ಸ್ವಚ್ಛತೆಗೆ ಆದ್ಯತೆ ನೀಡಿ ಡೆಂಘೀ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ-ತಹಸೀಲ್ದಾರ್‌

| Published : May 29 2024, 12:55 AM IST

ಸ್ವಚ್ಛತೆಗೆ ಆದ್ಯತೆ ನೀಡಿ ಡೆಂಘೀ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ-ತಹಸೀಲ್ದಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಹಾನಗಲ್ಲ ತಾಲೂಕಿನಲ್ಲಿಯೇ ಅತಿ ಹೆಚ್ಚು ೭೦ ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿದ್ದು, ಮುಂಜಾಗೃತ ಕ್ರಮಗಳನ್ನು ಕೈಕೊಂಡು ಪಟ್ಟಣ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಾಲೂಕು ತಹಸೀಲ್ದಾರ್‌ ಎಸ್. ರೇಣುಕಮ್ಮ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.

ಹಾನಗಲ್ಲ: ಹಾವೇರಿ ಜಿಲ್ಲೆಯಲ್ಲಿ ಹಾನಗಲ್ಲ ತಾಲೂಕಿನಲ್ಲಿಯೇ ಅತಿ ಹೆಚ್ಚು ೭೦ ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿದ್ದು, ಮುಂಜಾಗೃತ ಕ್ರಮಗಳನ್ನು ಕೈಕೊಂಡು ಪಟ್ಟಣ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಾಲೂಕು ತಹಸೀಲ್ದಾರ್‌ ಎಸ್. ರೇಣುಕಮ್ಮ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.

ಮಂಗಳವಾರ ಹಾನಗಲ್ಲಿನ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕು ವೈದ್ಯಾಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಪುರಸಭೆ ಮುಖ್ಯಾಧಿಕಾರಿ ಹಾಗೂ ೪೨ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ಸೂಚನೆ ನೀಡಿದ ಅವರು, ಯಾವುದೇ ಸಬೂಬುಗಳನ್ನು ಹೇಳದೆ ಎಲ್ಲ ಅಧಿಕಾರಿಗಳು ಕಾಳಜಿಯಿಂದ ಕೆಲಸ ಮಾಡಿರಿ. ಡೆಂಘೀ ಜಾಗೃತಿಗಾಗಿ ಪ್ರತಿ ಗ್ರಾಮದಲ್ಲಿ ಡಂಗುರ ಸಾರಿಸಿರಿ. ಆಶಾ ಕಾರ್ಯಕರ್ತೆಯರ ಸಭೆ ನಡೆಸಿ ಪ್ರತಿ ಹಳ್ಳಿಯಲ್ಲಿ ಸ್ವಚ್ಛತೆಗೆ ಗಮನಕೊಡಲು ಸೂಚಿಸಿರಿ. ಚರಂಡಿ ಸ್ವಚ್ಛತೆ, ನೀರು ನಿಲ್ಲದಂತೆ ಕ್ರಮ, ಮನೆಗಳ ಸ್ವಚ್ಛತೆ, ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕೊಳಚೆಯಾಗದಂತೆ ಕ್ರಮ, ಎಲ್ಲ ಗ್ರಾಮಗಳಲ್ಲಿ ಫಾಗಿಂಗ್ ಮಾಡಲು ಮುಂದಾಗಿ. ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ೭೦ ಡೆಂಘೀ ಪ್ರಕರಣಗಳು ಹಾನಗಲ್ಲ ತಾಲೂಕಿನಲ್ಲಿ ಕಂಡು ಬಂದಿವೆ ಎಂದು ಎಚ್ಚರಿಸಿದರು.ಫಾಗಿಂಗ್ ಮಷಿನ್ ನಾಟ್ ವರ್ಕಿಂಗ್‌ : ಅತಿ ದೊಡ್ಡ ತಾಲೂಕು ಹಾನಗಲ್ಲಿನ ೪೨ ಗ್ರಾಮ ಪಂಚಾಯಿತಿಗಳ ೩೬ ಗ್ರಾಮ ಪಂಚಾಯಿತಿಗಳಲ್ಲಿ ಫಾಗಿಂಗ್ ಮಷಿನ್ ದುರಸ್ತಿಯಲ್ಲಿವೆ. ಕೇವಲ ೮ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಮಷಿನ್ ಸರಿ ಇವೆ. ಆದರೆ ಫಾಗಿಂಗ್ ಆಗುತ್ತಿಲ್ಲ. ಬಹುಪಾಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಫಾಗಿಂಗ್ ಮಷಿನ್ ನಾಟ್ ವರ್ಕಿಂಗ್ ಎಂದು ವರದಿ ನೀಡಿದರು. ಗೆಜ್ಜಿಹಳ್ಳಿ , ಡೊಳ್ಳೇಶ್ವರ ಸೇರಿದಂತೆ ಹಲವು ಗ್ರಾಮಗಳಲ್ಲಿ ಫಾಗಿಂಗ್ ಮಷಿನ್‌ಗಳೇ ಇಲ್ಲ. ಕೊರೋನಾ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ಎಲ್ಲ ಗ್ರಾಪಂಗಳಿಗೆ ಕೊಟ್ಟ ಮಡಿಶನ್ ಸ್ಪ್ರೇ ಮಷಿನ್ ಕೂಡ ಯಾವ ಸ್ಥಿತಿಯಲ್ಲಿವೆ ಎಂಬ ವರದಿ ಇಲ್ಲ ಎಂಬ ಸಂಗತಿ ತಾಲೂಕು ವೈದ್ಯಾಧಿಕಾರಿ ಡಾ.ಲಿಂಗರಾಜ ವರದಿ ಪಡೆಯುವ ಸಂದರ್ಭದಲ್ಲಿ ಬೆಳಕಿಗೆ ಬಂದಿತು.ಕ್ರಮಕ್ಕೆ ಸಿದ್ಧರಾಗಿ: ಯಾವುದೇ ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಸೇರಿದಂತೆ ನೌಕರರು ಡೆಂಘೀ ತಡೆಯಲು, ಸ್ವಚ್ಛತೆ ಕಾಪಾಡಲು ನಿರ್ಲಕ್ಷ್ಯ ತೋರಿದರೆ ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಈ ಕೆಲಸಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ. ಗ್ರಾಮಗಳಲ್ಲ ಚರಂಡಿ ಸ್ವಚ್ಛವಾಗಿಡಿ, ಡಂಗುರ ಸಾರಿಸಿ, ಮನೆ ಮನೆಗೆ ತೆರಳಿ ನೀರಿನ ಸರಿಯಾದ ಬಳಕೆ ಬಗೆಗೆ ಅರಿವು ಮೂಡಿಸಿ, ಕೆಲವೆಡೆ ಕಾಮಗಾರಿ ಲೋಪದಿಂದ ಚರಂಡಿ ನೀರು ಕುಡಿಯುವ ನೀರಿನ ಪೈಪಲೈನ್‌ಗೆ ಸೇರುತ್ತಿರುವ ವರದಿಗಳಿವೆ. ಕೂಡಲೇ ರಿಪೇರಿ ಮಾಡಿಸಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬು ಎಚ್ಚರಿಸಿದರು.ಶಾಲೆ ಆರಂಭ: ಈಗ ಶಾಲೆ ಆರಂಭವಾಗುತ್ತಿವೆ. ಅಲ್ಲಿನ ಶೌಚಾಲಯ, ನೀರಿನ ಟ್ಯಾಂಕ್, ಅಡುಗೆ ಮನೆ ಸೇರಿದಂತೆ ಇಡೀ ವರಾಂಡವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಿ. ಶಾಲಾ ಕೊಠಡಿಗಳಲ್ಲಿ ತುಂಬಿಟ್ಟ ನೀರನ್ನು ಚೆಲ್ಲಿ ಹೊಸ ನೀರು ಸಂಗ್ರಹಿಸಿ ಕಾಳಜಿವಹಿಸಲು ಮುಂದಾಗಿ ಎಂದು ಅಧಿಕಾರಿಗಳು ಸೂಚಿಸಿದರು.೨೬೯ ಆಶಾ ಕಾರ್ಯಕರ್ತೆಯರು: ಹಾನಗಲ್ಲ ತಾಲೂಕಿನ ೨೬೯ ಆಶಾ ಕಾರ್ಯಕರ್ತೆಯರು ಈಗಾಗಲೇ ಮನೆ ಮನೆಗಳಿಗೆ ತೆರಳಿ ನೀರಿನ ನಿರ್ವಹಣೆ ಬಗೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅಗತ್ಯವಿರುವ ಊರುಗಳಲ್ಲಿ ಆರೋಗ್ಯ ಶಿಬಿರ ನಡೆಸಲು ಮೇಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ಹಾನಗಲ್ಲ ತಾಲೂಕಿನ ೧೫ ಆಸ್ಪತ್ರೆಗಳಲ್ಲಿ ಕೇವಲ ೫ ಕಡೆ ಮಾತ್ರ ಸರಕಾರಿ ವೈದ್ಯರಿದ್ದಾರೆ. ಉಳಿದೆಡೆ ಗುತ್ತಿಗೆ ಹಾಗೂ ತರಬೇತಿಗಾಗಿ ಬಂದ ವೈದ್ಯರಿದ್ದಾರೆ. ಹಲವೆಡೆ ಒಬ್ಬರೇ ವೈದ್ಯರು ಎರಡು ಮೂರು ಕಡೆಗಳಲ್ಲಿ ಆಸ್ಪತ್ರೆ ನೋಡಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನು ವೈದ್ಯಾಧಿಕಾರಿಗಳು ಪ್ರಸ್ತಾಪಿಸಿದರು.ಹಾನಗಲ್ಲಿನಲ್ಲಿ ೪ ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿವೆ. ಶ್ಯಾಡಗುಪ್ಪಿ, ಕೆಲವರಕೊಪ್ಪ, ಸಾವಿಕೇರಿ, ಕಾಲ್ವೇಕಲ್ಲಾಪುರ ಗ್ರಾಮಗಳಲ್ಲಿ ತಲಾ ೩ ಪ್ರಕರಣಗಳು sಸೇರಿದಂತೆ ತಾಲೂಕಿನಲ್ಲಿ ೭೦ ಡೆಂಘೀ ಪ್ರಕರಣಗಳು ಇದ್ದು, ಕೂಡಲೇ ಆರೋಗ್ಯಕ್ಕೆ ಆದ್ಯತೆ ನೀಡಿ ಎಲ್ಲ ಇಲಾಖೆಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ಸಭೆಗೆ ಸೂಚಿಸಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬು, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಚನ್ನವೀರೇಶ ರೂಡಗಿ, ಚಂದ್ರಶೇಖರ ಸೂಡಂಬಿ ಈ ಸಂದರ್ಭದಲ್ಲಿದ್ದರು.