ಸಾರಾಂಶ
ಗದಗ: ಶಾಸನಗಳು ಕೇವಲ ಇತಿಹಾಸದ ವಿವರಗಳಲ್ಲ, ಅವು ನಮ್ಮ ಭವ್ಯ ಪರಂಪರೆಯ ಕುರುಹುಗಳಾಗಿದ್ದು, ಸದ್ಯ ನಮ್ಮನ್ನು ಕಾಡುತ್ತಿರುವ ಸಮಕಾಲೀನ ತಲ್ಲಣಗಳಿಗೆ ಶಾಸನಗಳ ಅಧ್ಯಯನ ಅಥವಾ ವಿಮರ್ಶೆ ಪರಿಹಾರ ನೀಡಬಲ್ಲದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪರಮಶಿವಮೂರ್ತಿ ಹೇಳಿದರು.
ನಗರದ ಬಸವೇಶ್ವರ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ಶಾಸನಗಳ ಅಧ್ಯಯನ ಮತ್ತು ಸಂಶೋಧನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ನಮ್ಮ ಪೂರ್ವಿಕರು ಕನಿಷ್ಠ ಸವಲತ್ತುಗಳ ಮಧ್ಯೆಯೂ ಮೌಲ್ಯಯುತ ಜೀವನ ಸಾಗಿಸುತ್ತಿದ್ದರು ಹಾಗೂ ಮನಶಾಂತಿಯೇ ಶ್ರೇಷ್ಠ ಸಂಪತ್ತು ಎಂಬ ಪ್ರಜ್ಞೆ ಅವರಿಗೆ ಇತ್ತು ಎನ್ನುವ ವಿವರ ಶಾಸನಗಳಂತ ಪುರಾತತ್ವ ಆಕರಗಳು ತಿಳಿಸುತ್ತವೆ. ನಗರೀಕರಣವು ಉತ್ತುಂಗ ತಲುಪಿರುವ ಇಂದಿನ ದಿನಗಳಲ್ಲಿ ಮನುಷ್ಯತ್ವಕ್ಕೆ ಬೆಲೆ ಇಲ್ಲದಂತಾಗಿದೆ, ಬದುಕು ಮೌಲ್ಯರಹಿತವಾಗುತ್ತಿದೆ, ಶಾಸನಗಳು ಸ್ಥಳೀಯ ಇತಿಹಾಸ ಪರಿಣಾಮಕಾರಿಯಾಗಿ ತಿಳಿಸಿಕೊಡುವುದರಿಂದ ವರ್ತಮಾನದ ಪುನರಾವಲೋಕನಕ್ಕೆ ಅವುಗಳ ಅಧ್ಯಯನ ದಿವ್ಯ ಔಷಧವಾಗಿದೆ ಎಂದರು.
ಗದಗ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಸಾವಿರ ವರ್ಷಕ್ಕೂ ಹೆಚ್ಚು ಪುರಾತನ ಅನೇಕ ಶಾಸನಗಳಿದ್ದು, ಅವುಗಳ ಅಧ್ಯಯನದ ವಿವರಗಳುಳ್ಳ ಗ್ರಂಥ ಶೀಘ್ರವೇ ಓದುಗರ ಕೈಗಿಡಲಿದ್ದೇನೆ. ಶಾಸನಗಳ ಕುರಿತು ನಿಷ್ಕಾಳಜಿ-ಅನಾದರ ಸಲ್ಲದಾಗಿದ್ದು, ಅವುಗಳ ಸಂರಕ್ಷಣೆ ಹಾಗೂ ಅಧ್ಯಯನ ಇಂದಿನ ಅನಿವಾರ್ಯತೆಯಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಮಾತನಾಡಿ, ಶಾಸನಗಳನ್ನು ಓದಿ-ಅರ್ಥೈಸುವ ತಜ್ಞರ ಕೊರತೆ ಇಂದು ಹೆಚ್ಚಿದ್ದು, ಅದಕ್ಕೆ ಪರಿಹಾರವೆಂಬಂತೆ ಇಂತ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಹಿರಿಯ ಶಾಸನ ತಜ್ಞ ಡಾ. ಹನುಮಾಕ್ಷಿ ಗೋಗಿ ಮಾತನಾಡಿ, ಗದಗ ಜಿಲ್ಲೆ ಕರ್ನಾಟಕದ ನಿಜವಾದ ಸಾಂಸ್ಕೃತಿಕ ರಾಜಧಾನಿಯಾಗಿದ್ದು, ಇನ್ನೂ ಅಧ್ಯಯನಕ್ಕೆ ಒಳಪಡಬೇಕಾದ ಅನೇಕ ಶಾಸನಗಳು ಇಲ್ಲಿವೆ. ಭಾರತದ ಶಾಸನಗಳ ಅಧ್ಯಯನದಲ್ಲಿ ವಿದೇಶಿಗರ ಕೊಡುಗೆಯೂ ಸಾಕಷ್ಟಿದ್ದು, ಶಾಸನಗಳ ಕುರಿತು ಗ್ರಾಮೀಣ ಜನರು ಬೆಳೆಸಿಕೊಂಡಿರುವ ಮೂಢನಂಬಿಕೆ ಅಳಿಸಬೇಕಾಗಿದೆ. ಕೇವಲ 30-35 ವರ್ಷಗಳ ಹಿಂದೆ ಕಾಣಸಿಗುತ್ತಿದ್ದ ಶಾಸನಗಳು ಇಂದು ಕಣ್ಮರೆಯಾಗಿದ್ದು, ಈ ಕುರಿತು ಗಂಭೀರ ಚಿಂತನೆಗಳು ನಡೆಯಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು.
ಮೈಸೂರು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಎನ್.ಎಂ.ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಾಜಿ ಸಚಿವ ಎಸ್.ಎಸ್. ಪಾಟೀಲ, ಪ್ರಾ. ಎಂ.ಎ. ಬುರಡಿ ಸೇರಿದಂತೆ ಶಿಬಿರಾರ್ಥಿಗಳು ಇದ್ದರು. ಚಂದ್ರಪ್ಪ ಬಾರಂಗಿ ನಿರೂಪಿಸಿದರು. ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯ ಸಂಯೋಜಕ ಡಾ. ಅರ್ಜುನ ಗೊಳಸಂಗಿ ವಂದಿಸಿದರು.