ಸಾರಾಂಶ
ಸುರೇಶ ಯಳಕಪ್ಪನವರ
ಹಗರಿಬೊಮ್ಮನಹಳ್ಳಿ: ತಾಲೂಕಿನಾದ್ಯಂತ ಹಿಂಗಾರು ಮಳೆಗಳ ಆರ್ಭಟದಿಂದ ಒಕ್ಕಣೆಗೆ ಬಂದ ಈರುಳ್ಳಿ ಬೆಳೆ ಕೊಳೆಯಲು ಆರಂಭಿಸಿದ್ದು, ಬೆಳೆಗಾರರು ನಷ್ಟಕ್ಕೆ ತುತ್ತಾಗಿದ್ದಾರೆ.ತಾಲೂಕಿನ ಕಿತ್ನೂರು, ಮುತ್ಕೂರು, ಬನ್ನಿಗೋಳ, ತಂಬ್ರಹಳ್ಳಿ ಮತ್ತಿತರ ಗ್ರಾಮಗಳ ಈರುಳ್ಳಿ ಬೆಳೆಗಾರರು ಒಕ್ಕಣೆಯಲ್ಲಿ ಒದ್ದಾಡುತ್ತಿದ್ದಾರೆ. ಪ್ರತಿ ಎಕರೆಗೂ ₹೩೫ರಿಂದ ₹೪೦ ಸಾವಿರ ಖರ್ಚು ಮಾಡಿಕೊಂಡು, ಹಾಕಿದ ಬಂಡವಾಳ ಕೈಗೆ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಬೆಳವಣಿಗೆ ಹಂತದಲ್ಲಿರುವ ಈರುಳ್ಳಿ ಬೆಳೆಗೆ ಕೊಳೆ ರೋಗದ ಆತಂಕ ಹೆಚ್ಚಾಗಿದೆ. ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದು, ಅತಿವೃಷ್ಟಿಯಿಂದಾಗಿ ಕೊಳೆ ರೋಗದ ಪರಿಣಾಮ ಬೆಳೆ ರೈತರ ಕೈಗೆಟುಕದಾಗಿದೆ.
ಈರುಳ್ಳಿ ತಿಪ್ಪೆ ಪಾಲು: ರೈತರು ಕಷ್ಟಪಟ್ಟು ಬೆಳೆದ ಈರುಳ್ಳಿ ಅತಿವೃಷ್ಟಿಯಿಂದಾಗಿ ಕಟಾವು ಹಂತದಲ್ಲಿ ಕೊಳೆತು ಹೋಗುತ್ತಿದೆ. ಕಟಾವು ಮಾಡಿದ ಈರುಳ್ಳಿ ಕೊಳೆತ ಪರಿಣಾಮ ರೈತರು ತಿಪ್ಪೆಗೆ ಚೆಲ್ಲುತ್ತಿದ್ದಾರೆ. ಎಕರೆಗೆ ೮೦ರಿಂದ ೧೦೦ ಚೀಲ ಇಳುವರಿ ಬರುತ್ತಿದ್ದು, ಅದರಲ್ಲಿ ಅರ್ಧದಷ್ಟು ಈರುಳ್ಳಿ ಅತಿವೃಷ್ಟಿಯಿಂದಾಗಿ ಕೆಟ್ಟು ಹೋಗಿವೆ. ಇಂತಹ ಈರುಳ್ಳಿಯನ್ನು ಖರೀದಿದಾರರು ಕಡಿಮೆ ದರದಲ್ಲಿ ಖರೀದಿಸುತ್ತಿದ್ದಾರೆ. ಕೊಳೆರೋಗ ನಿಯಂತ್ರಣಕ್ಕೆ ಬೆಳೆಗಾರರು ವಿವಿಧ ಔಷಧಿಗಳನ್ನು ಸಿಂಪರಣೆ ಮಾಡಿದರೂ ಸಾರ್ಥಕವಿಲ್ಲದಂತಾಗಿದೆ. ಈರುಳ್ಳಿ ಬೆಳೆನಷ್ಟ ಕುರಿತು ಕಿತ್ನೂರು ರೈತರು ಕಂದಾಯ, ತೋಟಗಾರಿಕೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ ಇಲಾಖೆ ಅಧಿಕಾರಿಗಳು ಬೆಳೆಹಾನಿ ಪರಿಶೀಲನೆಗೆ ಆಸಕ್ತಿ ತೋರಿಸುತ್ತಿಲ್ಲ. ಎರಡು ಇಲಾಖೆಯವರು ತಮ್ಮ ಸಹಾಯಕರನ್ನು ರೈತರ ಹೊಲಗಳಿಗೆ ಕಳುಹಿಸಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಳೆದ ಮೂರು ನಾಲ್ಕು ವರ್ಷಗಳಿಂದ ಈರುಳ್ಳಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದು, ಅವರ ಸಾಲ ಬ್ಯಾಂಕಿನಲ್ಲಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸುವಲ್ಲಿ ವಿಫಲವಾಗಿವೆ. ಈರುಳ್ಳಿ ಬೆಳೆಗಾರರು ಅರ್ಜಿ ಹಿಡಿದು ಕಚೇರಿಗಳನ್ನು ಅಲೆದಾಡುವಂತಾಗಿದೆ.
ಭೂಮಿ ಸತ್ವ ಕುಸಿದಿದೆ: ರೈತರು ಬೆಳೆಗಳಿಗೆ ಅತಿಯಾದ ರಾಸಾಯನಿಕ ಔಷಧಿಗಳನ್ನು ಸಿಂಪರಣೆ ಮಾಡುತ್ತಿರುವುದರಿಂದ ಭೂಮಿ ವಿಷಕಾರಿಯಾಗುತ್ತಿದೆ. ಐದಾರು ವರ್ಷಗಳಿಂದ ಈರುಳ್ಳಿ ಬೆಳೆಗೆ ಕೊಳೆರೋಗದ ಆತಂಕ ಕಾಡುತ್ತಿದೆ. ಕೃಷಿತಜ್ಞರು ರೈತರಿಗೆ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಹವಾಮಾನ ವೈಪರಿತ್ಯದಿಂದಾಗಿ ಪ್ರತಿ ವರ್ಷವೂ ರೈತರ ಬೆಳೆಗಳು ಕೈಕೊಡುತ್ತಿದೆ ಎಂದು ರೈತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.ಈರುಳ್ಳಿಗೆ ₹೪ ಸಾವಿರಕ್ಕಿಂತ ಹೆಚ್ಚು ಬೆಲೆ ಸಿಕ್ಕಾಗ ಮಾತ್ರ ಲಾಭವಾಗುತ್ತದೆ. ಈರುಳ್ಳಿಗೆ ವಿಮೆ ಮೊತ್ತವನ್ನು ಎಕರೆಗೆ ₹೩೧೫೬ ಕಟ್ಟಲಾಗಿದೆ. ಆದರೆ, ವಿಮೆ ಕಂಪನಿಗಳು ಬೆಳೆ ನಷ್ಟವಾದರೂ ಕಡಿಮೆ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿವೆ. ರೈತರ ದುಸ್ಥಿತಿ ಕುರಿತು ಅಧಿಕಾರಿಗಳು ಸರ್ಕಾರಕ್ಕೆ ಸಮರ್ಪಕ ವರದಿ ಕೊಟ್ಟಾಗ ಮಾತ್ರ ನ್ಯಾಯಯುತ ಪರಿಹಾರ ಸಿಗಲು ಸಾಧ್ಯ ಎಂದು ಬನ್ನಿಗೋಳದ ರೈತ ಮುಖಂಡ ಮೈನಳ್ಳಿ ಕೊಟ್ರೇಶಪ್ಪ ಹೇಳಿದರು.ಜಿಟಿಜಿಟಿ ಮಳೆಯಿಂದಾಗಿ ಒಕ್ಕಣೆಗೆ ಬಂದಿರುವ ಈರುಳ್ಳಿ ಕೊಳೆಯುತ್ತಿವೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರಸ್ತುತ ಹೊಲದಲ್ಲಿರುವ ಈರುಳ್ಳಿಗೆ ಮಾತ್ರ ಪರಿಹಾರದ ಭರವಸೆ ನೀಡಿದ್ದಾರೆ. ಈಗಾಗಲೇ ಕಟಾವು ಮಾಡಿ ಕೊಳೆತು ಹೋಗಿರುವ ಈರುಳ್ಳಿಗೆ ಪರಿಹಾರ ಕಷ್ಟ ಎಂದು ಅಧಿಕಾರಿಗಳು ಹೇಳುತ್ತಿರುವುದು ಬೇಸರ ತರಿಸಿದೆ. ಕಂದಾಯ ಇಲಾಖೆಗೆ ರೈತರು ಪರಿಹಾರಕ್ಕೆ ಅರ್ಜಿ ಹಿಡಿದುಕೊಂಡು ಹೋದರೆ, ತೋಟಗಾರಿಕೆ ಇಲಾಖೆಗೆ ಅರ್ಜಿಕೊಡಿ ಎಂದು ಹೇಳುತ್ತಾರೆ. ನಾವು ಯಾರ ಬಳಿ ಪರಿಹಾರ ಕೇಳಬೇಕು ಎಂಬುದೇ ಗೊತ್ತಾಗ್ತಿಲ್ಲ ಎಂದು ಕಿತ್ನೂರು ಗ್ರಾಮದ ಈರುಳ್ಳಿ ಬೆಳೆಗಾರರಾದ ಪಿ. ಹುಲಿಗೆಮ್ಮ, ಬಿ. ಸೋಮಪ್ಪ, ಬಿ. ಜಯಮ್ಮ ಹೇಳಿದರು.