ಸಾರಾಂಶ
ಲೋಕಾಪುರ ಒಂದು ವಾರದಿಂದ ಉತ್ತಮ ಮಳೆ ಸುರಿಯುತ್ತಿರುವುದರಿಂದ ಲೋಕಾಪುರ ಹೋಬಳಿ ಸೇರಿದಂತೆ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿದೆ.
ಶ್ರೀನಿವಾಸ ಬಬಲಾದಿ
ಕನ್ನಡಪ್ರಭ ವಾರ್ತೆ ಲೋಕಾಪುರಒಂದು ವಾರದಿಂದ ಉತ್ತಮ ಮಳೆ ಸುರಿಯುತ್ತಿರುವುದರಿಂದ ಲೋಕಾಪುರ ಹೋಬಳಿ ಸೇರಿದಂತೆ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಉತ್ತಮ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿತ್ತು. ಹೀಗಾಗಿ ರೈತರು ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿಸಿಕೊಂಡಿದ್ದರು. ಈಗಲೂ ಕೆಲವು ರೈತರು ಬೀಜ, ಗೊಬ್ಬರ ಪಡೆಯುತ್ತಿದ್ದಾರೆ.
ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಮಳೆಯಾಶ್ರಿತ ಕೃಷಿ ಜಮೀನು ಹೊಂದಿದ ರೈತರು ಹೊಲದತ್ತ ಮುಖ ಮಾಡಿರಲೇ ಇಲ್ಲ. ಕೊಳವೆ ಬಾವಿ ಇದ್ದವರು ಮಾತ್ರ ಕೃಷಿ ಕೈಗೊಂಡಿದ್ದರು. ಜತೆಗೆ ಹಾಕಿದ ಬಂಡವಾಳ ಕೂಡ ರೈತರನ್ನು ಕೈ ಹಿಡಿದಿರಲಿಲ್ಲ. ಇದರಿಂದ ಬರಗಾಲ ಕೂಡ ಆವರಿಸಿತ್ತು. ಆದರೆ, ಪ್ರಸಕ್ತ ಬಾರಿ ಉತ್ತಮ ಮುಂಗಾರು ಆರಂಭದಲ್ಲಿಯೇ ಆರ್ಭಟಿಸುತ್ತಿದೆ. ಸದ್ಯ ಮಳೆ ಜೋರಾಗಿ ಆರಂಭಗೊಂಡಿದ್ದು, ಎಲ್ಲೆಡೆ ಹರ್ಷ ತುಂಬಿದೆ. ಜತೆಗೆ ರೈತರಲ್ಲಿಯೂ ಮಂದಹಾಸ ಮೂಡಿದೆ.ರೈತರು ಗೋವಿನ ಜೋಳ, ಅಲಸಂದೆ, ಶೇಂಗಾ, ಅರಿಷಿಣ, ತೊಗರಿ ಸೇರಿದಂತೆ ಹಲವು ಬೆಳೆ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಕಳೆದ ವಾರ ಉತ್ತಮವಾಗಿ ಕೃತಿಕಾ ಮಳೆಯಾಗಿತ್ತು. ಈಗ ರೋಹಿಣಿ ಮಳೆ ಕೂಡ ಉತ್ತಮವಾಗುತ್ತಿದ್ದು, ರೈತರು ಹರ್ಷಗೊಂಡಿದ್ದಾರೆ. ಜತೆಗೆ ಬಿತ್ತನೆ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಆರಂಭದಲ್ಲೇ ಉತ್ತಮ ಮಳೆಯಾಗುತ್ತಿರುವುದರಿಂದ ಮುಂದಿನ ಬಹುತೇಕ ಮಳೆಗಳು ಕೂಡ ವರ ತರಲಿವೆ ಎಂಬ ಆಶಾಭಾವ ಅನ್ನದಾತರದ್ದು. ಹೀಗಾಗಿ ಪ್ರಸಕ್ತ ಸಾಲಿನ ವರ್ಷಧಾರೆ ಆಶಾದಾಯಕವಾಗಿ ಕಂಡುಬರುತ್ತಿದೆ. ಲೋಕಾಪುರ ಸುತ್ತಮುತ್ತಲಿನ ದಾದನಟ್ಟಿ, ಹೊಸಕೊಟಿ, ಕಾಡರಕೊಪ್ಪ, ಭಂಟನೂರ, ಚಿಂಚಖಂಡಿ, ಮೆಟಗುಡ್ಡ, ವರ್ಚಗಲ್, ಪಾಲ್ಕಿಮಾನೆ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿ ಹದ ಮಾಡಿಕೊಂಡಿರುವ ರೈತರು ಬಿತ್ತನೆ ಶುರು ಮಾಡಿದ್ದಾರೆ.೮ ದಿನಗಳ ಹಿಂದೆ ರೈತರು ಹೆಸರು ಬಿತ್ತನೆ ಮಾಡಿದ್ದರು, ಆದಾದ ಬಳಿಕ ಬಿಸಿಲು ವಾತಾವರಣದಿಂದ ಆತಂಕಗೊಂಡಿದ್ದರು. ಆದರೆ ಈಗ ಎರಡ್ಮೂರು ದಿನಗಳಿಂದ ಉತ್ತಮ ಮಳೆ ಆಗುತ್ತಿರುವುದರಿಂದ ಹೆಸರಿಗೆ ಜೀವ ಕಳೆ ಬಂದಿದೆ. ರೋಹಿಣಿ ಮಳೆ ಕೈಹಿಡಿದಿರುವುದಿರಂದ ತೊಗರಿ ಮತ್ತು ಮೆಣಸಿನಕಾಯಿ ಬಿತ್ತನೆಯಲ್ಲಿ ರೈತರು ತೊಡಗಿದ್ದಾರೆ.ಬಿತ್ತನೆ ಬೀಜ, ಗೊಬ್ಬರ ದುಬಾರಿ:
ಈಗಾಗಲೇ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಅನ್ನದಾತರು ಅಗತ್ಯ ಬಿತ್ತನೆ ಬೀಜಗಳನ್ನು ಖರೀದಿ ಮಾಡಿ ಬಿತ್ತನೆ ಮಾಡಿದ್ದಾರೆ. ಕೆಲ ರೈತರು ಬೀಜ ದಾಸ್ತಾನು ಮಾಡಿಕೊಂಡಿದ್ದಾರೆ. ಈ ಬಾರಿ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ದರ ದುಬಾರಿ ಆಗಿದೆ. ಬೇಡಿಕೆಯಲ್ಲಿರುವ ಪೋಷಕಾಂಶ ಗೊಬ್ಬರದ ಕೊರತೆ ಕಂಡು ಬಂದಿದೆ. ಹೀಗಾಗಿ ಕೃಷಿ ವೆಚ್ಚ ಹೆಚ್ಚಳವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಕಳೆದ ವರ್ಷ ಮುಂಗಾರು ಕೈಹಿಡಿದಿರಲಿಲ್ಲ, ಈ ಬಾರಿ ವಾಡಿಕೆಗಿಂತ ಉತ್ತಮ ಮಳೆ ಬರುವ ನಿರೀಕ್ಷೆ ಇದೆ. ಈಗಾಗಲೆ ಬಿತ್ತನೆ ಮಾಡಿದ್ದೇವೆ. ವರುಣ ದೇವ ಕೈಹಿಡಿಯಬೇಕು.
-ರಾಮಣ್ಣ ಕಿಲಾರಿ ರೈತ ಲೋಕಾಪುರ