ಅಭಿಷೇಕ್ ಆಚಾರ್ಯ (25) ಹನಿಟ್ರ್ಯಾಪ್‌ಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಕರ್ಮ ಯುವ ಮಿಲನ ಸಂಘಟನೆ ಎಸ್ಪಿ ಹರಿರಾಮ್ ಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ ಕಾರ್ಕಳ ತಾಲೂಕಿನ ಬೆಳ್ಮಣ್ ಎಂಬಲ್ಲಿ ಅಭಿಷೇಕ್ ಆಚಾರ್ಯ (25) ಹನಿಟ್ರ್ಯಾಪ್‌ಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಆತ ಬರೆದಿಟ್ಟಿರುವ ಡೆತ್ ನೋಟ್ ನಿಂದ ಸ್ಪಷ್ಟವಾಗಿದ್ದರೂ, ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ, ತನಿಖೆಯಲ್ಲಿಯೂ ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಕರ್ಮ ಯುವ ಮಿಲನ ಸಂಘಟನೆ ಎಸ್ಪಿ ಹರಿರಾಮ್ ಶಂಕರ್ ಅವರಿಗೆ ಮನವಿ ಮಾಡಿದ್ದಾರೆ.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ಸ್ಥಾಪಕಾಧ್ಯಕ್ಷ ವಿಕ್ರಂ ಆಚಾರ್ಯ, ಅಭಿಷೇಕ್ ಆಚಾರ್ಯ ಡೆತ್ ನೋಟ್‌ನಲ್ಲಿ ನಿರೀಕ್ಷಾ, ರಾಕೇಶ್, ರಾಹುಲ್ ಹಾಗೂ ತಸ್ಲೀಮ್ ಎಂಬವರು ತನ್ನನ್ನು ಹನಿಟ್ರ್ಯಾಪ್ ಮಾಡಿ, ಹಣಕ್ಕಾಗಿ ಪೀಡಿಸುತ್ತಿದ್ದರು. ಹಣ ನೀಡದೇ ಇದ್ದರೆ ತನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ, ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದರು ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ಆದರೆ ಪೊಲೀಸರು ಆತನ ಸಾವಿಗೆ ಪ್ರಚೋದನೆ ನೀಡಿದ, ಕೊಲೆ ಬೆದರಿಕೆ ಹಾಕಿ ಆರೋಪಿಗಳನ್ನು ವಾರ ಕಳೆದರೂ ಬಂಧಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನಿರೀಕ್ಷಾ ಮತ್ತು ಅಭಿಷೇಕ್ ಇಬ್ಬರೂ ಮಂಗಳೂರಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಪರಿಚಯವಾಗಿ ಅವರ ಮಧ್ಯೆ ಸಂಬಂಧ ಬೆಳೆದಿತ್ತು. ಆಕೆ ತಮ್ಮ ನಡುವಿನ ಖಾಸಗಿ ಕ್ಷಣಗಳನ್ನು ಗುಪ್ತವಾಗಿ ಚಿತ್ರೀಕರಿಸಿದ್ದಾಳೆ ಮತ್ತು ಅದನ್ನು ಗಲ್ಫ್ ನಲ್ಲಿರುವ ತಸ್ಲೀಮಾಗೆ ಕಳಹಿಸಿ, ತನ್ನ ಸಹಚರರ ಮೂಲಕ ಆತನನ್ನು ಬ್ಲಾಕ್ ಮೇಲ್ ಮಾಡಿ 3 - 4 ಲಕ್ಷ ರು. ಹಣವನ್ನೂ ಪಡೆದಿದ್ದಾರೆ. ಹಣ ವರ್ಗಾವಣೆಗೆ ಆತನ ಮೊಬೈಲ್‌ನಲ್ಲಿ ಪುರಾವೆಗಳಿವೆ ಎಂದವರು ಹೇಳಿದರು.
ಈ ಗ್ಯಾಂಗ್ ಅಭಿಷೇಕ್ ಮಾತ್ರವಲ್ಲದೇ ಇನ್ನೂ ಕೆಲವರನ್ನು ಇದೇ ರೀತಿ ಬ್ಯಾಕ್ ಮೇಲ್ ಮಾಡಿದ ಮಾಹಿತಿ ಇದೆ. ಆದ್ದರಿಂದ ಪೊಲೀಸರು ತಕ್ಷಣ ತನಿಖೆ ನಡೆಸಿ, ಅಭಿಷೇಕ್‌ನ ಬಡ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದವರು ಆಗ್ರಹಿಸಿದರು.ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ನವೀನ್ ಆಚಾರ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಆಚಾರ್ಯ, ಮೃತರ ಸಂಬಂಧಿ ಸುಕೇಶ್ ಆಚಾರ್ಯ ಇದ್ದರು.