ಕ್ಷಯರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಡಾ.ಆಶಾಲತಾ

| Published : Sep 01 2024, 02:04 AM IST

ಸಾರಾಂಶ

ಭಾರತದಂತಹ ಅಭಿವೃದ್ಧಿ ರಾಷ್ಟ್ರಗಳಲ್ಲಿ ಕ್ಷಯರೋಗ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಚಿಕಿತ್ಸೆ ಪಡೆಯದ ಕ್ಷಯ ರೋಗಿ ಕೆಮ್ಮುವುದು, ಸೀನಿದಾಗ ಗಾಳಿ ಮುಖಾಂತರ ಆರೋಗ್ಯವಂತ ಮನುಷ್ಯನಿಗೆ ಹರಡುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

2025ಕ್ಕೆ ಕ್ಷಯ ರೋಗ ಮುಕ್ತ ಮಂಡ್ಯ ಜಿಲ್ಲೆ ಮಾಡಲು ಪಣ ತೊಟ್ಟಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್.ಆಶಾಲತಾ ಹೇಳಿದರು.

ತಾಲೂಕಿನ ಕೆ.ಶೆಟ್ಟಹಳ್ಳಿ ಎ.ಎಚ್.ಅಪಾರೆಲ್ ಪ್ರವೈಟ್ ಲಿಮಿಟೆಡ್ ಗಾರ್ಮೆಂಟ್ ಕಾರ್ಖಾನೆ ಸಭಾಂಗಣದಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದಡಿ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಕೆ.ಶೆಟ್ಟಹಳ್ಳಿ ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ಆಯೋಜಿಸಿದ್ದ ಕ್ಷಯರೋಗ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದಂತಹ ಅಭಿವೃದ್ಧಿ ರಾಷ್ಟ್ರಗಳಲ್ಲಿ ಕ್ಷಯರೋಗ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಚಿಕಿತ್ಸೆ ಪಡೆಯದ ಕ್ಷಯ ರೋಗಿ ಕೆಮ್ಮುವುದು, ಸೀನಿದಾಗ ಗಾಳಿ ಮುಖಾಂತರ ಆರೋಗ್ಯವಂತ ಮನುಷ್ಯನಿಗೆ ಹರಡುತ್ತದೆ. ಆದ್ದರಿಂದ ನಿರಂತರವಾಗಿ ಒಂದು ವಾರಕ್ಕೂ ಹೆಚ್ಚು ಕೆಮ್ಮು, ಜ್ವರ, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವುದು, ಹಸಿವು ಆಗದಿರುವುದು, ಕತ್ತಿನಲ್ಲಿ, ಕಂಕುಳಲ್ಲಿ ಗಡ್ಡೆ ಕಾಣಿಸುವುದು ಮುಂತಾದ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಷಣೆ ಮಾಡಿಸಿಕೊಳ್ಳಿ ಎಂದರು.

ಪ್ರಾರಂಭದ ಹಂತದಲ್ಲಿಯೇ ಕ್ಷಯ ರೋಗವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಕ್ಷಯ ರೋಗವನ್ನು ಸಂಪೂರ್ಣ ಗುಣಪಡಿಸಬಹುದು. ಕ್ಷಯ ರೋಗವನ್ನು ಮುಕ್ತಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಆಡಳಿತ ವೈದ್ಯಾಧಿಕಾರಿ ಡಾ.ಉಷಾ ಎಂ.ಎಸ್, ಬಿಪಿಎಂ ನವೀನ, ಡಿಪಿಸಿ ಹರ್ಷ, ಎಸ್‌ಟಿಎಸ್ ಮಹೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಪಿ ಪಣೀಂದ್ರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಮತಾ, ಕಾರ್ಖಾನೆ ಎಚ್‌ಆರ್ ಚೇತನ್, ಪ್ರಪುಲ್ಲಾ ಸೇರಿದಂತೆ ನೂರಾರು ಮಂದಿ ಕಾರ್ಮಿಕರು ಇದ್ದರು.