ಸಾರಾಂಶ
ಕನ್ನಡಪ್ರಭವಾರ್ತೆ ಔರಾದ್
ಐತಿಹಾಸಿಕ ಹಿನ್ನೆಲೆ ಹೊಂದಿರುವ ಔರಾದ್ ಪಟ್ಟಣ ಈ ಹಿಂದೆ ವಿಖ್ಯಾತ ನಗರವಾಗಿತ್ತು ಎಂದು ನಿವೃತ್ತ ಪ್ರಾಚಾರ್ಯ ಡಾ.ಜಗನ್ನಾಥ ಮೀಸೆ ಅಭಿಪ್ರಾಯಪಟ್ಟರು.ಪಟ್ಟಣದ ಬಸವ ಮಂಟಪದಲ್ಲಿ ನಡೆದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಔರಾದ್ ಪಟ್ಟಣದ ಕುರಿತು ಶಾಸನಗಳಲ್ಲಿ ಉಲ್ಲೇಖವಿದೆ. ಅವರವಾಡಿ, ಅಮರವಾಡಿಯೇ ಕಾಲಾನಂತರ ಮುಂದೆ ಔರಾದ್ ಆಗಿ ಬದಲಾವಣೆಗೊಂಡಿದೆ ಎಂದು ಪಟ್ಟಣದ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು.
12ನೇ ಶತಮಾನದ ಶ್ರೇಷ್ಠ ವಚನಕಾರ ಸಕಳೇಶ ಮಾದರಸ ಬರೆದ ವಚನಗಳಲ್ಲಿ ಆತ್ಮಶೋಧನೆಗೆ ಅವಕಾಶವಿದೆ. ಶರಣರು ಸ್ಥಾವರಗಳಿಗೆ ಮಹತ್ವ ನೀಡದೇ ಜಂಗಮಕ್ಕೆ ಮಹತ್ವ ನೀಡಿದ್ದರು. ಅಂದು ಎಲ್ಲ ದಾರಿಗಳು ಕಲ್ಯಾಣದತ್ತ ಸಾಗಲು ಬಸವಣ್ಣನವರ ಕಾಯಕ ದಾಸೋಹ ಪರಿಕಲ್ಪನೆಯೇ ಕಾರಣವಾಗಿದೆ ಎಂದರು.ಗುಲ್ಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಮಾತನಾಡಿ, ಲಿಂಗಾಯತರು ಜಾಗೃತರಾಗದೇ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರೆ ಯದು. ಸ್ವತಂತ್ರ ಧರ್ಮ, ಧರ್ಮಗುರು ಇದ್ದಾಗ್ಯೂ ಲಿಂಗಾಯತರು ಮತ್ತೊಂದನ್ನು ಅರಸುತ್ತಾ ಹೋಗುತ್ತಿರುವುದು ವಿಪರ್ಯಾಸ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಯಾಕಾಯ್ತು? ಯಾರು ಮಾಡಿದ್ರು ಎಂಬ ಎರಡೇ ಪ್ರಶ್ನೆಗಳು ಮುಂದಿಟ್ಟುಕೊಂಡು ಸದ್ಯ ಯೋಚಿಸಬೇಕಿದೆ ಎಂದರು.
ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದೇವರು, ಪೂಜ್ಯ ಗುರುಬಸವ ಪಟ್ಟದೇವರು ಆಶೀರ್ವಚನ ನೀಡಿದರು. ಟಿಎಚ್ಒ ಡಾ.ಗಾಯತ್ರಿ ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಸರುಬಾಯಿ ಘುಳೆ, ಶಿವಕುಮಾರ ಘಾಟೆ, ಸಂಗಪ್ಪ ಘಾಟೆ, ಡಾ. ಧನರಾಜ ರಾಗಾ, ಜಂಬಗಿ ಗ್ರಾಪಂ ಅಧ್ಯಕ್ಷೆ ಸುಮನಬಾಯಿ ಪಾಟೀಲ್, ಪಿಡಿಒ ಶರಣಪ್ಪ ಗಾದಗೆ, ಶರಣಪ್ಪ ನಾಗಲಗಿದ್ದೆ, ಜಗನ್ನಾಥ ಮೂಲಗೆ, ಸಂಜೀವಕುಮಾರ ಜುಮ್ಮಾ, ಸಂಗಮೇಶ ಜಾಂತೆ ಸೇರಿದಂತೆ ಇನ್ನಿತರರಿದ್ದರು.