ಶರಣರ ಸಂದೇಶ ಸಾರ್ವಕಾಲಿಕ: ಎಂ.ಕೆ. ಲಮಾಣಿ

| Published : Nov 23 2025, 03:00 AM IST

ಸಾರಾಂಶ

ಎಲ್ಲ ಶರಣರು ಸಮಾಜಕ್ಕೆ ಸಲ್ಲುವ ಉನ್ನತ ಕಾಯಕ ಧರ್ಮ ಸಾರಿದ್ದಾರೆ. ಅವರ ನಡೆ- ನುಡಿಗಳು ಒಂದಾಗಿ ಅನುಭವದ ಅಪಾರ ಸಂಪತ್ತನ್ನು ನಮಗೆ ಕೊಟ್ಟಿದ್ದಾರೆ. ಅವಗುಣಗಳ ತೊಡೆದು ಸುಗುಣ ಸಮಾಜದ ನಿರ್ಮಾಣ ಅವರ ಧ್ಯೇಯವಾಗಿತ್ತು.

ಶಿರಹಟ್ಟಿ: ಸುಜ್ಞಾನದ ಸಂಪತ್ತು, ಕಾಯಕ ದಾಸೋಹದ ದಿವ್ಯತೆಯನ್ನು ಸಮಾಜಕ್ಕೆ ನೀಡಿದ ಶರಣರು, ವಚನಕಾರರ ಬದುಕು ಎಲ್ಲ ಕಾಲಕ್ಕೂ ಸಲ್ಲುವ ಸತ್ಫಲ ಎಂದು ಶರಣ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ಅಧ್ಯಕ್ಷ ಎಂ.ಕೆ. ಲಮಾಣಿ ತಿಳಿಸಿದರು.ಪಟ್ಟಣದ ಸಿಸಿಎನ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ಶರಣರು ಸಮಾಜಕ್ಕೆ ಸಲ್ಲುವ ಉನ್ನತ ಕಾಯಕ ಧರ್ಮ ಸಾರಿದ್ದಾರೆ. ಅವರ ನಡೆ- ನುಡಿಗಳು ಒಂದಾಗಿ ಅನುಭವದ ಅಪಾರ ಸಂಪತ್ತನ್ನು ನಮಗೆ ಕೊಟ್ಟಿದ್ದಾರೆ. ಅವಗುಣಗಳ ತೊಡೆದು ಸುಗುಣ ಸಮಾಜದ ನಿರ್ಮಾಣ ಅವರ ಧ್ಯೇಯವಾಗಿತ್ತು ಎಂದರು.ಪ್ರಾಂಶುಪಾಲ ಬಿ.ಜಿ. ಗಿರಿತಮ್ಮಣ್ಣವರ ಮಾತನಾಡಿ, ೧೨ನೇ ಶತಮಾನದ ಶರಣರು ಮೂಢನಂಬಿಕೆಗಳಿಂದ ದೂರ ಇದ್ದುಕೊಂಡು ವಾಸ್ತವದ ನೆಲೆಗಟ್ಟಿನಲ್ಲಿ ಬದುಕಿ ಸಮಾನತೆ ಸಮಾಜ ಕಟ್ಟಿದವರು. ಬಸವಾದಿ ಶರಣರ ಸಂದೇಶವು ಪ್ರತಿಯೊಬ್ಬ ಸಮಾಜದ ಜೀವಿಗಳಿಗೆ ದಿವ್ಯ ಅಮೃತ ಔಷಧಿಗಳಾಗಿವೆ. ೧೨ನೇ ಶತಮಾನದ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದು ಜೀವನವನ್ನು ಪಾವನ ಮಾಡಿಕೊಳ್ಳುವ ಸುವರ್ಣ ಅವಕಾಶ ನಮಗೆ ನೀಡಿದ್ದಾರೆ ಎಂದರು.

ಸಿಸಿಎನ್ ವಿದ್ಯಾ ಪ್ರಸಾರ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರ ವಚನಗಳು ಬಾಳಿಗೆ ದಾರಿದೀಪವಾಗಿವೆ. ವಿದ್ಯಾರ್ಥಿಗಳು ಅವುಗಳನ್ನು ಅರ್ಥೈಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಶರಣರ ಒಂದೊಂದು ವಚನದಲ್ಲಿ ಅನುಭಾವವೇ ತುಂಬಿದೆ. ಶರಣರ ಅನುಭಾವದ ನುಡಿಗಳು ಬದುಕಿಗೆ ದಾರಿ ತೋರುವ ಕೆಲಸ ಮಾಡುತ್ತವೆ ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಬಸವಣ್ಣವರ ಒಂದೇ ಒಂದು ವಚನ ನಾವು ಪಚನ ಮಾಡಿಕೊಂಡರೆ ಜೀವನವೇ ಸಾರ್ಥಕವಾಗುತ್ತದೆ. ಲೌಕಿಕವಾದ ವಸ್ತುಗಳಿಂದ ಜೀವನ ಹಾಳು ಮಾಡಿಕೊಳ್ಳದೇ ವಚನಗಳ ಓದಿನಿಂದ ಜೀವನವನ್ನು ಹಗುರ ಮಾಡಿಕೊಳ್ಳಬಹುದು. ಶರಣರ ವಚನಗಳಲ್ಲಿ ಅಂಥ ಅದ್ಭುತ ಶಕ್ತಿ ಇದೆ ಎಂದರು.

ದತ್ತಿದಾನಿಗಳಾದ ಎಚ್.ಎಂ. ದೇವಗಿರಿ, ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಕಂಬಳಿ ಮುಖ್ಯೋಪಾಧ್ಯಾಯ ವಿ.ಸಿ. ಪೊಲೀಸಪಾಟೀಲ್ ನಂದಾ ಮೃತ್ತುಂಜಯ ಕಪ್ಪತ್ತನವರ ಚಂಪಾ ಪಾಟೀಲ ಇತರರು ಇದ್ದರು.