ಸರಳತೆ, ಸಜ್ಜನಿಕೆ, ತಿಳಿವಳಿಕೆಯ ತ್ರಿವೇಣಿ ಸಂಗಮ ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು

| N/A | Published : Mar 23 2025, 01:35 AM IST / Updated: Mar 23 2025, 07:12 AM IST

roshni

ಸಾರಾಂಶ

ಲೋಹಿಯಾ ಪ್ರಕಾಶನದ ಚನ್ನಬಸವಣ್ಣ ಕುರಿತು ಸ್ವಾನ್‌ ಕೃಷ್ಣಮೂರ್ತಿ ಅವರ ಬರಹ.

-ಸ್ವ್ಯಾನ್ ಕೃಷ್ಣಮೂರ್ತಿ 

ಪುಸ್ತಕಗಳು ಜಗತ್ತನ್ನಾಳುತ್ತವೆ’ ಎಂಬುದು ಪ್ರಸಿದ್ಧವಾದ ಮಾತು. ಪುಸ್ತಕಗಳಿಂದ ಜಗತ್ತಿನಲ್ಲಿ ಕ್ರಾಂತಿಯೇ ಆಗಿದೆ. ಮಾನವ ಸಂಸ್ಕೃತಿಯ ಚರಿತ್ರೆಯಲ್ಲಿ ಪುಸ್ತಕಗಳ ಪಾತ್ರ ಅಮೋಘವಾದದ್ದು. ಕನ್ನಡ ಸಂಸ್ಕೃತಿ ಸಾವಿರಾರು ವರ್ಷಗಳಿಂದ ಹರಿದುಬರುವಲ್ಲಿ ಪುಸ್ತಕಗಳ ಪಾತ್ರ ಪ್ರಮುಖವಾದದ್ದು. ಇದನ್ನು ಮನಗಂಡು ಪುಸ್ತಕ ಪ್ರಕಾಶನಗೊಳಿಸುವುದು ಮಹಾ ಆದರ್ಶವೆಂದು ತಿಳಿದು ವೈದುಷ್ಯ, ಸರಳತೆ, ಸಜ್ಜನಿಕೆಗಳ ತ್ರಿವೇಣಿ ಸಂಗಮವಾಗಿ ಲೋಹಿಯಾ ಹೆಸರಿನಲ್ಲಿ ಚನ್ನಬಸವಣ್ಣನವರು ಪುಸ್ತಕ ಪ್ರಕಾಶನದ ಕೆಲಸವನ್ನು ಮಾಡುತ್ತಿದ್ದಾರೆ.

ಕರ್ನಾಟಕ ಕಂಡ ವಿಶಿಷ್ಟ ಪ್ರಕಾಶಕರಾದ ಚನ್ನಬಸವಣ್ಣನವರು ತಮ್ಮ ತಂದೆತಾಯಿಯ ಹೆಸರಿನಲ್ಲಿ ಒಂದು ದತ್ತಿನಿಧಿಯನ್ನು ಸ್ಥಾಪಿಸಿದ್ದಾರೆ. ಅದರಿಂದ ಬರುವ ಬಡ್ಡಿ ಹಣದಲ್ಲಿ ಒಳ್ಳೊಳ್ಳೆಯ ಪುಸ್ತಕಗಳನ್ನು ಅತ್ಯಂತ ಕಡಿಮೆ ಬೆಲೆಗೆ ಸಿಗುವಂತೆ ಪ್ರಕಟಿಸಿ, ಅವು ಹೆಚ್ಚು ಹೆಚ್ಚು ಓದುಗರ ಕೈಸೇರುವಂತೆ ಮಾಡುವರು. ಪ್ರಕಾಶಕರು ಪುಸ್ತಕ ಪ್ರಕಾಶನ ಮಾಡಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಪುಸ್ತಕ ಬಿಡುಗಡೆ ಎಂದರೆ ಮಾರು ದೂರ ಓಡುವ ದಿನಗಳಲ್ಲಿ ಅವರು ಹಲವಾರು ಮಹತ್ವದ ಪುಸ್ತಕಗಳನ್ನು ಪ್ರಕಟಿಸಿದರು. 

ನನ್ನ ಮತ್ತು ಚನ್ನಬಸವಣ್ಣನವರ ಪರಿಚಯಕ್ಕೀಗ ಬೆಳ್ಳಿಹಬ್ಬದ ಸಂಭ್ರಮ. ನಾನು ಲಕ್ಷ್ಮೀ ಮುದ್ರಣಾಲಯದಲ್ಲಿ ಕೆಲಸ ಮಾಡುವ ದಿನಗಳಲ್ಲಿಯೇ ನನ್ನೊಂದಿಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡಿದ್ದರು. ಸ್ವ್ಯಾನ್ ಮುದ್ರಣಾಲಯ ಪ್ರಾರಂಭವಾದ ವಿಷಯವನ್ನು ಕೇಳಿ ಅವರ ಪ್ರಕಾಶನದ ಕೆಲವು ಪುಸ್ತಕಗಳನ್ನು ಮುದ್ರಣಕ್ಕೆ ನೀಡಿ ಪ್ರೋತ್ಸಾಹಿಸುವುದರೊಂದಿಗೆ ನಮ್ಮ ಮುದ್ರಣಾಲಯದ ಬೆಳವಣಿಗೆಗೆ ಕಾರಣೀಭೂತರಾದರು. ಅವರು ಪುಸ್ತಕ ಮುದ್ರಣ ಮಾಡಿಸಲು ಮುದ್ರಣಾಲಯಕ್ಕೆ ಕಾಲಿರಿಸಿದ ಕೂಡಲೇ ಮಾಡುತ್ತಿದ್ದ ಮೊದಲ ಕೆಲಸವೆಂದರೆ ಅವರ ಕೈಚೀಲದಿಂದ ಒಂದೋ ಎರಡೋ ನೋಟಿನ ಕಟ್ಟುಗಳನ್ನು ತೆಗೆದು ಮೊದಲು ನನ್ನ ಕೈಗಿಡುವುದು.ಮುಂದೆ ಮಾತುಕತೆ ಎಲ್ಲ ಮುಗಿದು ಪುಸ್ತಕಗಳ ಅಂದಾಜು ಮುದ್ರಣ ವೆಚ್ಚ ಲೆಕ್ಕಮಾಡಿ ನೋಡಿದಾಗ ನಮ್ಮ ವೆಚ್ಚಕ್ಕಿಂತ ಹೆಚ್ಚಿನ ಹಣವನ್ನೇ ಮುಂಗಡವಾಗಿ ಕೊಟ್ಟಿರುತ್ತಿದ್ದರು. 

ಬಾಕಿ ಹಣವನ್ನು ಹಿಂದಿರುಗಿಸಲು ಮುಂದಾದಾಗ, ಬೇಡ, ಉಳಿದ ಹಣವನ್ನು ಆಹ್ವಾನ ಪತ್ರಿಕೆ ಹಾಗೂ ಫ್ಲೆಕ್ಸ್ ಮುದ್ರಣಕ್ಕೆ ಬಳಸಿಕೊಳ್ಳಿ ಎಂದುಬಿಡುತ್ತಿದ್ದರು. ಮುದ್ರಣ ವೆಚ್ಚವನ್ನು ಲೆಕ್ಕಮಾಡುವಾಗ ನಾನು ಅತ್ಯಂತ ಕಡಿಮೆ ಬೆಲೆಗೆ ಪುಸ್ತಕವನ್ನು ಮಾರುವವನಾದ್ದರಿಂದ ನಮ್ಮ ಮೇಲೆ ಔದಾರ್ಯವಿರಲಿ ಎಂದು ಮನವಿ ಮಾಡುತ್ತಿದ್ದರೇ ಹೊರತು ಎಂದೂ ಚೌಕಾಸಿ ಮಾಡುವ ಜಾಯಮಾನದವರಲ್ಲ. ಚನ್ನಬಸವಣ್ಣ ಅವರು ತಮ್ಮ ಪ್ರಕಾಶನದಿಂದ ಹೊರಬರುವ ಪುಸ್ತಕಗಳಿಗೆ ಅತ್ಯಂತ ಕಡಿಮೆ ಬೆಲೆ ಇಟ್ಟರೂ, ಗುಣಮಟ್ಟಕ್ಕೆ ಪ್ರಾಧಾನ್ಯ ನೀಡುತ್ತಿದ್ದರು. ಮುಖಪುಟ, ಒಳಪುಟ ವಿನ್ಯಾಸ ವಿಭಿನ್ನವಾಗಿ ಬರುವಂತೆ ನೋಡಿಕೊಳ್ಳುತ್ತಿದ್ದರು.

 ಮುದ್ರಣಕ್ಕೆ ಕಾಗದ ಬಳಕೆಯಲ್ಲಿ ಕೂಡ ಗುಣಮಟ್ಟಕ್ಕೆ ಎಂದೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಪುಸ್ತಕ ಮುದ್ರಣವನ್ನು ಕಾಟಾಚಾರಕ್ಕೆ ಮುಗಿಸುವುದಲ್ಲ. ಎಲ್ಲ ರೀತಿಯಲ್ಲೂ ಶೋಭಾಯಮಾನವಾಗಿ ಪುಸ್ತಕ ಅಚ್ಚಾಗಬೇಕು ಎಂಬ ಹಂಬಲದಿಂದ ಅವರು ಹೊರತಂದ ಒಂದೊಂದು ಕೃತಿಯೂ ವರ್ಣಮಯವಾಗಿ, ವೈವಿಧ್ಯಪೂರ್ಣವಾಗಿ, ಸುಂದರವಾಗಿ ಮುದ್ರಣಗೊಂಡು ಓದುಗರ ಕಣ್ಮನಸ್ಸುಗಳನ್ನು ಗೆಲ್ಲುತ್ತಿದ್ದವು.ಮುದ್ರಣವಾಗಿ ಬಂದ ಅವರ ಪುಸ್ತಕಗಳ ಮೊದಲ ಪ್ರತಿಗಳನ್ನು ನೋಡಲು ಅವರೆಷ್ಟು ಕಾತರರಾಗಿರುತ್ತಿದ್ದರೆಂದರೆ, ನಾವು ಪುಸ್ತಕಗಳ ಕಟ್ಟನ್ನು ಪಾರ್ಸೆಲ್ ಹಾಕಿದ ಮಾರನೇ ದಿನ ಮುಂಜಾನೆಯ ಸೂರ್ಯೋದಯಕ್ಕೆ ಮೊದಲೇ, ಪಾರ್ಸೆಲ್ ಹೊತ್ತ ಬಸ್ಸು ಬಳ್ಳಾರಿ ಪ್ರವೇಶಿಸುವ ಮುಂಚೆಯೇ ಪಾರ್ಸೆಲ್ ಕಚೇರಿಯ ಮುಂದೆ ಕಾಯುತ್ತ ನಿಂತುಬಿಡುತ್ತಿದ್ದರು.

 ಬಸ್ ಕಚೇರಿಯ ಬಳಿ ಬಂದು ಪುಸ್ತಕದ ಕಟ್ಟುಗಳನ್ನು ಅಲ್ಲಿನ ನೌಕರರು ಇಳಿಸುವಾಗಲೇ ತಮ್ಮ ಪುಸ್ತಕದ ಕಟ್ಟುಗಳನ್ನು ಪ್ರತ್ಯೇಕಿಸಿಕೊಂಡು, ಮನೆಗೊಯ್ದು ಕಟ್ಟುಗಳನ್ನು ಬಿಚ್ಚಿ ಪುಸ್ತಕಗಳನ್ನು ಕಂಡು ಸಂಭ್ರಮಿಸುತ್ತಿದ್ದರು. ಕೂಡಲೇ ನಮಗೆ ಕರೆ ಮಾಡಿ ಒಂದೆರಡು ಪ್ರೋತ್ಸಾಹದಾಯಕ ಮಾತುಗಳನ್ನು ಆಡಿದ ಮೇಲೆಯೇ ಅವರಿಗೆ ಸಮಾಧಾನ. ಕೆಲವೊಮ್ಮೆ ಬಸ್ಸು ಬರುವುದು ತಡವಾದರೆ ಅಥವಾ ಪುಸ್ತಕಗಳ ಕಟ್ಟು ಮುಟ್ಟಲಾಗದಿದ್ದರೆ ಚಡಪಡಿಸಿ ಬಲು ಬೇಸರದಿಂದ ಮನೆಗೆ ಹಿಂದಿರುಗುತ್ತಿದ್ದರು. 

ಪುಸ್ತಕ ಬಿಡುಗಡೆ ಮತ್ತು ಸಾಹಿತ್ಯ ಕಾರ್ಯಕ್ರಮಗಳೆಲ್ಲ ಬಹುಮಟ್ಟಿಗೆ ಬೆಂಗಳೂರನ್ನೇ ಕೇಂದ್ರೀಕರಿಸಿವೆ ಎಂಬ ಕೂಗು ಮೊದಲಿನಿಂದಲೂ ಕೇಳಿಬರುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಚನ್ನಬಸವಣ್ಣನವರು ಏಕಕಾಲದಲ್ಲಿ ಕರ್ನಾಟಕದ ನಾನಾ ಭಾಗಗಳಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ವಿಶಿಷ್ಟವಾಗಿ ಆಯೋಜಿಸಿ ದಾಖಲೆ ನಿರ್ಮಿಸಿದ್ದಾರೆ. ಈ ರೀತಿ ಬಹುಸಂಖ್ಯೆಯ, ಬಗೆಬಗೆಯ ಸಾಹಿತ್ಯ ಪ್ರಕಾರಗಳ ಪುಸ್ತಕಗಳನ್ನು ಪ್ರಕಟಿಸಿ, ಅನೇಕ ಲೇಖಕರನ್ನು ಬೆಳೆಸಿ ಮುನ್ನೆಲೆಗೆ ತಂದ ಹೆಗ್ಗಳಿಕೆ ಚನ್ನಬಸವಣ್ಣನವರದು.ಒಂದು ಪ್ರಕಾಶನ ಸಂಸ್ಥೆಯನ್ನು ಯಶಸ್ವಿಯಾಗಿ, ನಿರಂತರವಾಗಿ ಮತ್ತು ದೀರ್ಘಕಾಲದವರೆಗೆ ನಡೆಸಿಕೊಂಡು ಬರುವುದು ಬಹು ಪ್ರಯಾಸದ ಕೆಲಸ. 

ಇದಕ್ಕಾಗಿ ದೊಡ್ಡ ಪ್ರಮಾಣದ ಬಂಡವಾಳವನ್ನು ಹಾಕಬೇಕಾಗುತ್ತದೆ. ಸರ್ಕಾರವು ಸಗಟುರೂಪದಲ್ಲಿ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಕೊಳ್ಳದೇ ಇರುವುದರಿಂದ ಪ್ರಕಾಶನ ಸಂಸ್ಥೆಗಳು ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿವೆ. ಪರಿಸ್ಥಿತಿ ಹೀಗಿರುವಾಗ ಪುಸ್ತಕಸಂಸ್ಕೃತಿಯನ್ನು ಉಳಿಸಿ ಬೆಳೆಸಲು, ಗ್ರಂಥಾಲಯದ ಸಗಟುಖರೀದಿಯನ್ನು ನೆಚ್ಚಿಕೊಳ್ಳದೆ, ಪ್ರಕಾಶನದಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಸದ್ದುಗದ್ದಲವಿಲ್ಲದೆ ಗಡಿಭಾಗದ ಬಳ್ಳಾರಿಯಲ್ಲಿ ಇದ್ದುಕೊಂಡೇ ಶ್ರಮಪಟ್ಟು ಸಾಧನೆ ಮಾಡಿದವರು ಚನ್ನಬಸವಣ್ಣನವರು.

 2014ರಲ್ಲಿ ಡಾ.ಸರಜೂ ಕಾಟ್ಕರ್ ಅವರು ನಿರೂಪಿಸಿದ, ಪಾಟೀಲ ಪುಟ್ಟಪ್ಪನವರ ಆತ್ಮಚರಿತ್ರೆ ‘ನಾನು ಪಾಟೀಲ ಪುಟ್ಟಪ್ಪ’ ಭಾಗ-1 ಹಾಗೂ ಭಾಗ- 2 ಈ ಎರಡು ಪುಸ್ತಕಗಳನ್ನು ಮುದ್ರಿಸುವಾಗ ಎರಡು ಮೂರು ಬಾರಿ ಪಾಪು ಅವರೊಂದಿಗೆ ಪುಸ್ತಕ ಮುದ್ರಣ ಸಂಬಂಧಿತ ವಿಷಯಗಳ ಬಗ್ಗೆ ಅವರ ಹತ್ತಿರದಲ್ಲಿ ಕೂತು ಚರ್ಚಿಸಲು ಅವಕಾಶ ದೊರೆತಿದ್ದು ನನ್ನ ಪುಣ್ಯ. ಇಷ್ಟು ಮಾತ್ರವಲ್ಲದೆ ಈ ಪುಸ್ತಕಗಳ ಬಿಡುಗಡೆ ಸಮಾರಂಭವು ರಾಜಭವನದಲ್ಲಿ ನಡೆದಿದ್ದರಿಂದ ಕಾರ್ಯಕ್ರಮದ ನೆಪದಲ್ಲಿ ರಾಜ್ಯಪಾಲರನ್ನು ಹತ್ತಿರದಿಂದ ನೋಡುವ, ಅವರಿಂದ ಗೌರವಪ್ರತಿ ಸ್ವೀಕರಿಸುವ ಹಾಗೂ ಅವರೊಟ್ಟಿಗೆ ಕುಳಿತು ತಿಂಡಿ ತಿನ್ನುವ ಸುವರ್ಣಾವಕಾಶ ದೊರೆಯಿತು. ಇದನ್ನು ಕಲ್ಪಿಸಿಕೊಟ್ಟವರು ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು. ಅವರ ಪ್ರಕಾಶನದ ಹಲವು ಪುಸ್ತಕಗಳನ್ನು ನಾವೇ ಮುದ್ರಿಸಿದೆವು. 

ಚನ್ನಬಸವಣ್ಣ ಅವರು ಬಲು ಶಿಸ್ತಿನ ವ್ಯಕ್ತಿ, ಸಮಯ ಪಾಲಕರು, ಆದರೆ ತುಸು ಕೋಪ ಜಾಸ್ತಿ..! ಏನೇ ಎಡವಟ್ಟಾದರೂ ಸಿಟ್ಟಾಗಿಬಿಡುತ್ತಿದ್ದರು. ಏಕಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ನಡೆಯುತ್ತಿದ್ದ ಅವರ ಪ್ರಕಾಶನದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಗಳಿಗೆ ಆಹ್ವಾನ ಪತ್ರಿಕೆ, ಬಿಡುಗಡೆ ಪುಸ್ತಕದ ಪ್ಯಾಕಿಂಗ್, ಮಾರಾಟಕ್ಕೆ ಪುಸ್ತಕಗಳು, ಫ್ಲೆಕ್ಸ್, ಆಯಾ ಪುಸ್ತಕದ ಲೇಖಕರಿಗೆ ಅವರ ಪುಸ್ತಕದ ಮುಖಪುಟವನ್ನು ದೊಡ್ಡ ಅಳತೆಯಲ್ಲಿ ಲ್ಯಾಮಿನೇಷನ್ ಮಾಡಿಸಿದ ವಿಶೇಷ ಸ್ಮರಣಿಕೆ ಇವುಗಳೆಲ್ಲ ನಮ್ಮಲ್ಲೇ ಸಿದ್ಧವಾಗುತ್ತಿದ್ದವು.

 ಈ ರೀತಿ ಸಿದ್ಧವಾದ ಕಾರ್ಯಕ್ರಮದ ಅವಶ್ಯ ವಸ್ತುಗಳನ್ನು ರಾಜ್ಯದ ನಾನಾ ಭಾಗಗಳಿಗೆ ಅವರು ಪತ್ರದಲ್ಲಿ ಬರೆದುಕೊಟ್ಟ ರೀತಿಯಲ್ಲೇ ಪ್ಯಾಕ್ ಮಾಡಿಸಿ ಕಳಿಸಬೇಕಾಗುತ್ತಿತ್ತು. ಒಮ್ಮೊಮ್ಮೆ ಸಣ್ಣಪುಟ್ಟ ಏರುಪೇರು ಆಗಿ ಚೆನ್ನಾಗಿ ಬೈಸಿಕೊಂಡದ್ದು ಇನ್ನೂ ನನ್ನ ಕಣ್ಣಿಗೆ ಕಟ್ಟಿದ ಹಾಗೇ ಇದೆ. ಅವರ ಸಿಟ್ಟು ಸೆಡವುಗಳ ಜೊತೆ ತಂದೆಯ ಪ್ರೀತಿ ವಾತ್ಸಲ್ಯವನ್ನೂ ಹಲವು ಬಾರಿ ಅವರ ಮೊಗದಲ್ಲಿ ಕಂಡೆ. ಈಗ ಪುಸ್ತಕ ಪ್ರಕಾಶನವನ್ನು ತುಂಬ ಕಡಿಮೆ ಮಾಡಿದ್ದರೂ, ಬೆಂಗಳೂರಿಗೆ ಬಂದಾಗಲೆಲ್ಲ ನಮ್ಮ ಮುದ್ರಣಾಲಯಕ್ಕೆ ಭೇಟಿಯಿತ್ತು, ನನ್ನನ್ನು ಕರೆದುಕೊಂಡು ಮಲ್ಲಿಗೆ ಆಸ್ಪತ್ರೆಯ ಬಳಿ ಇರುವ, ಅವರಿಗೆ ಬಲು ಪ್ರಿಯವಾದ ಜನಾರ್ದನ್ ಹೋಟೆಲ್‌ನಲ್ಲಿ ಊಟ ಮಾಡಿಸಿ, ನಮ್ಮ ಯೋಗಕ್ಷೇಮ ವಿಚಾರಿಸಿಕೊಂಡೇ ಹೋಗುವುದು ಅವರ ಪ್ರೀತಿಯ ಅಭ್ಯಾಸ.

ಚನ್ನಬಸವಣ್ಣನವರು ಪುಸ್ತಕ ಪ್ರಕಾಶಕರಾಗುವುದರ ಜೊತೆಗೆ ಒಳ್ಳೆಯ ಓದುಗರೂ ಕೂಡ. ಬೇರೆ ಬೇರೆ ಪ್ರಕಾಶಕರ ಒಳ್ಳೆಯ ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸ ಇವರ ಹವ್ಯಾಸಗಳಲ್ಲೊಂದು. ಹೀಗೆ ಓದಿ ಉತ್ತಮ ಎನ್ನಿಸುವ ಪುಸ್ತಕದ 25- 50 ಪ್ರತಿಗಳನ್ನು ಕೊಂಡು, ಸಾಹಿತ್ಯಾಸ್ತಕರಿಗೆ ಕೊಟ್ಟು ಓದಿಸುವ ವಿಶಿಷ್ಟವಾದ ಅಭ್ಯಾಸ ಇವರಿಗಿದೆ. ಬೇರೆಯೇ ದಾರಿಯಲ್ಲಿ ಸಾಗಬೇಕಿದ್ದ ನನ್ನ ಜೀವನದ ಪಯಣ ಆಕಸ್ಮಿಕವಾಗಿ ಮುದ್ರಣಲೋಕದೆಡೆ ಪ್ರವೇಶಿಸಿತು. 

ಇಲ್ಲಿ ಶ್ರದ್ಧೆಯಿಂದ ಕೆಲಸ ಕಲಿತು, ಸ್ವಂತದ್ದಾಗಿ ಏನಾದರೂ ಮಾಡಬೇಕೆನ್ನುವ ಸಂಕಲ್ಪವಿರಿಸಿಕೊಂಡು ಪ್ರಾಮಾಣಿಕವಾಗಿ ದುಡಿದೆ. ಅದರಿಂದ ಸಾಹಿತ್ಯ, ಸಂಸ್ಕೃತಿ, ಕಲೆ, ರಾಜಕಾರಣ ಮುಂತಾದ ಕ್ಷೇತ್ರಗಳ ದಿಗ್ಗಜರನ್ನು ಭೇಟಿ ಮಾಡುವುದು, ಒಡನಾಡುವುದು, ವಿಶ್ವಾಸಕ್ಕೆ ಪಾತ್ರನಾಗುವುದು ಸಾಧ್ಯವಾಯಿತು; ಅವರ ಸಾಂಗತ್ಯ ಎನ್ನುವುದು ಚಿರಕಾಲ ಉಳಿಯುವ ನೆನಪಾಯಿತು ಎಂದು ಒಮ್ಮೊಮ್ಮೆ ಆಶ್ಚರ್ಯವೂ ಜೊತೆಗೆ ಹೆಮ್ಮೆಯೂ ಆಗುತ್ತದೆ.