ಕುಲಾಂತರಿಗೆ ವಿರೋಧ: 29ರಿಂದ ಸತ್ಯಾಗ್ರಹ

| Published : Sep 27 2024, 01:25 AM IST

ಸಾರಾಂಶ

ತುಮಕೂರು: ಮನುಷ್ಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯಿಂದ ಹಿಂದೆ ಸರಿಯಬೇಕು. ರಾಷ್ಟ್ರೀಯ ನೀತಿ ರೂಪಿಸುವ ವೇಳೆ ರೈತರು, ಕೃಷಿತಜ್ಞರು, ರೈತಪ್ರತಿನಿಧಿಗಳು ಹಾಗೂ ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸಿ ನೀತಿ ರೂಪಿಸುವಂತೆ ಒತ್ತಾಯಿಸಿ ಸೆಪ್ಟಂಬರ್ 29ರಿಂದ ಅಕ್ಟೋಬರ್ 2ವರಗೆ ನಾಲ್ಕು ದಿನಗಳ ಕಾಲ ದೊಡ್ಡಹೊಸೂರು ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನಿ ಡಾ.ಮಂಜುನಾಥ್ ತಿಳಿಸಿದ್ದಾರೆ.

ತುಮಕೂರು: ಮನುಷ್ಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯಿಂದ ಹಿಂದೆ ಸರಿಯಬೇಕು. ರಾಷ್ಟ್ರೀಯ ನೀತಿ ರೂಪಿಸುವ ವೇಳೆ ರೈತರು, ಕೃಷಿತಜ್ಞರು, ರೈತಪ್ರತಿನಿಧಿಗಳು ಹಾಗೂ ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸಿ ನೀತಿ ರೂಪಿಸುವಂತೆ ಒತ್ತಾಯಿಸಿ ಸೆಪ್ಟಂಬರ್ 29ರಿಂದ ಅಕ್ಟೋಬರ್ 2ವರಗೆ ನಾಲ್ಕು ದಿನಗಳ ಕಾಲ ದೊಡ್ಡಹೊಸೂರು ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನಿ ಡಾ.ಮಂಜುನಾಥ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಟಿ.ಹತ್ತಿ ಬಿತ್ತನೆಯಿಂದ ಕರ್ನಾಟಕದ ಹತ್ತಿಬೆಳೆಯವ ಪ್ರದೇಶಗಳ ಮೇಲಾದ ದುಷ್ಪರಿಣಾಮಗಳು ಚಿತ್ರಣ ನಮ್ಮ ಮುಂದಿದೆ. 20 ವರ್ಷಗಳಲ್ಲಿ ಮಣ್ಣಿನ ಫಲವತ್ತತೆಯ ಜೊತೆಗೆ, ಜೀವ ವೈವಿಧ್ಯತೆ ಗಳನ್ನು ಕಳೆದುಕೊಂಡಿದ್ದೇವೆ. ಇದೇ ಪರಿಸ್ಥಿತಿ ರಾಜ್ಯದ ಇತರೆ ಭಾಗಗಗಳಲ್ಲಿಯೂ ತಲೆದೊರದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ತುಮಕೂರಿನ ಸಮೀಪದ ದೊಡ್ಡ ಹೊಸೂರು ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಬೇರ್ಸೋ ಕಂಪನಿ ಮತ್ತು ಬಿಲ್‌ಗೇಟ್ಸ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿರುವ ಕೆಲಸ ಕಾರ್ಯಕ್ರಮಗಳ ಒಕ್ಕೂಟ ಸರಕಾರ ಕುಲಾಂತರಿ ತಳಿಗಳ ಬೆಳೆಗಳನ್ನು ನಮ್ಮ ದೇಶದಲ್ಲಿ ಜಾರಿಗೆ ತರಲು ಹೊರಟಿದೆ. ಒಂದು ವೇಳೆ ಇದು ಜಾರಿಗೆ ಬಂದರೆ, ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಬೆಳೆಯುವ ವಿವಿಧ ಬೆಳೆಗಳು ಕೈಬಿಟ್ಟು ಹೋಗಲಿದೆ. ಕಂಪನಿಗಳು ನೀಡುವ ಬೆಳೆಗಳನ್ನು ಮಾತ್ರ ಬೆಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಇದು ದೊಡ್ಡ ಬೀಜದ ಕಂಪನಿಗಳಿಗೆ ಲಾಭ ಮಾಡಿ ಕೊಟ್ಟರೆ, ರೈತರಿಗೆ ತುಂಬ ನಷ್ಟವಾಗಲಿದೆ ಎಂದರು.ದೊಡ್ಡ ಹೊಸೂರಿನಲ್ಲಿ ಸೆಪ್ಟಂಬರ್ 29ರಿಂದ ಅಕ್ಟೋಬರ್ 2ರವರಗೆ ನಡೆಯುವ ದೊಡ್ಡ ಹೊಸೂರು ಸತ್ಯಾಗ್ರಹಕ್ಕೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳು ಚಾಲನೆ ನೀಡುವರು. ಗೃಹ, ಕೃಷಿ, ಇತರೆ ಇಲಾಖೆಗಳ ಮಂತ್ರಿಗಳು, ಶಾಸಕರು, ಸಂಸದರು, ಹಿರಿಯ ಕೃಷಿ ವಿಜ್ಞಾನಿಗಳು, ರೈತ ಹೋರಾಟಗಾರರು ಆಗಮಿಸಲಿದ್ದಾರೆ. ಕುಲಾಂತರಿ ನೀತಿಯನ್ನು ಒಕ್ಕೂಟ ಸರಕಾರ ಹಿಂಪಡೆಯಬೇಕು. ಕರ್ನಾಟಕವನ್ನು ಕುಲಾಂತರಿ ಮುಕ್ತ ರಾಜ್ಯ ಎಂದು ಘೋಷಿಸಬೇಕು. ಭಾರತೀಯ ಕೃಷಿ ಅನುಸಂದಾನ ಪರಿಷತ್ ಮತ್ತು ಬೇಯರ್ ಕಂಪನಿ ನಡುವೆ ಆಗಿರುವ ಒಪ್ಪಂದವನ್ನು ರದ್ದು ಪಡಿಸಬೇಕು.ದೇಶ ಒಳಗೆ ಮತ್ತು ಹೊರಗೆ ಕುಲಾಂತರಿ ಸಂಬಂಧಿತ ತಂತ್ರಜ್ಞಾನಕ್ಕೆ ಧನ ಸಹಾಯಕವನ್ನು ನಿಲ್ಲಿಸಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.

ಕಿಸಾನ್ ಸಂಯುಕ್ತ ಹೋರಾಟದ ಸಿ.ಯತಿರಾಜು ಮಾತನಾಡಿ, ಕೃಷಿ ಎಂಬುದು ರಾಜ್ಯವಲಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಆದರೆ ಒಕ್ಕೂಟ ಸರಕಾರ ದೊಡ್ಡ ದೊಡ್ಡ ಉದ್ದಿಮೆಗಳಿಗೆ ಭಾರತ ಶೇ.70 ಜನರ ದುಡಿಮೆಯ ಮೂಲವಾಗಿರುವ ಕೃಷಿಯನ್ನು ವಹಿಸಲು ತರಾತುರಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಮಾನವ ಸಂತತಿಯ ಮೇಲೆ ದುಷ್ಪರಿಣಾಮ ಬೀರುವಂತಹ ಕುಲಾಂತರಿ ತಳಿಗಳನ್ನು ನಿಲ್ಲಿಸಬೇಕೆಂಬುದು ಹತ್ತಾರು ವರ್ಷಗಳ ಬೇಡಿಕೆ. ಆದರೆ ಸುಪ್ರೀಂಕೋರ್ಟ್‌ ಮೂಲಕ ಒಕ್ಕೂಟ ಸರಕಾರ ನಮ್ಮ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪನಿಗಳು ಸವಾರಿ ಮಾಡುವ ಅವಕಾಶವನ್ನು ಈ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯ ಮೂಲಕ ಮಾಡಲು ಹೊರಟಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಉಮೇಶ್, ಎಐಕೆಕೆಎಂಎಸ್‌ನ ಕಂಬೇಗೌಡ, ರವೀಶ್ ಮತ್ತಿತರರು ಪಾಲ್ಗೊಂಡಿದ್ದರು.

ಕುಲಾಂತರಿ ಬೀಜಗಳ ರಾಷ್ಟ್ರೀಯ ನೀತಿ ರೂಪಿಸುವ ವೇಳೆ ರೈತರಾಗಲಿ, ಕೃಷಿ ತಜ್ಞರೊಂದಿಗೆ ಆಗಲಿ ಚರ್ಚೆ ಮಾಡದೆ, ಸುಪ್ರಿಂಕೋರ್ಟ್‌ ನಿರ್ದೇಶನದಂತೆ ನಿಯಮ ರೂಪಿಸಿ, ಜಾರಿಗೆ ತರಲು ಹೊರಟಿದೆ.

- ಡಾ. ಮಂಜುನಾಥ್‌ ಕೃಷಿ ವಿಜ್ಞಾನಿ.