‘ಪೋಡಿ ಮುಕ್ತ ಗ್ರಾಮ’ ಪೈಲಟ್ ಕಾರ್ಯಕ್ರಮ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

| Published : Aug 14 2024, 01:07 AM IST

‘ಪೋಡಿ ಮುಕ್ತ ಗ್ರಾಮ’ ಪೈಲಟ್ ಕಾರ್ಯಕ್ರಮ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ರೈತರ ಜೊತೆಗಿನ ಜಿಲ್ಲಾ ಮಟ್ಟದ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ.ಜಿಲ್ಲೆಯನ್ನು ಪೋಡಿ(ಅಳತೆ) ಮುಕ್ತವಾಗಿ ಮಾಡುವ ದಿಶೆಯಲ್ಲಿ ಶೀಘ್ರವೇ ಒಂದು ಗ್ರಾಮವನ್ನು ಪೈಲಟ್‌ ಆಗಿ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದ್ದಾರೆ.ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ರೈತರ ಜೊತೆಗಿನ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಸ್ತಿಗಳ ಕ್ರಮಬದ್ಧ ಅಳತೆ(ಪೋಡಿ)ಆಗುತ್ತಿಲ್ಲ. ಅನೇಕ ಅರ್ಜಿಗಳು ಬಾಕಿ ಉಳಿದಿವೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಸಭೆಯಲ್ಲಿ ಗಮನ ಸೆಳೆಯಲಾಯಿತು. ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಆಸ್ತಿಗಳ ಪ್ಲಾಟಿಂಗ್‌ ಆಗದಿರುವುದೇ ಜಿಲ್ಲೆಯ ದೊಡ್ಡ ಸಮಸ್ಯೆ. ಶೇ.90ರಷ್ಟು ಆಸ್ತಿಗಳು ಬಳುವಳಿಯಂದ ಬಂದಿರುತ್ತವೆ. ಇವುಗಳನ್ನು ಹಿಡುವಳಿದಾರರು ಅಳತೆ ಮಾಡಿಸದೆ ಬಾಕಿ ಇರಿಸಿದ್ದಾರೆ. ಒಮ್ಮೆ ಅಳತೆ ಮಾಡಿಸಿದರೆ ಮತ್ತೆ ಸಮಸ್ಯೆ ಆಗುವುದಿಲ್ಲ. ಕಳೆದ ಆರೇಳು ವರ್ಷಗಳಿಂದ ಸುಮಾರು 8 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಅದಕ್ಕಾಗಿ ಪ್ರಾಯೋಗಿಕ ನೆಲೆಯಲ್ಲಿ ಗ್ರಾಮವೊಂದನ್ನು ತೆಗೆದುಕೊಂಡು ಪೋಡಿ ಮುಕ್ತ ಗ್ರಾಮ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದಕ್ಕೆ ಅಗತ್ಯ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದರು.

ಶುಲ್ಕ ರಹಿತ ಆಧಾರ್‌ ಲಿಂಕ್‌:

ಕೃಷಿ ಪಂಪುಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಮಾಡಿಲ್ಲ. ಆದರೂ ಮೆಸ್ಕಾಂನವರು ಕೃಷಿ ಪಂಪ್‌ಸೆಟ್‌ ವಿದ್ಯುತ್‌ಗೆ ಆಧಾರ್‌ ಲಿಂಕ್‌ ಕಡ್ಡಾಯಗೊಳಿಸಿರುವುದಕ್ಕೆ ರೈತ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಆಧಾರ್‌ ಲಿಂಕ್‌ಗೆ 500 ರು. ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದರು. ಮಧ್ಯೆಪ್ರವೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಆಧಾರ್‌ ಲಿಂಕ್‌ಗೆ ಶುಲ್ಕ ವಸೂಲಿ ಅನಗತ್ಯ. ಕೆಇಆರ್‌ಸಿ ಸೂಚನೆ ಮೇರೆಗೆ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಬಳಕೆಯ ಪ್ರಮಾಣ ಅಂದಾಜಿಸಲು ಆಧಾರ್‌ ಲಿಂಕ್‌ ಕಡ್ಡಾಯ ಎಂದರು.

ಎಚ್‌ಟಿ ಲೈನ್‌ ಸಮಸ್ಯೆ:

ಉಡುಪಿಯ ಯುಪಿಸಿಎಲ್‌ನಿಂದ ಕಾಸರಗೋಡಿಗೆ 440 ಕೆ.ವಿ. ವಿದ್ಯುತ್‌ ಲೈನ್‌ ಅಳವಡಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ರೈತ ಮುಖಂಡರು ಪಟ್ಟುಹಿಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಇದು ಸರ್ಕಾರದ ಯೋಜನೆಯಾಗಿದ್ದು, ವಿರೋಧ ಸರಿಯಲ್ಲ. ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದರು. ಹಾಲಿ ಫಸಲು ಇರುವ ಜಾಗದಲ್ಲ ಲೈನ್‌ ಹಾದುಹೋಗುವುದಿದ್ದರೆ, ಈ ಕುರಿತು ಪರಿಹಾರಕ್ಕೆ ರೈತರ ಜೊತೆ ಯೋಜನಾ ಕಂಪನಿಯ ಪ್ರಮುಖರೊಂದಿಗೆ ಸಭೆ ನಡೆಸಲಾಗುವುದು ಎಂದು ಭರವೆಸ ನೀಡಿದರು.

ಕೋವಿ ನವೀಕರಣ ಸರಳಗೊಳಿಸಿ:

ಕಾಡು ಪ್ರಾಣಿ ಹಾವಳಿ ತಡೆಗೆ ಕೆಲವು ರೈತರಲ್ಲಿ ಕೋವಿ ಇದ್ದು, ಅದರ ಪರವಾನಿಗೆ ನವೀಕರಣಕ್ಕೆ ಕಠಿಣ ನಿಬಂಧನೆ ವಿಧಿಸಲಾಗಿದೆ. ಈ ಹಿಂದಿನಂತೆ ತಾಲೂಕು ಮಟ್ಟದಲ್ಲೇ ತಹಶೀಲ್ದಾರ್‌ರಿಂದ ನವೀಕರಣ ನಡೆಯುವಂತಾಗಬೇಕು. ಪ್ರಸಕ್ತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ನವೀಕರಣಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕೋವಿ ನವೀಕರಣ ಮಾಡಲಾಗುತ್ತದೆ. ಪ್ರಸಕ್ತ ನಿಯಮದಂತೆ ನವೀಕರಣವನ್ನೂ ಹೊಸ ಪರವಾನಿಗೆಯಡಿ ನೀಡಲಾಗುತ್ತದೆ. ಆದರೆ ಯಾವುದೇ ಹೊಸ ಪರವಾನಿಗೆ ನೀಡಲಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

ಸಮಸ್ಯೆ ಇತ್ಯರ್ಥಕ್ಕೆ ಗಡು:

ತುಂಬೆ ಡ್ಯಾಂ ಅಣೆಕಟ್ಟನ್ನು 4 ಮೀಟರ್‌ನಿಂದ 6 ಮೀಟರ್‌ವರೆಗೆ ಏರಿಕೆ ಮಾಡುವ ಸಂದರ್ಭ ಮುಳುಗಡೆಯಾಗುವ ಭೂಮಿಯ ಪರಿಹಾರ ಬಾಕಿ ಇರುವ ಸಂತ್ರಸ್ತರಿಗೆ ಪ್ರಕರಣವಾರು ಚರ್ಚಿಸಿ 15 ದಿನಗಳಲ್ಲಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತುಂಬೆ ಡ್ಯಾಂನ್ನು 4 ಮೀಟರ್‌ನಿಂದ 5 ಮೀಟರ್‌ವರೆಗೆ ಏರಿಸುವ ಸಂದರ್ಭದಲ್ಲಿ ಮುಳುಗಡೆಯಾದ ಭೂಮಿಯ ಕೆಲ ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡಲಾಗಿಲ್ಲ. ಮಹಿಳೆಯೊಬ್ಬರು ಕಳೆದ ಹಲವು ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಬಳಿಕ 2016ರಲ್ಲಿ ಅಂದಿನ ಜಿಲ್ಲಾಧಿಕಾರಿ ತುಂಬೆ ಡ್ಯಾಂನಿಂದ ಮುಳುಗಡೆಯಾಗುವ ಪ್ರದೇಶ ಮಾತ್ರವಲ್ಲದೆ ಒರತೆ ಪ್ರದೇಶವನ್ನು ಸೇರಿ ಪರಿಹಾರ ನೀಡುವಂತೆ ತಿಳಿಸಿದ್ದರೂ ಆದೇಶ ಪಾಲನೆಯಾಗಿಲ್ಲ ಎಂದು ರೈತ ಮುಖಂಡರು ಸಭೆಯಲ್ಲಿ ಜಿಲ್ಲಾಧಿಕಾರಿ ಗಮನ ಸೆಳೆದರು.

ರೈತ ಮುಖಂಡರಾದ ಶ್ರೀಧರ ಶೆಟ್ಟಿ ಬೈಲುಗುತ್ತು, ರವಿಕಿರಣ ಪುಣಚ, ಮನೋಹರ ಶೆಟ್ಟಿ, ಭಾರತೀಯ ಕಿಸಾನ್‌ ಸಂಘ ಪುತ್ತೂರು ಅಧ್ಯಕ್ಷ ಸುಬ್ರಾಯ ಶೆಟ್ಟಿ ಮತ್ತಿತರರು ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್‌ ಕುಮಾರ್‌, ಪುತ್ತೂರು ಸಹಾಯಕ ಕಮಿಷನರ್‌ ಜುಬಿನ್‌ ಮೊಹಪಾತ್ರಾ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಜಂಟಿ ಕೃಷಿ ನಿರ್ದೇಶಕ ಕೆಂಪೇ ಗೌಡ ಮತ್ತಿತರರಿದ್ದರು.

ಮಂಕಿ ಪಾರ್ಕ್ ರಚನೆಗೆ ಒತ್ತಾಯ

ದ.ಕ.ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳಲ್ಲಿ ಪದೇ ಪದೇ ಮಂಗನ ಹಾವಳಿ ವಿಪರೀತವಾಗುತ್ತಿದೆ. ಬೆಳೆಗಳೆಲ್ಲ ಮಂಗಳ ಪಾಲಾಗುತ್ತಿದ್ದು, ಈ ಬಗ್ಗೆ ರೈತರಿಗೆ ಪರಿಹಾರವೂ ಸಿಗುತ್ತಿಲ್ಲ. ಆದ್ದರಿಂದ ಮಂಕಿ ಪಾರ್ಕ್‌ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ನೆಟ್ಟಣದಲ್ಲಿ ಮಂಕಿ ಪಾರ್ಕ್‌ ಸ್ಥಾಪನೆಗೆ ಸ್ಥಳ ನಿಗದಿಪಡಿಸಲಾಗಿತ್ತು. ಬಳಿಕ ಅದು ನೆನೆಗುದಿಗೆ ಬಿದ್ದಿದೆ, ಅರಣ್ಯ ಇಲಾಖೆ ಕಾಡುಹಣ್ಣುಗಳನ್ನು ಬೆಳೆಸದೇ ಇರುವುದರಿಂದ ಮಂಗ ಮತ್ತಿತರ ಪ್ರಾಣಿಗಳು ನಾಡಿಗೆ ದಾಳಿ ಇಡುತ್ತಿವೆ. ಮಂಗನ ಉಪಟಳದಿಂದ ಬೆಳೆ ಹಾನಿಗೆ ಒಳಗಾದರೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಡಿಸಿಎಫ್‌ ಆ್ಯಂಟನಿ ಮರಿಯಪ್ಪ, ಬೆಳೆ ನಾಶವಾದರೆ ಮಾತ್ರ ಪರಿಹಾರಕ್ಕೆ ಅವಕಾಶ ಇದೆ. ಫಸಲು ಹಾನಿಯಾದರೆ ಪರಿಹಾರಕ್ಕೆ ಅವಕಾಶ ಇಲ್ಲ. ಇನ್ನೂ ಸೇರಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. ಮಂಕಿ ಪಾರ್ಕ್‌ ಸ್ಥಾಪನೆಗೆ ಮುನ್ನ ಸಾಧಕ ಬಾಧಕ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸ್ಪಷ್ಟಪಡಿಸಿದರು.