ಸಾರಾಂಶ
ಈ ವರ್ಷ ೩೯ನೇ ವರ್ಷದ ಸಂಕಲ್ಪ ಉತ್ಸವವನ್ನು ಅ. ೩೧ರಿಂದ ನ. ೪ರ ವರೆಗೆ ಯಲ್ಲಾಪುರದಲ್ಲಿ ನಡೆಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಯಲ್ಲಾಪುರ: ಈ ವರ್ಷ ೩೯ನೇ ವರ್ಷದ ಸಂಕಲ್ಪ ಉತ್ಸವವನ್ನು ಅ. ೩೧ರಿಂದ ನ. ೪ರ ವರೆಗೆ ನಡೆಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಪಟ್ಟಣದ ಮೌನ ಗ್ರಂಥಾಲಯದ ಆವಾರದಲ್ಲಿ ಸಂಕಲ್ಪ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾವು ಒಂದು ವರ್ಷವೂ ಬಿಡದೇ ಈ ಉತ್ಸವವನ್ನು ನಡೆಸಿಕೊಂಡು ಬಂದಿದ್ದೇವೆ. ಈ ಉತ್ಸವದಲ್ಲಿ ಯಕ್ಷಗಾನ, ನಾಟಕ, ತಾಳಮದ್ದಲೆ, ಸಂಗೀತ, ಭರತನಾಟ್ಯ ಸೇರಿದಂತೆ ಹತ್ತಾರು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆ ವೈದ್ಯಕೀಯ ಶಿಬಿರ, ಪ್ರಾಜ್ಞರ ಉಪನ್ಯಾಸ ಮಾಲಿಕೆ ಹೀಗೆ ಹಲವು ಚಿಂತನೆಗೆ ಗ್ರಾಹ್ಯವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಪ್ರತಿವರ್ಷವೂ ಸ್ವರ್ಣವಲ್ಲಿ ಶ್ರೀಗಳು ಉತ್ಸವವನ್ನು ಉದ್ಘಾಟಿಸಿ, ಆಶೀರ್ವದಿಸುತ್ತಿದ್ದರು. ಈ ವರ್ಷ ವಿಶೇಷವಾಗಿ ೫ ಮಠಾಧೀಶರು ಕೂಡ ನಮ್ಮ ಉತ್ಸವದಲ್ಲಿ ಭಾಗವಹಿಸಿ, ಸಾನ್ನಿಧ್ಯ ವಹಿಸುವರು. ಜತೆಯಲ್ಲಿ ರಾಷ್ಟ್ರಭಕ್ತಿ ಕಾರ್ಯಕ್ರಮ, ತಾಳಮದ್ದಲೆ, ಯಕ್ಷಗಾನ, ನಾಟಕ, ಗಮಕ, ಕೀರ್ತನೆ, ಸಂಗೀತ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಕಲ್ಪದ ತಂಡ ಪ್ರಸಾದ ಹೆಗಡೆ ನೇತೃತ್ವದಲ್ಲಿ ಆಯೋಜಿಸಿದೆ.ಯಕ್ಷಗಾನದಂತಹ ಶ್ರೇಷ್ಠ ಕಲೆ, ಕಲಾವಿದರನ್ನು ಉಳಿಸಿ, ಬೆಳೆಸುವುದೇ ನಮ್ಮ ಸಂಕಲ್ಪ. ಆ ನೆಲೆಯಲ್ಲಿ ಎಷ್ಟೇ ಕಷ್ಟ, ಪರಿಶ್ರಮವಾದರೂ ಉತ್ಸವವನ್ನು ನಡೆಸಿಕೊಂಡು ಬಂದಿದ್ದೇವೆ, ಅದರಲ್ಲೂ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭ ಸಂಕಲ್ಪ ಸಂಚಾಲಕ ಪ್ರಸಾದ ಹೆಗಡೆ, ಉಪಾಧ್ಯಕ್ಷ ಪ್ರಶಾಂತ ಹೆಗಡೆ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಸಿ.ಜಿ. ಹೆಗಡೆ, ಬಾಬು ಬಾಂದೇಕರ, ನೀಲೇಶ ನಾಯ್ಕ ಉಪಸ್ಥಿತರಿದ್ದರು.