ಸಾರಾಂಶ
ಬಗರ್ ಹುಕುಂ ಸಮಿತಿ ಸಭೆಯಲ್ಲಿ ಕಂದಾಯ ಅಧಿಕಾರಿಗಳಿಗೆ ಶಾಸಕ ಬಿ.ಜಿ.ಗೋವಿಂದಪ್ಪ
ಕನ್ನಡಪ್ರಭ ವಾರ್ತೆ ಹೊಸದುರ್ಗಡಿಸಿ, ಎಸಿ ಕೋರ್ಟ್‌ಗೆ ಹಾಕಿರುವ ಆಫೀಲು ಹಾಗೂ ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಮೊದಲು ಇತ್ಯರ್ಥಪಡಿಸಿ ಜನರನ್ನು ಅಲೆದಾಡಿಸಬೇಡಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಕಂದಾಯ ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಗರ್ ಹುಕುಂ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 10 ವರ್ಷಗಳ ಹಿಂದೆ ಬಗರ್ ಹುಕುಂ ಸಮಿತಿ ಮುಂದೆ ಬಂದಿದ್ದ 138 ಅರ್ಜಿಗಳು ನಾನಾ ಕಾರಣಗಳಿಗಾಗಿ ವಜಾ ಗೊಂಡಿದ್ದು, ಪಲಾನುಭವಿಗಳು ಡಿಸಿ ಹಾಗೂ ಎಸಿ ಕೋರ್ಟ್‌ಗೆ ಆಪೀಲು ಹಾಕಿದ್ದರು. ಅವುಗಳು ಮರು ಪರಿಶೀಲನೆಗೆ ಬಂದಿವೆ. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ವಾಸ್ತವ ವರದಿ ನೀಡಬೇಕು. ಇಲ್ಲದ ದಾಖಲೆಗಳನ್ನು ಸೃಷ್ಟಿಸಿ ಎಂದು ನಾನು ಯಾರ ಮೇಲೂ ಒತ್ತಡ ಹಾಕಲ್ಲ. ನ್ಯಾಯಯುತವಾಗಿ ನಿಗದಿತ ಸಮಯದೊಳಗೆ ಕೆಲಸ ಪೂರ್ಣಗೊಳಿಸಿ ಎಂದರು.ಡೀಮ್ಡ್ ಫಾರೆಸ್ಟ್ ನಲ್ಲಿ ನೂರಾರು ವರ್ಷಗಳಿಂದ ಸಾಗುವಳಿ ಮಾಡಿರುವ ಬಡವರು ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿ, ಸುಮಾರು 20 ವರ್ಷಗಳಾಗಿವೆ. ಜನರನ್ನು ಅಲೆದಾಡಿಸಬೇಡಿ. ಸ್ಥಳ ಪರಿಶೀಲನೆಗೆ ಹೋಗಬೇಕಾದರೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಜಂಟಿ ಸರ್ವೇ ಮಾಡಿಸಿ. ಗ್ರಾಮ ಲೆಕ್ಕಾಧಿಕಾರಿಗಳು ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿ. ಮನೆಯಲ್ಲಿಯೇ ಕುಳಿತು ವರದಿ ಮಾಡಬೇಡಿ. ಮುಂದೆ ತೊಂದರೆ ಆದರೆ ನಾನು ಹೊಣೆಯಲ್ಲ ಎಂದು ಗ್ರಾಮ ಲೆಕ್ಕಾಧಿಕಾರಿಗಳನ್ನು ಎಚ್ಚರಿಸಿದರು.
ವಿವಿ ಸಾಗರ ಜಲಾಶಯದ ಹಿನ್ನೀರಿನ ಅನೇಕ ರೈತರ ಜಮೀನುಗಳು ಮುಳುಗಡೆಯಾಗಿದೆ. ಅವರಿಗೆ ಬೇರೆ ಜಾಗದಲ್ಲಿ ಅವರಿಗೆ ಜಮೀನು ಕೊಡ ಬೇಕು. ಹಾಗೆಯೇ ಮಾಡದಕೆರೆ ಬಳಿ ಸರ್ಕಾರಿ ಭೂಮಿ ಇದೆ. ಅದನ್ನು ಅರಣ್ಯ ಪ್ರದೇಶ ಎಂದು ಹೇಳಲಾಗುತ್ತಿದ್ದು, ಅಲ್ಲಿ ಯಾರೂ ಸಾಗುವಳಿ ಮಾಡಿಲ್ಲ. ಇದು ಕಂದಾಯ ಭೂಮಿ ಎನ್ನುವ ಬಗ್ಗೆ ಖಾತ್ರಿ ಮಾಡಿಕೊಂಡು ಆಶ್ರಯ ನಿವೇಶನ ನೀಡಲು, ಹಾಗೆಯ ಸರ್ಕಾರಿ ಬಳಕೆಗೆ ಬಳಸಿಕೊಳ್ಳಲು ಕಾಯ್ದಿರಿಸೋಣ ಎಂದರು.ಜಾನಕಲ್ ಬಳಿ ಹಸಿರು ಕಲ್ಲು ಇದೆ ಎಂಬ ಮಾಹಿತಿಯಿದೆ. ಈ ಬಗ್ಗೆ ವಿಎಗಳು ನಿಗಾ ವಹಿಸಿ, ಅಕ್ರಮವಾಗಿ ಕಲ್ಲು ತೆಗೆಯಲು ಅವಕಾಶ ನೀಡಬೇಡಿ. ಗಣಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಕಾನೂನಾತ್ಮಕವಾಗಿ ಯಾರೂ ಬೇಕಾದರೂ ಲೀಸ್ ಪಡೆದು ಮಾಡಿಕೊಳ್ಳಲಿ ಎಂದರು.
ಬಲ್ಲಾಳಸಮುದ್ರ ಗ್ರಾಮದ ಸರ್ವೇ ನಂಬರ್ ನಲ್ಲಿ ಬರುವ 350 ಎಕರೆ ಜಮೀನನ್ನು ಮಹಾರಾಜರ ಕಾಲದಲ್ಲಿ ಗ್ರಾಮ ಸಮುದಾಯಕ್ಕೆ ಮಿಸಲಿಡಲಾಗಿತ್ತು. ಆದರೆ ಆ ಜಮೀನನ್ನು ಅನೇಕರು ಸಾಗುವಳಿ ಮಾಡಿದ್ದಾರೆ. 1999-20ರಿಂದಲೇ ನಮಗೆ ಸಾಗುವಳಿ ಚೀಟಿ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅದಕ್ಕೆ ಯಾವ ರೀತಿ ಸಾಗುವಳಿ ಚೀಟಿ ಕೊಡಬೇಕು ಎಂಬುದನ್ನು ಚರ್ಚಿಸಿ ಬೇಗ ಇತ್ಯರ್ಥಪಡಿಸಿ ಎಂದು ತಹಸೀಲ್ದಾರ್ ಗೆ ಸೂಚಿಸಿದರು.ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ, ಮಹೇಶ್ವರಪ್ಪ, ಮಣ್ಣಮ್ಮ, ತಹಶೀಲ್ದಾರ್ ತಿರುಪತಿ ಪಾಟೀಲ್, ವಲಯ ಅರಣ್ಯಧಿಕಾರಿ ಸುನಿಲ್ ಕುಮಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.---------
ಬೆಳೆ ಪರಿಹಾರ ನೀಡಲು ಸರ್ಕಾರ ಸಿದ್ಧವಿದೆ. ವಿಎಗಳು ಶೀಘ್ರವಾಗಿ ಸರ್ವೆ ನಂಬರ್ ಗಳನ್ನು ಕಂಪ್ಯೂಟರ್ ಗೆ ಅಳವಡಿಸಿ ಸರ್ಕಾರಕ್ಕೆ ಕಳಿಸಿದರೆ ಬೇಗ ಬರಗಾಲದ ದುಡ್ಡು ಬರುತ್ತದೆ, ಸರ್ಕಾರದ ಆಡಳಿತ ಮೊದಲಿನಂತಿಲ್ಲ ಹುಷಾರಾಗಿ ಕೆಲಸ ಮಾಡಿ.- ಬಿ.ಜಿ.ಗೋವಿಂದಪ್ಪ, ಶಾಸಕರು.---------
ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆ ಪಾರದರ್ಶಕವಾಗಿರಬೇಕಿದೆ. ಈ ಪ್ರಕ್ರಿಯೆ ತುರ್ತಾಗಿ ಮಾಡಬೇಕಾಗಿದ್ದು, ಆರ್‌ಐ ಮತ್ತು ವಿಎಗಳು ಸರ್ಕಾರದ ನಿಯಮನುಸಾರ ಶೀಘ್ರ ಕೆಲಸ ಮಾಡಬೇಕು.- ತಿರುಪತಿ ಪಾಟೀಲ್, ತಹಸೀಲ್ದಾರ್ ಹೊಸದುರ್ಗ