ್ಕಾರ ಚರ್ಚೆಗೆ ಸಿದ್ದವಿದ್ದರೂ, ಸಿದ್ದವಿಲ್ಲದಿದ್ದರೂ ನಿಯಮಾವಳಿಗಳನ್ನು ಮುರಿಯುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. ಮುಡಾ ಹಗರಣದ ತನಿಖೆಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರ ಆಯೋಗವನ್ನು ರಚನೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ಸ್ಪೀಕರ್ ಪೀಠಕ್ಕೆ ನೀಡಿದೆ. ಸದನದಲ್ಲಿ ವಿಷಯ ಚರ್ಚೆಯಾದರೆ ನ್ಯಾಯಾಧಿಕರಣ, ಆಯೋಗದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಯೋಗದ ಎದುರು ನಿಮ್ಮ ಹೇಳಿಕೆ ನೀಡಬಹುದು ಎಂದು ಹೇಳಿದ್ದೆ ಎಂದು ಸ್ಪೀಕರ್ ಖಾದರ್ ತನ್ನ ನಿಲುವು ಸಮರ್ಥಿಸಿಕೊಂಡರು.ಸದನದ ಎಲ್ಲ ಸದಸ್ಯರಿಗೂ ಕಲಾಪದಲ್ಲಿ ಮಾತನಾಡುವ ಮುಕ್ತ ಅವಕಾಶ ಇದೆ. ಕಾನೂನು ರಚಿಸುವ ಹುದ್ದೆಯಲ್ಲಿರುವ ವಿಧಾನಸಭಾ ಸದಸ್ಯರು ನಿಯಮ ಮೀರಿ ಚರ್ಚಿಸುವ ಕೆಟ್ಟ ಪರಂಪರೆ ಹುಟ್ಟು ಹಾಕಬಾರದು. ಯಾವುದೇ ನ್ಯಾಯ ಪ್ರಕ್ರಿಯೆ ಕಾನೂನು, ನಿಯಮ ಬದ್ಧವಾಗಿಯೇ ನಡೆಯಬೇಕು. ಜನರು ಬಯಸುತ್ತಾರೆ ಎಂದೋ, ಬಹುಮತ ಇದೆಯೆಂದೋ ನಿಯಮಾವಳಿ, ಕಾನೂನು ಮೀರಬಾರದು ಎಂಬ ಪ್ರಜ್ಞೆ ನಮಗಿರಬೇಕು ಎಂದರು.
ವಿಧಾನಸಭಾ ಅಧ್ಯಕ್ಷರ ಪೀಠ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳಲ್ಲಿ ಒಂದು. ನಿಯಮ ಮೀರುವುದು ಮುಂದಿನ ಪೀಳಿಗೆಗೆ ಕೆಟ್ಟ ಪರಂಪರೆ ಹಾಕಿಕೊಟ್ಟಂತಾಗುತ್ತದೆ. ಅದು ಮುಂದುವರಿಯಬಾರದು ಎಂದು ಚರ್ಚೆಗೆ ಆಸ್ಪದ ನೀಡಿಲ್ಲ ಎಂದರು.ವಿಧಾನಸಭೆ ಡಿಜಿಟಲೀಕರಣ:
ವಿಧಾನಸಭೆಯ ಕಡತ ಸೇರಿದಂತೆ ಎಲ್ಲವನ್ನೂ ಡಿಜಿಟಲೀಕರಣಗೊಳಿಸುವ ಇರಾದೆ ಇದೆ. ಇದಕ್ಕಾಗಿ ದೇಶಾದ್ಯಂತ ಇರುವಂತೆ ಸಮಾನ ಅಪ್ಲಿಕೇಷನ್ ಬದಲು ಇಲ್ಲಿಗೆ ಪ್ರತ್ಯೇಕ ಅಪ್ಲಿಕೇಷನ್ ಹೊಂದಬೇಕು. ಅದಕ್ಕಾಗಿ ಐಟಿ ಸೇರಿದಂತೆ ವಿವಿಧ ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿ ಸಭೆ ನಡೆಸಿ ಶೀಘ್ರವೇ ವರದಿ ನೀಡಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.ವಿಧಾನಸಭಾ ಕಲಾಪಕ್ಕೆ ಹಾಜರಾಗುವ ಹಾಗೂ ನಿರ್ಗಮಿಸುವ ಸಮಯವನ್ನು ಇನ್ನು ಕರಾರುವಕ್ಕಾಗಿ ಕಂಡುಕೊಳ್ಳಲು ಸಾಧ್ಯ. ಅದಕ್ಕಾಗಿ ಕೃತಕಬುದ್ಧಿಮತ್ತೆಯ(ಎಐ) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ನನ್ನ ಸಹಿತ ಶಾಸಕರು, ಸಚಿವರು ಕಲಾಪದಲ್ಲಿ ಭಾಗಿಯಾದ ಸಮಯವನ್ನು ತಿಳಿದುಕೊಳ್ಳುವುದು ಸುಲಭವಾಗಲಿದೆ ಎಂದರು.
ನೀಟ್ ಬಿಕ್ಕಟ್ಟು:ಈಗ ನೀಟ್ ಪರೀಕ್ಷೆ ಗೊಂದಲ ಹುಟ್ಟುಹಾಕಿದ್ದು, ಇದಕ್ಕೆ ಪರ್ಯಾಯವಾಗಿ ಕರ್ನಾಟಕದಲ್ಲೇ ನೀಟ್ ಪರೀಕ್ಷೆಯ ಬಗ್ಗೆ ಸರ್ಕಾರ ನಿರ್ಣಯ ಕೈಗೊಂಡಿದೆ. ನೀಟ್ ವ್ಯವಸ್ಥೆ ದೇಶದಲ್ಲಿ ಇರುವಾಗ ರಾಜ್ಯದಲ್ಲಿ ಪ್ರತ್ಯೇಕ ನೀಟ್ ಪರೀಕ್ಷೆ ಸಾಧ್ಯವೇ ಎಂಬುದು ಗೊತ್ತಿಲ್ಲ. ಸರ್ಕಾರ ಈಗಾಗಲೇ ನೀಟ್ ಬಗ್ಗೆ ಕೈಗೊಂಡ ನಿರ್ಣಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಕಳುಹಿಸಿದೆ. ಕೇಂದ್ರ ಸರ್ಕಾರ ಯಾವ ಉತ್ತರ ನೀಡುತ್ತದೆ ಎಂದು ಕಾದು ನೋಡಬೇಕು ಎಂದರು.
ತುಳು ರಾಜ್ಯ ಭಾಷೆಗಾಗಿ ಸಮಿತಿ ರಚನೆ:ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಹಾಗೂ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯ ಮಾಡುವ ಬಗ್ಗೆ ಪ್ರಕ್ರಿಯೆಗಳು ಆರಂಭವಾಗಿದೆ. ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ರಾಜ್ಯಭಾಷೆಯಾಗಿ ಘೋಷಣೆ ಮಾಡಿದ್ದಾರೆ ಎಂಬ ಬಗ್ಗೆ ಅಧ್ಯಯನ ನಡೆಸಿ ಸಮಿತಿ ವರದಿ ಸಲ್ಲಿಸಲಿದೆ ಎಂದರು.
.........................ಪೀಠದ ಎದುರು ಫೋಟೋಗೆ ಸ್ಪೀಕರ್ ಸಮರ್ಥನೆ
ಸ್ಪೀಕರ್ ಪೀಠದ ಸಮೀಪ ನಿಂತುಕೊಂಡು ಮಂಗಳೂರಿನ ಮಾಜಿ ಮೇಯರ್ ಹಾಗೂ ಪಾಲಿಕೆ ಸದಸ್ಯರೊಬ್ಬರು ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇದು ಕಲಾಪ ನಡೆಯದ ಸಮಯದಲ್ಲಿ ರಾತ್ರಿ ವೇಳೆ ತೆಗೆದ ಫೋಟೋ. ಅಧಿವೇಶನ ಶುರುವಾಗುವ ಮೊದಲು ನಾನು ರಾತ್ರಿ ಸಿದ್ಧತೆ ವೀಕ್ಷಿಸಲು ತೆರಳಿದಾಗ ಅವರೂ ಬಂದಿದ್ದರು. ಆಗ ಫೋಟೋ ತೆಗೆಸಿಕೊಂಡಿದ್ದಾರೆ. ಅಧಿವೇಶನ ಇಲ್ಲದ ವೇಳೆ ಹೀಗೆ ಫೋಟೋ ತೆಗೆಸಿಕೊಳ್ಳುವುದರಿಂದ ಪೀಠಕ್ಕೆ ಅಗೌರವ ತೋರಿಸಿದಂತಾಗುವುದಿಲ್ಲ. ಬೇರೆ ಬೇರೆ ನಿಯೋಗಗಳು ಭೇಟಿ ನೀಡಿದಾಗ ಹೀಗೆಯೇ ಫೋಟೋ ತೆಗೆಸಿಕೊಂಡದ್ದು ಇದೆ ಎಂದು ಖಾದರ್ ಸಮರ್ಥಿಸಿದರು.