ಸಾರಾಂಶ
ಕನ್ನಡಪ್ರಭವಾರ್ತೆ ಚಿಕ್ಕಮಗಳೂರು
ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಶಾಸಕ, ಸಚಿವ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿ ರಾಜಕೀಯ ಅನುಭವ ಹೊಂದಿದ್ದಾರೆ. ಅವರು ಇದೇ ಮೊದಲ ಬಾರಿಗೆ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದು, ನೂತನ ಸಂಸದರ ಎದುರು ಕಾಫಿನಾಡಿನಲ್ಲಿ ಹಲವು ಸಮಸ್ಯೆಗಳ ಸವಾಲುಗಳು ಇವೆ.ಕ್ಷೇತ್ರವನ್ನು ಪ್ರತಿನಿಧಿಸಿದ್ದ ಈ ಹಿಂದಿನ ಸಂಸದರು ಕಾಫಿನಾಡಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕೊಂಚ ಮಟ್ಟಿಗೆ ಪ್ರಯತ್ನಿಸಿದ್ದಾರಾದರೂ ಜನರ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ ಎಂಬ ಆರೋಪವೂ ಇದೆ. ಇದು, ಬಿಜೆಪಿ ಮುಖಂಡರ ಆರೋಪವೂ ಸಹ ಆಗಿದೆ.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ನೋಡುಗರಿಗೆ ಕರಾವಳಿ ಮತ್ತು ಮಲೆನಾಡಿನಂತೆ ಭೌಗೋಳಿಕವಾಗಿ ಕಾಣುತ್ತದೆ. ಇದರ ಜತೆಗೆ ಬಯಲುಸೀಮೆ ಪ್ರದೇಶವನ್ನು ಸಹ ಒಳಗೊಂಡಿದೆ. ಹಾಗಾಗಿ ಕ್ಷೇತ್ರದ ಸಮಸ್ಯೆಗಳು ವಿಭಿನ್ನ.ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಡಿಕೆ, ಕಾಫಿ ಬೆಳೆಯನ್ನು ನಂಬಿಕೊಂಡು ಜನರು ಬದುಕುತ್ತಿದ್ದಾರೆ. ಅಡಿಕೆ ಹಾಗೂ ಕಾಫಿ ಉದ್ಯಮ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಮುಖ್ಯವಾಗಿ ಅಡಿಕೆ ಬೆಳೆಗೆ ಉತ್ತಮ ಬೆಲೆ ಇದ್ದರೂ ಹವಾಮಾನ ವೈಫರೀತ್ಯ, ಹಳದಿ ರೋಗ, ಎಲೆಚುಕ್ಕಿ ರೋಗದಿಂದ ಅಡಿಕೆ ಬೆಳೆಗಾರರು ತಮ್ಮ ತೋಟಗಳನ್ನು ಮಾರಾಟ ಮಾಡಿ ನಗರ ಸೇರುವ, ಕೃಷಿಯಿಂದ ವಿಮುಖರಾಗುವಂತಹ ಪರಿಸ್ಥಿತಿಗೆ ತಲುಪಿದ್ದಾರೆ.
ಅಡಿಕೆ ಬೆಳೆಗೆ ತಗುಲಿರುವ ರೋಗಳಿಂದಾಗಿ ಮಲೆನಾಡಿನಲ್ಲಿ ಅನೇಕ ರೈತರು ಆತ್ಮಹತ್ಯೆಗೂ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗೆ ತಗುಲಿರುವ ಹಳದಿ ರೋಗ, ಎಲೆಚುಕ್ಕಿ ರೋಗಗಳ ನಿವಾರಣೆ ನಿಟ್ಟಿನಲ್ಲಿ ನೂತನ ಸಂಸದರು ಅಡಿಕೆ ಸಂಶೋಧನ ಕೇಂದ್ರಕ್ಕೆ ಹೆಚ್ಚು ಅನುದಾನ ತಂದು ಸಂಶೋಧನೆ ಮೂಲಕ ರೋಗಗಳ ನಿವಾರಣೆಗೆ ಒತ್ತು ನೀಡಬೇಕಿದೆ. ಅಲ್ಲದೇ ಅಡಿಕೆ ಸಂಶೋಧನಾ ಕೇಂದ್ರ ಮಲೆನಾಡಿನ ಜನರ ಪಾಲಿಗೆ ಇಲ್ಲದಂತಾಗಿದ್ದು, ಇದಕ್ಕೆ ಜೀವ ನೀಡುವ ಕೆಲಸವನ್ನು ನೂತನ ಸಂಸದರು ಮಾಡಬೇಕಿದೆ. ಅಲ್ಲದೇ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ನೀಗಿಸಲು ಗೋರಕ್ ಸಿಂಗ್ ವರದಿ ಜಾರಿಗೂ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕೆಂಬುದು ಮಲೆನಾಡಿನ ಅಡಿಕೆ ಬೆಳೆಗಾರರ ಆಗ್ರಹವಾಗಿದೆ. ಅಲ್ಲದೇ ಅಡಿಕೆ ಆಮದಿನ ಮೇಲೆ ನಿಯಂತ್ರಣ ಹೇರಬೇಕೆಂಬ ಆಗ್ರಹಕ್ಕೂ ನೂತನ ಸಂಸದರು ಸ್ಪಂದಿಸಬೇಕಿದೆ.ಕಸ್ತೂರಿರಂಗನ್ ವರದಿ ಜಾರಿ ಮಲೆನಾಡಿನ ಜನರ ತಲೆಯ ಮೇಲೆ ತೂಗುಕತ್ತಿಯಂತೆ ಕಾಡುತ್ತಿದ್ದು, ಇದಕ್ಕೆ ಕೇಂದ್ರ ಸರಕಾರದಿಂದ ಶಾಶ್ವತ ಪರಿಹಾರ ಎಂಬುದು ಮರಿಚೀಕೆಯಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಕಾಫಿನಾಡಿನಲ್ಲಿ ಬೃಹತ್ ಹೋರಾಟಗಳೂ ನಡೆದಿದ್ದು, ಕೇಂದ್ರ ಸರಕಾರ ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದರೊಂದಿಗೆ ಹುಲಿ ಯೋಜನೆ, ಡೀಮ್ಡ್ ಅರಣ್ಯ, ಪರಿಸರ ಸೂಕ್ಷ್ಮ ಪ್ರದೇಶ, 4 (1) ನೋಟಿಫಿಕೇಶನ್, ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯದಂತಹ ಅರಣ್ಯ ಯೋಜನೆಗಳು ಮಲೆನಾಡಿನ ಜನರ ನಿದ್ದೆ ಗೆಡಿಸಿದ್ದು, ನೂತನ ಸಂಸದರು ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜವಾಬ್ದಾರಿ ಹೊರಬೇಕಿದೆ.ಬಯಲುಸೀಮೆ
ಇನ್ನು ಬಯಲು ಭಾಗದ ತರೀಕೆರೆ, ಅಜ್ಜಂಪುರ ಹಾಗೂ ಚಿಕ್ಕಮಗಳೂರು ತಾಲೂಕಿನ ಬಯಲು ಪ್ರದೇಶಗಳು ನಿರಂತರವಾಗಿ ಬರಕ್ಕೆ ತುತ್ತಾಗುತ್ತಿದ್ದು, ಈ ತಾಲೂಕುಗಳ ರೈತರು ಬರದಿಂದ ಕಂಗೆಟ್ಟಿದ್ದಾರೆ. ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರಕಾರದಿಂದ ಅನುದಾನ ತರಬೇಕಿದೆ. ಮುಖ್ಯವಾಗಿ ಭದ್ರಾ ಮೇಲ್ದಂಡೆ ಯೋಜನೆಯ ಪೂರ್ಣಕ್ಕೆ ಬಾಕಿ ಇರುವ ಅನುದಾನ ಬಿಡುಗಡೆಗೆ ಪ್ರಯತ್ನಿಸಬೇಕಿದೆ.ಜಿಲ್ಲೆಯಲ್ಲಿ ಉದ್ಯಮ, ಕಾರ್ಖಾನೆಗಳ ಕೊರತೆ ಇದಕ್ಕೆ ಕಾರಣವಾಗಿದ್ದು, ಗಾರ್ಮೇಂಟ್ಸ್‌ನಂತಹ ಬೃಹತ್ ಉದ್ಯಮಗಳ ಸ್ಥಾಪನೆಗೆ ಬಂಡವಾಳ ಹೂಡುವವರನ್ನು ಜಿಲ್ಲೆಯತ್ತ ಆಕರ್ಷಿಸಲು ನೂತನ ಸಂಸದರು ಯೋಜನೆ ರೂಪಿಸಬೇಕಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ಪ್ರವಾಸೋದ್ಯಮ ಕ್ಷೇತ್ರ ಮೂಲ ಸೌಕರ್ಯಗಳ ಕೊರತೆಯಿಂದ ನರಳುತ್ತಿದೆ. ಮಿನಿ ವಿಮಾನ ನಿಲ್ದಾಣ, ಸ್ಪೈಸ್ ಪಾರ್ಕ್‌ನಂತಹ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಇವುಗಳ ಜಾರಿಗೆ ನೂತನ ಸಂಸದರು ಅವಿರತ ಶ್ರಮಿಸಬೇಕಿದೆ ಎಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.