ಬೆಳಗಾವಿ ಕ್ಷೇತ್ರದ ಕೈ ಸೋಲಿಗೆ ಯಾರು ಹೊಣೆ?

| Published : Jun 18 2024, 12:51 AM IST

ಸಾರಾಂಶ

ಮಳೆ ನಿಂತರೂ ಮಳೆಹನಿ ತಟ್ಟುಕ್ಕಲೇ ಇರುತ್ತದೆ ಎಂಬಂತೆ ಲೋಕಸಭಾ ಚುನಾವಣೆ ಮುಗಿದರೂ ಅದರ ಸೋಲು, ಗೆಲುವಿನ ವಿಶ್ಲೇಷಣೆ ಮಾತ್ರ ಇನ್ನೂ ನಿಂತಿಲ್ಲ. ಬೆಳಗಾವಿ ಜಿಲ್ಲೆಯಲ್ಲಿಯೂ ಇದೆ ಪರಿಸ್ಥಿತಿ ಉದ್ಭವವಾಗಿದೆ. ಚಿಕ್ಕೋಡಿ ಮತ್ತು ಬೆಳಗಾವಿ ಎರಡೂ ಕ್ಷೇತ್ರಗಳಲ್ಲಿ ಪರಾಮರ್ಶೆ ಇನ್ನೂ ಮುಗಿಯುತ್ತಿಲ್ಲ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಳೆ ನಿಂತರೂ ಮಳೆಹನಿ ತಟ್ಟುಕ್ಕಲೇ ಇರುತ್ತದೆ ಎಂಬಂತೆ ಲೋಕಸಭಾ ಚುನಾವಣೆ ಮುಗಿದರೂ ಅದರ ಸೋಲು, ಗೆಲುವಿನ ವಿಶ್ಲೇಷಣೆ ಮಾತ್ರ ಇನ್ನೂ ನಿಂತಿಲ್ಲ. ಬೆಳಗಾವಿ ಜಿಲ್ಲೆಯಲ್ಲಿಯೂ ಇದೆ ಪರಿಸ್ಥಿತಿ ಉದ್ಭವವಾಗಿದೆ. ಚಿಕ್ಕೋಡಿ ಮತ್ತು ಬೆಳಗಾವಿ ಎರಡೂ ಕ್ಷೇತ್ರಗಳಲ್ಲಿ ಪರಾಮರ್ಶೆ ಇನ್ನೂ ಮುಗಿಯುತ್ತಿಲ್ಲ.

ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ರಾಜ್ಯದ ಪ್ರಭಾವಿ ಸಚಿವರ ಮಕ್ಕಳೇ ಸ್ಪರ್ಧೆ ಮಾಡಿದ್ದರಿಂದ ರಾಜ್ಯದ ಗಮನ ಕೂಡ ಸೆಳೆದಿದ್ದವು. ಆದರೆ, ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ ಗೆದ್ದರೆ, ಬೆಳಗಾವಿಯಲ್ಲಿ ಮೃಣಾಲ್‌ ಹೆಬ್ಬಾಳಕರ ಪರಾಜಿತಗೊಂಡಿದ್ದಾರೆ. ಆದರೀಗ ಚಿಕ್ಕೋಡಿಗಿಂತ ಬೆಳಗಾವಿಯಲ್ಲಿ ಸೋತಿದ್ದರಿಂದ ಹೆಚ್ಚು ಚರ್ಚಿತ ವಿಷಯವಾಗುತ್ತಿದೆ. ಇದಕ್ಕಾಗಿ ಪರಾಮರ್ಶೆ ಕೂಡ ನಡೆಯಬೇಕು ಎನ್ನುವುದು ಪಕ್ಷದ ಮುಖಂಡರ ಅಭಿಮತ. ಸೋಲಿಗೆ ಯಾರು ಹೊಣೆ?:

ಬಿಜೆಪಿಗಿಂತ ಕಾಂಗ್ರೆಸ್‌ ಇವೆರಡೂ ಕ್ಷೇತ್ರಗಳು ಹೆಚ್ಚು ಪ್ರತಿಷ್ಠಿತವಾಗಿದ್ದವು. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಪ್ರಭಾವಿ ಸಚಿವರ ಮಕ್ಕಳೇ ಸ್ಪರ್ಧೆ ಮಾಡಿದ್ದರು. ಚಿಕ್ಕೋಡಿಯಲ್ಲಿ ರಮೇಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ವಿಜಯಶಾಲಿಯಾದರು. ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ ಹೆಬ್ಬಾಳಕರ ಸೋಲುಂಡರು. ಹೀಗಾಗಿ ಈ ಸೋಲಿಗೆ ಯಾರು ಹೊಣೆ ಎಂಬ ಚರ್ಚೆ ಈಗ ಪರಾಮರ್ಶೆಯ ರೂಪ ಪಡೆದುಕೊಂಡಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿಯಾಗಿ ಸತೀಶ ಜಾರಕಿಹೊಳಿ ಇದ್ದರೂ, ಒಂದರಲ್ಲಿ ಗೆದ್ದು, ಇನ್ನೊಂದರಲ್ಲಿ ಕೈ ಅಭ್ಯರ್ಥಿಗಳು ಸೋಲುಂಡಿದ್ದಾರೆ. ಅಲ್ಲದೆ, ಬೆಳಗಾವಿ ಲೋಕಸಭಾದ ಉಸ್ತುವಾರಿಯೂ ಇವರೇ ಆಗಿದ್ದರು. ಹೀಗಾಗಿ ಜಿಲ್ಲೆಯಲ್ಲಿ ತಮ್ಮ ಹಿಡಿತ ಹೊಂದಿದ್ದರೂ ಕಾಂಗ್ರೆಸ್‌ ಸೋಲಿಗೆ ಕಾರಣವಾದರೂ ಏನು ಎಂಬ ಪ್ರಶ್ನೆ ಈಗ ಎದುರಾಗಿದೆ. ಒಳತಂತ್ರಗಳೇ ಬೇರೆಯಾಗಿದ್ದವು. ಇವುಗಳನ್ನು ಅಭ್ಯರ್ಥಿಗಳು ಅರಿಯುವಲ್ಲಿ, ತಂತ್ರ ರೂಪಿಸುವಲ್ಲಿ ವಿಫಲರಾದರು ಎಂದು ಈ ಹಿಂದೆ ಸಚಿವ ಸತೀಶ ಜಾರಕಿಹೊಳಿ ಅವರೇ ಹೇಳಿದ್ದರು. ಹೀಗಾಗಿ ಇಂತಹ ತಂತ್ರಗಳನ್ನು ಅರಿಯುವಲ್ಲಿ ಅಭ್ಯರ್ಥಿಗಳು ವಿಫಲರಾದರೆ ಎಂಬ ಪ್ರಶ್ನೆ ಕೂಡ ಈಗ ಎದುರಾಗಿದ್ದು, ನಾಯಕರ ನಡುವೆ ಬಹುಚರ್ಚಿತ ವಿಷಯವಾಗಿದೆ.ಇವೆಲ್ಲದರ ನಡುವೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸ್ವಕ್ಷೇತ್ರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೇ ಬಿಜೆಪಿ 50 ಸಾವಿರ ಮತಗಳನ್ನು ಹೆಚ್ಚು ಪಡೆದಿದ್ದು ಕೂಡ ಸ್ವತಃ ಸಚಿವೆಗೂ ತೀವ್ರ ಮುಜುಗರ ಉಂಟು ಮಾಡಿರುವುದರಲ್ಲಿ ಎರಡು ಮಾತಿಲ್ಲ.

ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ತಲಾ ಐದು ಕಾಂಗ್ರೆಸ್‌ ಹಾಗೂ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿವೆ. ಆದರೆ ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸ್ವಪಕ್ಷೀಯ ಹೆಚ್ಚಿನ ವಿರೋಧಿ ಅಲೆಯಿಂದ ಹಾಗೂ ರಾಜಕೀಯ ತಂತ್ರಗಾರಿಕೆಯಿಂದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಶತಾಯಗತಾಯ ಚಿಕ್ಕೋಡಿಯಲ್ಲಿ ತಮ್ಮ ಪುತ್ರಿಯನ್ನು 90834 ಮತಗಳಿಂದ ಗೆಲ್ಲಿಸಿಕೊಂಡು ಬರುವಲ್ಲಿ ಪ್ರಭಾವಿ ಸಚಿವ ಸತೀಶ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಆದರೆ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಐವರು ಕಾಂಗ್ರೆಸ್‌ ಶಾಸಕರಿದ್ದರೂ ಬಿಜೆಪಿ ಅಭ್ಯರ್ಥಿ 1,78,437 ಮತಗಳ ಅಂತರದಿಂದ ಕಾಂಗ್ರೆಸ್‌ ವಿರುದ್ಧ ಗೆಲುವು ಸಾಧಿಸಿದ್ದು, ಇಲ್ಲಿಯೂ ಕಾಂಗ್ರೆಸ್‌ನಲ್ಲಿ ವಿರೋಧಿ ಅಲೆ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೂ ಈ ಬಗ್ಗೆ ಸಚಿವರು ಸೇರಿದಂತೆ, ಜಿಲ್ಲಾ ನಾಯಕರು ಅಭ್ಯರ್ಥಿ ಮೃಣಾಲ್‌ ಸೋಲಿಗೆ ಕಾರಣವಾದವರ ವಿರುದ್ಧ ಇದುವರೆಗೆ ಧ್ವನಿ ಎತ್ತದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಚಿಕ್ಕೋಡಿ ಕ್ಷೇತ್ರಕ್ಕಿಂತ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಮರಾಠ ಮತಗಳಿದ್ದವು. ಆದರೂ ಮರಾಠ ನಾಯಕರೊಂದಿಗೆ ಸಂಪರ್ಕ ಸಾಧಿಸುವಲ್ಲಿ ಕೈ ನಾಯಕರು ವಿಫಲರಾದರೆ ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ. ಈ ಪ್ರಶ್ನೆಯನ್ನು ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕಳೆದ 2021ರ ಲೋಕಸಭಾ ಉಪಚುನಾವಣೆಯನ್ನು ಉದಾಹರಿಸಿ ಮಾತನಾಡಿದ್ದಾರೆ. ಅದರಲ್ಲೂ ಮರಾಠ ಮತಗಳು ಉಪ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಬಂದಿದ್ದರೆ ಈಗ 6ರಿಂದ 7 ಸಾವಿರಕ್ಕೆ ಹೇಗೆ ಸೀಮಿತವಾಯಿತು ಎಂಬುವುದು ವಿಶ್ಲೇಷಿಸಬೇಕಿದೆ ಎಂದು ತಮ್ಮ ನೋವು ಹೊರಹಾಕಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದಲೂ ಬೆಳಗಾವಿಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಎಂಇಎಸ್ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಆದರೆ, ಈ ಬಾರಿ ಆ ರೀತಿ ಆಗಿಲ್ಲ, ಸೋಲಿಗೆ ಅನೇಕ ಕಾರಣಗಳಿವೆ. ಶೀಘ್ರವೇ ಕಾಂಗ್ರೆಸ್‌ ಅಭ್ಯರ್ಥಿ ಸೋಲಿನ ಕುರಿತು ಪರಾಮರ್ಶೆ ನಡೆಸಲಾಗುವುದು.

- ಲಕ್ಷ್ಮೀ ಹೆಬ್ಬಾಳಕರ, ಸಚಿವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.