ಮಹಿಳೆಯರಿಂದ ಜಾನಪದದ ಉಳಿವು: ಸಾಹಿತಿ ಪೊಲೀಸ್‌ಪಾಟೀಲ

| Published : Feb 12 2025, 12:33 AM IST

ಸಾರಾಂಶ

ಅಕ್ಷರಲೋಕದ ಕೆಲವರು ಜಾನಪದರ ಜ್ಞಾನವನ್ನೇ ಬಳಸಿಕೊಂಡು ಇಂದು ವಿದ್ವಾಂಸರಾಗಿದ್ದಾರೆ. ಅನಕ್ಷರಸ್ಥರಾಗಿದ್ದರೂ ಅನುಭವದ ಆಳದಿಂದ ಬಂದಂತಹ ನುಡಿಗಳನ್ನು ಅಭಿವ್ಯಕ್ತಿಗೊಳಿಸಿದ ರೀತಿ ಇಂದಿನ ಅಕ್ಷರ ಲೋಕದ ವಿದ್ವಾಂಸರು ಮೆಚ್ಚುವಂಥದ್ದು.

ಧಾರವಾಡ:

ಮಹಿಳೆಯರಿಂದ ಮಾತ್ರ ಜಾನಪದ ಉಳಿಸಲು ಸಾಧ್ಯ. ಜಾನಪದ ಎಂಬುದೇ ಜ್ಞಾನಪದ ಎಂದು ಸಾಹಿತಿ, ತತ್ವಪದ ಹಾಡುಗಾರ ಪ್ರೊ. ಬಿ.ಆರ್. ಪೊಲೀಸ್‌ಪಾಟೀಲ ಹೇಳಿದರು.

ಜಾನಪದ ಸಂಶೋಧನ ಕೇಂದ್ರವು ಆರ್. ಕೃಷ್ಣಮೂರ್ತಿ ಅವರ ದತ್ತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಜಾನಪದ ಕುರಿತು ಉಪನ್ಯಾಸ ಹಾಗೂ ಮಹಿಳೆಯರಿಗಾಗಿ ಜಾನಪದ ಒಡಪುಗಳ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ಅಕ್ಷರಲೋಕದ ಕೆಲವರು ಜಾನಪದರ ಜ್ಞಾನವನ್ನೇ ಬಳಸಿಕೊಂಡು ಇಂದು ವಿದ್ವಾಂಸರಾಗಿದ್ದಾರೆ. ಅನಕ್ಷರಸ್ಥರಾಗಿದ್ದರೂ ಅನುಭವದ ಆಳದಿಂದ ಬಂದಂತಹ ನುಡಿಗಳನ್ನು ಅಭಿವ್ಯಕ್ತಿಗೊಳಿಸಿದ ರೀತಿ ಇಂದಿನ ಅಕ್ಷರ ಲೋಕದ ವಿದ್ವಾಂಸರು ಮೆಚ್ಚುವಂಥದ್ದು. ಅವರ ಒಂದೊಂದು ಒಡಪು, ಒಗಟು, ಗಾದೆ ಮಾತುಗಳು ಅವುಗಳನ್ನು ಅಭಿವ್ಯಕ್ತಿಗೊಳಿಸಿದ ರೀತಿ ಬೆರಗುಗೊಳಿಸುವಂತಹದ್ದು. ಅವೇ ಇಂದು ನಮಗೆ ದಾರಿ ದೀಪಗಳಾಗಿವೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಕರ್ನಾಟಕದ ಉತ್ತರ ಭಾಗದಲ್ಲಿರುವ ಜಾನಪದ ಸಂಪತ್ತನ್ನು ಮಹಿಳೆಯರು ಅದೂ ನಗರ ಪ್ರದೇಶದಲ್ಲಿರುವ ಮಹಿಳೆಯರು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ. ಕನ್ನಡ ಸಂಸ್ಕೃತಿಯ ಇಲಾಖೆಯ ಮೂಲಕ ಮಹಿಳೆಯರಲ್ಲಿರುವ ಜನಪದ ಸತ್ವವನ್ನು ಉಳಿಸಿ ಬೆಳೆಸುವಲ್ಲಿ ಸಹಾಯ ಮಾಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಮರೆತು ಹೋಗುತ್ತಿರುವ ಒಡಪುಗಳನ್ನು ಮಹಿಳೆಯರು ರೂಪಕ ಸಮೇತವಾಗಿ ಪ್ರಸ್ತುತಪಡಿಸಿದ್ದು ಸಂತೋಷ ತಂದಿದೆ ಎಂದರು.

ಹುಬ್ಬಳ್ಳಿಯ ಕಲ್ಯಾಣಿ ಮಹಿಳಾ ಮಂಡಳ ಪ್ರಥಮ ಸ್ಥಾನ, ವೀರಶೈವ ಮಹಿಳಾ ಜಾಗೃತ ಸಮಿತಿ ದ್ವಿತೀಯ ಸ್ಥಾನ, ತೇಜಸ್ವಿನಿ ಹಾಗೂ ವನಸಿರಿ ಮಹಿಳಾ ಮಂಡಳ ಮೂರನೇ ಸ್ಥಾನ ಪಡೆದವು. ಬೆಳ್ಳಿ ಬೆಟ್ಟ ಮಹಿಳಾ ಮಂಡಳ ಹಾಗೂ ಕಸ್ತೂರಿಬಾ ಮಹಿಳಾ ಮಂಡಳ ಸಮಾಧಾನಕರ ಬಹುಮಾನ ಪಡೆದರು. ನಿರ್ಣಾಯಕರಾಗಿ ಸುಜಾತ ಹಡಗಲಿ ಹಾಗೂ ಸರಸ್ವತಿ ಪೂಜಾರ ಇದ್ದರು. ಶಾರದಾ ಕೌದಿ ಸ್ವಾಗತಿಸಿದರು ಖೈರುನ್ನಸಾ ಸಂಗಡಿಗರು ಸ್ವಾಗತ ಗೀತೆ ಹಾಡಿದರು, ವೀಣಾ ಹಿರೇಮಠ ವಂದಿಸಿದರು. ಜಾನಪದ ಕೇಂದ್ರದ ಅಧ್ಯಕ್ಷೆ ವಿಶ್ವೇಶ್ವರ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು.

ಡಾ. ಪ್ರಭಾ ನೀರಲಗಿ, ಗೌರಮ್ಮ ನ್ಯಾಮತಿ, ಭಾರತಿದೇವಿ ರಾಜಗುರು, ಗಿರಿಜಾ ಶಕ್ಕಿ, ಇಂದಿರಾ ಶಶಿಧರ, ಸುನಂದಾ ಹೊಸಮನಿ, ಮಹಾದೇವಿ ಕೊಪ್ಪದ ಇದ್ದರು.