ಪ್ರೇಯಸಿಗೆ ಗಿಫ್ಟ್‌ ನೀಡಲು ಸಂಬಂಧಿಮನೆಗೆ ಕನ್ನ ಹಾಕಿ ಜೈಲು ಸೇರಿದ!

| N/A | Published : Oct 12 2025, 02:00 AM IST / Updated: Oct 12 2025, 07:54 AM IST

Bengaluru theft for girlfriend
ಪ್ರೇಯಸಿಗೆ ಗಿಫ್ಟ್‌ ನೀಡಲು ಸಂಬಂಧಿಮನೆಗೆ ಕನ್ನ ಹಾಕಿ ಜೈಲು ಸೇರಿದ!
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಪ್ರಿಯತಮೆಗೆ ಉಡುಗೊರೆ ಕೊಡಲು ಪರಿಚಿತರ ಮನೆಯಲ್ಲಿ ಚಿನ್ನಾಭರಣ ಕದ್ದು ಚಿಕನ್ ಅಂಗಡಿ ಕೆಲಸಗಾರನೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

  ಬೆಂಗಳೂರು :  ತನ್ನ ಪ್ರಿಯತಮೆಗೆ ಉಡುಗೊರೆ ಕೊಡಲು ಪರಿಚಿತರ ಮನೆಯಲ್ಲಿ ಚಿನ್ನಾಭರಣ ಕದ್ದು ಚಿಕನ್ ಅಂಗಡಿ ಕೆಲಸಗಾರನೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

ಗಟ್ಟಿಹಳ್ಳಿಯ ಶ್ರೇಯಸ್‌ ಬಂಧಿತನಾಗಿದ್ದು, ಆರೋಪಿಯಿಂದ 47.16 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ 3.46 ಲಕ್ಷ ರು. ನಗದು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಗಟ್ಟಿಹಳ್ಳಿಯ ಹರೀಶ್ ಎಂಬುವರ ಮನೆಯಲ್ಲಿ ಚಿನ್ನಾಭರಣ ಕಳ್ಳತನದ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಅವರ ಸಂಬಂಧಿ ಶ್ರೇಯಸ್‌ನ ನಿಜ ಬಣ್ಣ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಳಿ ಮಾಂಸ ಮಾರಾಟ ಮಳಿಗೆಯಲ್ಲಿ ಶ್ರೇಯಸ್ ಕೆಲಸ ಮಾಡುತ್ತಿದ್ದ. ಆಗಾಗ್ಗೆ ತನ್ನ ಸಂಬಂಧಿ ಹರೀಶ್‌ ಅವರ ಮನೆಗೆ ಹೋಗುತ್ತಿದ್ದ. ಹೀಗಾಗಿ ಆತನಿಗೆ ಸಂಬಂಧಿಯ ಆರ್ಥಿಕ ವಹಿವಾಟಿನ ಕುರಿತು ಮಾಹಿತಿ ಇತ್ತು. ಸೆ.14 ರಂದು ಕುಟುಂಬ ಸಮೇತ ಹರೀಶ್ ಅವರು ಹೊರ ಹೋಗಿದ್ದರು. ಆಗ ಅವರ ಮನೆಗೆ ಕನ್ನ ಹಾಕಿ ನಗ-ನಾಣ್ಯವನ್ನು ಶ್ರೇಯಸ್ ದೋಚಿದ್ದ. ಎರಡು ದಿನಗಳ ಬಳಿಕ ಹರೀಶ್ ಮರಳಿದಾಗ ಕಳ್ಳತನ ಕೃತ್ಯ ಗೊತ್ತಾಗಿದೆ. ಈ ವಿಷಯ ತಿಳಿದು ತನಗೇನು ಗೊತ್ತೇ ಇಲ್ಲ ಎನ್ನುವಂತೆ ನಾಟಕವಾಡಿ ಸಂಬಂಧಿಗೆ ಶ್ರೇಯಸ್ ಸಾಂತ್ವನ ಹೇಳಿದ್ದ. ಅಲ್ಲದೆ ಪೊಲೀಸ್ ಠಾಣೆಗೆ ದೂರು ಕೊಡಲು ತೆರಳಿದಾಗ ಸಹ ಹರೀಶ್ ಜತೆ ಆರೋಪಿ ಇದ್ದ. ತನ್ನ ಮೇಲೆ ಗುಮಾನಿ ಬಾರದಂತೆ ಆತ ಮುನ್ನೆಚ್ಚರಿಕೆ ವಹಿಸಿದ್ದ.

ಇತ್ತ ಈ ಮನೆಗಳ್ಳತನ ಬಗ್ಗೆ ತನಿಖೆಗಿಳಿದ ಪೊಲೀಸರು, ಹರೀಶ್ ಅವರ ಸ್ನೇಹಿತರು ಹಾಗೂ ಸಂಬಂಧಿಕರ ಬಗ್ಗೆ ವಿಚಾರಿಸಿದರು. ಆಗ ಶ್ರೇಯಸ್ ಮೇಲೆ ತನಿಖಾ ತಂಡಕ್ಕೆ ಶಂಕೆ ಮೂಡಿದೆ. ಈ ಕಳ್ಳತನದ ಬಳಿಕ ಶ್ರೇಯಸ್‌ ಜೀವನ ಶೈಲಿ ಬದಲಾಗಿತ್ತು. ಮನಬಂದಂತೆ ಆತ ಹಣ ಖರ್ಚು ಮಾಡುತ್ತಿದ್ದ. ಅಲ್ಲದೆ ತನ್ನ ಪ್ರೇಯಸಿಗೆ ಕೂಡ ಚಿನ್ನಾಭರಣ ಉಡುಗೊರೆ ಕೊಟ್ಟಿದ್ದ ಸಂಗತಿ ಪೊಲೀಸರಿಗೆ ತಿಳಿಯಿತು. ತಕ್ಷಣವೇ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Read more Articles on