ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

| Published : Jul 11 2025, 11:48 PM IST

ಸಾರಾಂಶ

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಶಿಪ್ ಅಧಿಕಾರಿ ರಾಜಭಕ್ಷ ಕಿತ್ತೂರು ಮಾತನಾಡಿ, ಸ್ಥಳೀಯರ ಬೇಡಿಕೆಗೆ ಸಂಬಂಧಿಸಿದಂತೆ ಆದಷ್ಟು ಶೀಘ್ರ ಕೆಲಸ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ರಾಣಿಬೆನ್ನೂರು: ಬಾಗಲಕೋಟೆ- ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಲೂಕಿನ ನೂಕಾಪುರ ಮತ್ತು ಮಾದಾಪುರ ಗ್ರಾಮಗಳಿಗೆ ಸರ್ವಿಸ್ ರಸ್ತೆ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕಣ್ಣ ಲಮಾಣಿ ಮಾತನಾಡಿ, ನೂಕಾಪುರ ಮತ್ತು ಮಾದಾಪುರ ಗ್ರಾಮಗಳ ಬಳಿ ಬಸ್ ನಿಲ್ದಾಣ, ಹೈಮಾಸ್ಟ್‌ ಲೈಟ್ ಅಳವಡಿಕೆ, ಹಂಪ್ಸ್‌ಗಳ ನಿರ್ಮಾಣ ಮಾಡುವಂತೆ ಕೆಶಿಪ್(ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಈ ನಿಟ್ಟಿನಲ್ಲಿ ಅನಿವಾರ್ಯವಾಗಿ ಹೆದ್ದಾರಿ ತಡೆದು ಪ್ರತಿಭಟನೆ ಕೈಗೊಂಡಿದ್ದೇವೆ ಎಂದರು. ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಶಿಪ್ ಅಧಿಕಾರಿ ರಾಜಭಕ್ಷ ಕಿತ್ತೂರು ಮಾತನಾಡಿ, ಸ್ಥಳೀಯರ ಬೇಡಿಕೆಗೆ ಸಂಬಂಧಿಸಿದಂತೆ ಆದಷ್ಟು ಶೀಘ್ರ ಕೆಲಸ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಗಳ ಮಾತಿನ ಮೇಲೆ ವಿಶ್ವಾಸವಿಟ್ಟು ಗ್ರಾಮಸ್ಥರು ಪ್ರತಿಭಟನೆ ಹಿಂದಕ್ಕೆ ಪಡೆದರು. ಇಕ್ಬಾಲಸಾಬ ರಾಣಿಬೆನ್ನೂರ, ರವಿ ಮಲ್ಲಳ್ಳಿ, ವೆಂಕಟೇಶ ದೊಡ್ಡಮನಿ, ಲಚಮಪ್ಪ ಚವ್ಹಾಣ, ಗುಡ್ಡಪ್ಪ ಮಲ್ಲಾಡದ, ಮಂಜಪ್ಪ ರಣಸೋತ, ನಾಗೇಶ ಬಜ್ಜಿ, ಪ್ರಭಾಕರ ಮುತ್ತಳ್ಳಿ, ಸುರೇಶ ಕೆಂಗೊಡದ, ಸುರೇಶ ಅಂಕಸಾಪುರ, ಬಸವರಾಜ ವಡ್ಡರ ಮತ್ತಿತರರಿದ್ದರು.ಅನಗತ್ಯವಾಗಿ ಯೂರಿಯಾ ಬಳಕೆ ಬೇಡ

ಹಾನಗಲ್ಲ: ಇತ್ತೀಚಿನ ದಿನಗಳಲ್ಲಿ ರಸಗೊಬ್ಬರಗಳ ಬೆಲೆಯು ಹೆಚ್ಚಾಗುತ್ತಿರುವ ಹಿನ್ನೆಲೆ ರೈತರು ಸಮತೋಲನ ರಸಗೊಬ್ಬರ ಬಳಸುವುದಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕು. ಅಲ್ಲದೇ ಅನಗತ್ಯವಾಗಿ ಯೂರಿಯಾ ಬಳಕೆ ಮಾಡಬಾರದು ಎಂದು ಎಂದು ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಿಮೆ ಬೆಲೆಯಲ್ಲಿ ದೊರಕುವ ಯೂರಿಯಾ ರಸಗೊಬ್ಬರವನ್ನು ಅನವಶ್ಯಕವಾಗಿ ಹೆಚ್ಚು ಬಳಸುವುದರಿಂದ ಹಲವು ಸಮಸ್ಯೆಗಳು ತಲೆದೋರುತ್ತವೆ. ಮುಖ್ಯವಾಗಿ ಬೆಳೆಗಳು ಕೀಟ ಹಾಗೂ ರೋಗಗಳ ಬಾಧೆಗೆ ಹೆಚ್ಚು ತುತ್ತಾಗುವ ಸಾಧ್ಯತೆ ಇರುತ್ತದೆ. ಮಣ್ಣಿನ ಉತ್ಪಾದಕತೆ ಕುಂಠಿತವಾಗುವುದರ ಜತೆಗೆ ಭೂಮಿಗೆ ಹಾಕಿದ ಸಾರಜನಕ ಹೆಚ್ಚು ಪೋಲಾಗಿ ನಷ್ಟವಾಗುವುದು. ಪ್ರಮುಖವಾಗಿ ಸಸ್ಯ ಬೆಳವಣಿಗೆ ಅವಧಿ ವಿಸ್ತರಣೆಯಿಂದಾಗಿ ಹೂವು, ಕಾಯಿ ಕಟ್ಟುವಿಕೆ ವಿಳಂಬವಾಗಿ ಇಳುವರಿ ಕಡಿಮೆ ಆಗುವುದು ಎಂದಿದ್ದಾರೆ.

ರೈತರು ಮಣ್ಣು ಪರೀಕ್ಷೆ ಆಧಾರದ ಮೇಲೆ ಸಮತೋಲನ ರಸಗೊಬ್ಬರ ಬಳಕೆ ಮಾಡಬೇಕು. ಸಾವಯವ ಗೊಬ್ಬರಗಳಾದ ಕಾಂಪೋಸ್ಟ್, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು. ಲಘು ಪೋಷಕಾಂಶಗಳ ಬಳಕೆ ಮಾಡುವುದು ಅತಿ ಅವಶ್ಯಕವಾಗಿದೆ. ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ರೈತರು ನ್ಯಾನೋ ಯೂರಿಯಾ ಬಳಸಬಹುದು ಎಂದು ತಿಳಿಸಿದ್ದಾರೆ.