ಸಾರಾಂಶ
ಕಾರಟಗಿ:
ನಿವೃತ್ತ ಸರ್ಕಾರಿ ನೌಕರರಿಗೆ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಣಯ ಖಂಡಿಸಿ ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಗೆ ತೆರಳಿ ಪ್ರಧಾನಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಶರಣಪ್ಪ ಉಪನಾಳ, ಸರ್ಕಾರಿ ಸೇವೆಯಿಂದ ನೌಕರರು ನಿವೃತ್ತ ಹೊಂದಿದಾಗ ಅವರಿಗೆ ಹಳೇ ಪಿಂಚಣಿ ಆರ್ಥಿಕ ಸೌಲಭ್ಯ ದೊರೆಯುವುದಿಲ್ಲ ಮತ್ತು ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲ ಎನ್ನುವ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ನಿವೃತ್ತ ನೌಕರರ ಕುಟುಂಬ ಆರ್ಥಿಕ ಸಂಕಷ್ಟಕ್ಕೊಳಗಾಗುತ್ತದೆ. ಕೂಡಲೇ ಪಿಂಚಣಿ ಪರಿಷ್ಕರಿಸಿ ನಿವೃತ್ತ ನೌಕರರಿಗೆ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ ಸಂಘದ ಉಪಾಧ್ಯಕ್ಷ ನಿಂಗಪ್ಪ ಎತ್ತಿನಮನಿ ಹಾಗೂ ಸಹಕಾರ್ಯದರ್ಶಿ ಹಾಗೂ ಮಹಿಬೂಬ್ ಹುಸೇನ್ ಮಾತನಾಡಿ, ಹೊಸ ನಿಯಮಗಳ ಅಡಿಯಲ್ಲಿ ಪಿಂಚಣಿದಾರರು ಇನ್ನು ಮುಂದೆ ಭವಿಷ್ಯದ ವೇತನ ಆಯೋಗದ ಪ್ರಯೋಜನಗಳಿಗೆ ಅರ್ಹರಲ್ಲ. ಇದರಲ್ಲಿ ತುಟ್ಟಿ ಭತ್ಯ(ಡಿಎ) ಹೆಚ್ಚಳ ಅಥವಾ ಮುಂಬರುವ ೮ನೇ ವೇತನ ಆಯೋಗದ ಪ್ರಯೋಜನಗಳು ಸೇರಿವೆ ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ, ನಿವೃತ್ತ ನೌಕರರ ಪಿಂಚಣಿ ರಚನೆಯಲ್ಲಿ ಪ್ರಮುಖ ಬದಲಾವಣೆ ತರುವ ಹಣಕಾಸು ಕಾಯ್ದೆ ೨೦೨೫ಅನ್ನು ಸಂಸತ್ ಅನುಮೋದಿಸಿದೆ. ಹೊಸ ಕಾನೂನಿನ ಪ್ರಕಾರ, ಪಿಂಚಣಿದಾರರು ಇನ್ನು ಮುಂದೆ ಭವಿಷ್ಯದ ವೇತನ ಆಯೋಗದ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ ಎನ್ನುವುದು ತುಂಬಾ ಅನ್ಯಾಯದ ಕ್ರಮವಾಗಿದೆ. ಪ್ರಧಾನಿ, ಕೇಂದ್ರ ಆರ್ಥಿಕ ಸಚಿವರು ಈ ಕಾನೂನನ್ನು ಹಿಂಪಡೆದು ರಾಷ್ಟ್ರ ನಿರ್ಮಾಣಕ್ಕಾಗಿ ದುಡಿದು ಜೀವ ಸವೆಸಿರುವ ನಿವೃತ್ತ ನೌಕರರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಬಳಿಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ ನಾಯಕ ತೊಂಡಿಹಾಳ ಮಾತನಾಡಿದರು. ನಂತರ ಬೇಡಿಕೆಗಳ ಬಗ್ಗೆ ಪ್ರಧಾನಿಗೆ ಪತ್ರ ಕಳುಹಿಸಿಕೊಡುವಂತೆ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.ಈ ವೇಳೆ ಕಾರ್ಯದರ್ಶಿ ಅಲಿಹುಸೇನ್, ಈಶ್ವರಪ್ಪ ಸಜ್ಜನ, ಸಿದ್ದನಗೌಡ, ಅಮರಪ್ಪ ಸಜ್ಜನ, ಸಲಹಾ ಸಮಿತಿ ಸದಸ್ಯರಾದ ಕೆ.ಎಂ. ಸಿದ್ದಯ್ಯ, ವೈ.ಎಂ ಮಲ್ಲಿಕಾರ್ಜುನಯ್ಯ, ಮಹಿಳಾ ಸಮಿತಿ ಸದಸ್ಯೆ ಎಚ್.ಆರ್. ಶೈಲಜಾ, ಮಹಮೂದ್, ರುದ್ರಯ್ಯಸ್ವಾಮಿ, ಸೀತಾರಾಮ್ ಮೇಟಿ, ಶಿವಪ್ಪ ಅಂಗಡಿ, ಪಿ. ವೀರನಗೌಡ, ಬಾಳಪ್ಪ ಗ್ಯಾಂಗಮನ್, ಮಹಿಬೂಬ್, ಚಂದ್ರಶೇಖರ ಭೀಮರಾಯನಗುಡಿ, ಪಾಲಾಕ್ಷಪ್ಪ, ಸಿದ್ದಲಿಂಗಯ್ಯಸ್ವಾಮಿ ಇದ್ದರು.