ಸಾರಾಂಶ
ಬೆಂಗಳೂರು : ಭೂ ಪರಿವರ್ತನೆ ಮಾಡದೇ ನಿರ್ಮಿಸುವ ಅನಧಿಕೃತ ಬಡಾವಣೆಯ ಸ್ವತ್ತುಗಳ ನೋಂದಣಿ ಮಾಡುವುದನ್ನು ತಡೆಯುವ ವ್ಯವಸ್ಥೆಯನ್ನು ವೆಬ್‌ಸೈಟ್‌ನಲ್ಲೇ ರೂಪಿಸುವಂತೆ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತ (ಐಜಿಆರ್) ಕೆ.ಎ.ದಯಾನಂದ ಅವರು ರಾಜ್ಯ ಸರ್ಕಾರವನ್ನು ಕೋರಿದ್ದಾರೆ.
ಇದೇ ವೇಳೆ, ಬೆಂಗಳೂರು ಜಿಲ್ಲೆ ವ್ಯಾಪ್ತಿಯಲ್ಲಿನ ಅನಧಿಕೃತ ಬಡಾವಣೆಗಳನ್ನು ಗುರುತಿಸಿ, ಪಟ್ಟಿ ಮಾಡಿ ಅವುಗಳನ್ನು ಗ್ರಾಮ ಆಡಳಿತಾಧಿಕಾರಿಗಳ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ ಹಾಗೂ ತಾಲೂಕು ಕಚೇರಿಯ ನೋಟಿಸ್ ಫಲಕದಲ್ಲಿ ಪ್ರಕಟಿಸಬೇಕು ಎಂದು ಬೆಂಗಳೂರು ಪೂರ್ವ, ದಕ್ಷಿಣ, ಉತ್ತರ, ಯಲಹಂಕ ಮತ್ತು ಆನೇಕಲ್ ತಾಲೂಕಿನ ತಹಸೀಲ್ದಾರ್‌ಗಳು ಮತ್ತು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳಿಗೆ ಬೆಂಗಳೂರು ಜಿಲ್ಲೆಯ ಜಿಲ್ಲಾಧಿಕಾರಿಯೂ ಆಗಿರುವ ಕೆ.ಎ.ದಯಾನಂದ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?: ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಲು ಅನೇಕ ಸಭೆಗಳಲ್ಲಿ ಸೂಚಿಸಲಾಗಿದೆ. ಆದರೂ, ಕೃಷಿ ಜಮೀನಿನಲ್ಲಿ ಅನಧಿಕೃತ ಬಡಾವಣೆ ಹಾವಳಿ ತಡೆಗಟ್ಟದೇ ಉತ್ತೇಜನ ನೀಡುತ್ತಿರುವುದು ಕಂಡು ಬಂದಿದೆ. ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಅಕ್ರಮ, ನಕಲಿ ದಾಖಲೆ ಆಧರಿಸಿ ಬಡಾವಣೆ ನೋಂದಣಿ ಮಾಡುತ್ತಿರುವುದು ಹೆಚ್ಚಾಗಿರುವುದು ಕಂಡು ಬಂದಿದೆ.
ಆದ್ದರಿಂದ, ತಮ್ಮ ತಾಲೂಕು ವ್ಯಾಪ್ತಿಗೆ ಒಳಪಡುವ ಹಸಿರು ವಲಯದಲ್ಲಿನ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಕ್ಕೆ ಬಳಕೆಯಾಗಿರುವ ಬಡಾವಣೆಗಳನ್ನು ಆದ್ಯತೆ ಮೇಲೆ ಗುರುತಿಸಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಇಲಾಖೆಯ ವೆಬ್‌ಸೈಟ್‌ನಲ್ಲೇ ತಡೆಯಬೇಕು
ಭೂಪರಿವರ್ತನೆ ಮಾಡದೇ, ಯೋಜನಾ ಪ್ರಾಧಿಕಾರಗಳಿಂದ ಬಡಾವಣೆ ಅನುಮೋದನೆ ಪಡೆಯದೆ ಅಭಿವೃದ್ಧಿಪಡಿಸುವ ಸ್ವತ್ತುಗಳನ್ನು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಲು ಸಾಧ್ಯವಾಗದಂತೆ ಇಲಾಖೆಯ ಸಾಫ್ಟ್‌ವೇರ್‌ನಲ್ಲೇ ವ್ಯವಸ್ಥೆ ರೂಪಿಸಬೇಕು ಎನ್ನುವ ಮನವಿ ಸರ್ಕಾರದ ಹಂತದಲ್ಲಿದೆ. ಅನುಷ್ಠಾನಗೊಂಡರೆ ಹೊಸದಾಗಿ ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಬಹುದು ಎಂದು ಕೆ.ಎ. ದಯಾನಂದ ತಿಳಿಸಿದರು.