ಬಿಸಿಲಿನ ಬೇಗೆಗೆ ಬಸವಳಿದ ಜನ

| Published : Mar 22 2024, 01:09 AM IST

ಸಾರಾಂಶ

ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚಿದೆ. ರಣ ರಣ ಬಿಸಿಲಿಗೆ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ. ಮಹಾಲಿಂಗಪುರ ತಾಲೂಕಿನಲ್ಲಿ ಬಿಸಿಲಿನ ಶಾಖಕ್ಕೆ ಹೈರಾಣಾಗುತ್ತಿದ್ದಾರೆ. ಏಪ್ರಿಲ್‌, ಮೇ ತಿಂಗಳಿನಲ್ಲಿ ಬಿಸಿಲು ಹೇಗಿರಬಹುದು ಎಂದು ಈಗಲೇ ಆತಂಕಗೊಳ್ಳುವಂತಾಗಿದೆ. ಇದರಿಂದಾಗಿ ಮನುಷ್ಯನನ್ನು ಅದು ನಿತ್ರಾಣಗೊಳಿಸುತ್ತದೆ. ಆದ್ದರಿಂದ ಬಿಸಿಲಿಗೆ ಹೆದರಿ ಜನರು ಕಲ್ಲಂಗಡಿ, ಮಜ್ಜಿಗೆಯಂತಹ ವಿವಿಧ ತಂಪು ಪಾನೀಯಗಳತ್ತ ಮೊರೆ ಹೋಗುತ್ತಿದ್ದಾರೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚಿದೆ. ರಣ ರಣ ಬಿಸಿಲಿಗೆ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ. ಮಹಾಲಿಂಗಪುರ ತಾಲೂಕಿನಲ್ಲಿ ಬಿಸಿಲಿನ ಶಾಖಕ್ಕೆ ಹೈರಾಣಾಗುತ್ತಿದ್ದಾರೆ. ಏಪ್ರಿಲ್‌, ಮೇ ತಿಂಗಳಿನಲ್ಲಿ ಬಿಸಿಲು ಹೇಗಿರಬಹುದು ಎಂದು ಈಗಲೇ ಆತಂಕಗೊಳ್ಳುವಂತಾಗಿದೆ. ಇದರಿಂದಾಗಿ ಮನುಷ್ಯನನ್ನು ಅದು ನಿತ್ರಾಣಗೊಳಿಸುತ್ತದೆ. ಆದ್ದರಿಂದ ಬಿಸಿಲಿಗೆ ಹೆದರಿ ಜನರು ಕಲ್ಲಂಗಡಿ, ಮಜ್ಜಿಗೆಯಂತಹ ವಿವಿಧ ತಂಪು ಪಾನೀಯಗಳತ್ತ ಮೊರೆ ಹೋಗುತ್ತಿದ್ದಾರೆ.

ಬಿಸಿಲು ಎಂತಹ ಕ್ರಿಯಾಶೀಲರನ್ನೂ ಆಯಾಸಗೊಳ್ಳುವಂತೆ ಮಾಡುತ್ತದೆ. ಅದರ ಝಳದ ತಿವ್ರತೆಗೆ ಜೀವಸೆಲೆಗಳೇ ಬತ್ತುತ್ತವೆ. ಕುಳಿತರೂ ನಿಂತರೂ ಸಮಾಧಾನವಾಗದ ಈ ಬಿಸಿಲಿಗೆ ಚಡಪಡಿಸದ ಜೀವಗಳಿಲ್ಲ. ವರ್ಷದಿಂದ ವರ್ಷಕ್ಕೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದೆ.

ಬರಗಾಲದ ವ್ಯಾಪಕತೆ ಮತ್ತು ಮಳೆಯ ಪ್ರಮಾಣದಲ್ಲಿ ಇಳಿಮುಖ ಇವೆರಡೂ ಸಂಗತಿಗಳು ಜಗತ್ತನ್ನು ಹಾಗೆ ಮುಟ್ಟಿದರೆ ಸಾಕು ಚುರ್‌ ಎನ್ನುವಂತೆ ಮಾಡುತ್ತಿವೆ. ಇದರಿಂದ ಬೆಸತ್ತ ಜನ, ಗಿಡದ ನೆರಳು, ಎಳೆ ನೀರು, ಕಲ್ಲಂಗಡಿ, ಅರವಟಿಗೆ, ಮಜ್ಜಿಗೆಗೆ ಮೊರೆ ಹೋಗುವ ದ್ರಶ್ಯ ಸರ್ವೆ ಸಾಮಾನ್ಯ ಆಗಿವೆ.

40 ಡಿಗ್ರಿ ತಾಪಮಾನ: ಮಹಾಲಿಂಗಪುರ ಪಟ್ಟಣಕ್ಕೂ ಬಿಸಿಲಿನ ತಾಪ ತಟ್ಟುತ್ತಿದೆ. ಇಲ್ಲಿ ಸುತ್ತ ಮುತ್ತಲು ಹಚ್ಚ ಹಸಿರು ತುಂಬಿದೆ. ಸುತ್ತಲೂ ನದಿಗಳು ಹರಿಯುತ್ತವೆ. ಉತ್ತರಕ್ಕೆ 12 ಕಿ.ಮೀ ಅಂತರದಲ್ಲಿ ಕೃಷ್ಣಾ ನದಿ, ದಕ್ಷಿಣಕ್ಕೆ 7 ಕಿ.ಮೀ ಅಂತರದಲ್ಲಿ ಘಟಪ್ರಭಾ ನದಿ ಹಾಗೂ ಸುತ್ತಲೂ ಕೆನಾಲ ನೀರಾವರಿ ಇದೆ. ಇಷ್ಟೆಲ್ಲ ಇದ್ದರೂ ಇಲ್ಲಿ ಬೆಳಗ್ಗೆ 11 ಗಂಟೆಯಾದರೆ ಸಾಕು ಬಿಸಿಲಿನ ತಾಪ 38 ಡಿಗ್ರಿಯಿಂದ 40 ರ ಆಸುಪಾಸು ಏರುತ್ತದೆ. ಸೂರ್ಯನ ಪ್ರಖರತೆ ಜನರನ್ನು ಹೈರಾಣಾಗುವಂತೆ ಮಾಡುತ್ತದೆ. ಸಂಜೆ 6 ಗಂಟೆಯಾದರೂ ತಾಪ ಕಡಿಮೆಯಾಗುವುದಿಲ್ಲ.

ತಂಪು ಪಾನೀಯಗಳಿಗೆ ಬೇಡಿಕೆ:

ಬಿಸಿಲಿನ ಬೇಗೆಯಿಂದ ಬಸವಳಿಯುತ್ತಿರುವ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಪರಿಣಾಮ ಕಲ್ಲಂಗಡಿ ಹಾಗೂ ಎಳನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆ ಹೆಚ್ಚುತ್ತಿದ್ದಂತೆ ಕಲ್ಲಂಗಡಿ ಬೆಲೆ ಗಗನಕ್ಕೆ ಏರಿದೆ. ಕಲ್ಲಂಗಡಿ ಹಣ್ಣು ಕೆ.ಜಿಗೆ ₹20 ಇದೆ. ಒಂದು ಎಳೆ ನೀರಿಗೆ ₹25 - ₹30 ಇದೆ. ಅದೇ ರೀತಿ, ಮಜ್ಜಿಗೆ, ಲಸ್ಸಿಗೆ ಬೇಡಿಕೆ ಬಂದಿದೆ.

ಅತಿಯಾಗಿ ಹೆಚ್ಚುತ್ತಿರುವ ಬಿಸಿಲಿಗೆ ಜನ ನೀರಡಿಸಿ ನಮ್ಮ ಕಲ್ಲಂಗಡಿ ಅಂಗಡಿಗೆ ಮುಗಿಬೀಳುತ್ತಿದ್ದಾರೆ. ಆದರೆ, ಕಲ್ಲಂಗಡಿ ಬೆಲೆ ಕುಸಿದಿದೆ. ಇದರಿಂದ ವ್ಯಾಪಾರ ಹೆಚ್ಚುತ್ತಿದೆ. ಜನರಿಗೆ ನಾವು ಒಂದು ಪೂರ್ತಿ ಹಣ್ಣು ₹60 ರಿಂದ ₹80 ವರೆಗೆ ಹಾಗೂ ಒಂದು ಪ್ಲೇಟ್‌ಗೆ ಕೇವಲ ₹10 ರಿಂದ ₹15 ಮಾರಾಟ ಮಾಡುತ್ತಿದ್ದೇವೆ. ಇದರಿಂದ ನಮ್ಮ ವ್ಯಾಪಾರ ಚನ್ನಾಗಿದೆ.

- ಮೆಹಬೂಬಸಾಬ್‌ ಭಾಗವಾನ, ಹಣ್ಣಿನ ವ್ಯಾಪಾರಿ. ಬಿಸಿಲು ಹೆಚ್ಚಿಗಿರುವುದರಿಂದ ಹೊರಗಡೆ ತಿರುಗಾಡುವುದು ಕಡಿಮೆಯಾಗಿದೆ. ಅದರಲ್ಲು ಮಧ್ಯಾಹ್ನ ಮಾತ್ರ ಬಾಯಾರಿಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಸೂರ್ಯನ ಜಳದಿಂದ ಪಾರಾಗಲು ಕಲ್ಲಂಗಡಿ, ಏಳೆನೀರು, ಹಣ್ಣಿನ ರಸಗಳನ್ನು ಕುಡಿಯುವುದು ಅನಿವಾರ್ಯ ಆಗಿದೆ.

- ಶಿವಲಿಂಗ ಘಂಟಿ,

ಪುರಸಭೆ ಮಾಜಿ ಸದಸ್ಯ.