ಸಾರಾಂಶ
ಭಾರತದ ಇತಿಹಾಸದಲ್ಲಿ ʻಮಹಾಡ್ ಕೆರೆಯ ಪ್ರಸಂಗʼ ಮಹತ್ವದ್ದಾಗಿದೆ. ಮಹಾರಾಷ್ಟ್ರದ (ಆಗ ಬಾಂಬೆ ಪ್ರಾಂತ್ಯಕ್ಕೆ ಒಳಪಟ್ಟಿತ್ತು) ಮಹಾಡ್‌ನಲ್ಲಿನ ಕೆರೆಯ ನೀರನ್ನು ದಲಿತರು ಮುಟ್ಟಲೂ ಅವಕಾಶವಿಲ್ಲದ ಸಂದರ್ಭದಲ್ಲಿ ಡಾ। ಬಿ.ಆರ್.ಅಂಬೇಡ್ಕರ್ ಅವರು ಚೌಡರ್ ಕೆರೆಯಲ್ಲಿ ನೀರು ಕುಡಿದರು.
ಡಾ। ಪದ್ಮಿನಿ ನಾಗರಾಜು, ಬೆಂಗಳೂರು
ಭಾರತದ ಇತಿಹಾಸದಲ್ಲಿ ʻಮಹಾಡ್ ಕೆರೆಯ ಪ್ರಸಂಗʼ ಮಹತ್ವದ್ದಾಗಿದೆ. ಮಹಾರಾಷ್ಟ್ರದ (ಆಗ ಬಾಂಬೆ ಪ್ರಾಂತ್ಯಕ್ಕೆ ಒಳಪಟ್ಟಿತ್ತು) ಮಹಾಡ್‌ನಲ್ಲಿನ ಕೆರೆಯ ನೀರನ್ನು ದಲಿತರು ಮುಟ್ಟಲೂ ಅವಕಾಶವಿಲ್ಲದ ಸಂದರ್ಭದಲ್ಲಿ ಡಾ। ಬಿ.ಆರ್.ಅಂಬೇಡ್ಕರ್ ಅವರು ಚೌಡರ್ ಕೆರೆಯಲ್ಲಿ ನೀರು ಕುಡಿದರು. ಅವರನ್ನು ಅನುಸರಿಸಿ ಸಾವಿರಾರು ದಲಿತರು ನೀರು ಕುಡಿದ ಐತಿಹಾಸಿಕ ಘಟನೆಯನ್ನು ನೆನೆಯುವ ಸಂದರ್ಭದಲ್ಲಿ ಅಂದು ಅಲ್ಲಿ ದಲಿತ ಮಹಿಳೆಯರನ್ನು ಉದ್ದೇಶಿಸಿ ಅವರು ಮಾಡಿದ ಭಾಷಣವೂ ಕೂಡ ಆ ಮಹಿಳೆಯರ ಬದುಕಿನ ದಿಕ್ಕನ್ನೇ ಬದಲಿತು.
೨೭ನೆಯ ಡಿಸೆಂಬರ್ ೧೯೨೭ರಂದು ಮಧ್ಯಾಹ್ನ ಪರಿಷತ್ತನ್ನು ಮುಗಿಸಿ ಪ್ರತಿನಿಧಿಗಳು ಊಟಕ್ಕೆಂದು ಮಂಟಪಕ್ಕೆ ತೆರಳಿದರು ಹಾಗೂ ಡಾ। ಬಾಬಾಸಾಹೇಬ್ ಅಂಬೇಡ್ಕರ್ ಅವರು ವಾಸಿಸಲು ವ್ಯವಸ್ಥೆ ಮಾಡಿದ್ದ ಪರಿಷತ್ತಿನ ಆಫೀಸಿಗೆ ಹೋದರು. ಅವರಲ್ಲಿ ಹೋಗಿ ಕುಳಿತುಕೊಳ್ಳಬೇಕು ಅನ್ನುವಷ್ಟರಲ್ಲಿ ಅವರನ್ನು ಕಾಣಲು ಹೆಂಗಸರ ದಂಡೇ ಬಂತು. ಈ ಹೆಂಗಸರು ಒಂಬತ್ತು ಹತ್ತು ಮೈಲಿಗಳಷ್ಟು ದೂರದಿಂದ ಡಾ। ಅಂಬೇಡ್ಕರ್ ಅವರನ್ನು ಕಾಣಲೆಂದೇ ಬಂದಿದ್ದರು. ಡಾ। ಅಂಬೇಡ್ಕರ್ ಅವರನ್ನು ಕಾಣುವ ಬಯಕೆ ಅವರಿಗೆಷ್ಟಿತ್ತೆಂದರೆ ಅವರಲ್ಲಿಯ ಕೆಲವು ಹೆಂಗಸರು ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರು.
ಎಷ್ಟು ಪ್ರೀತಿಯಿಂದ ಇಷ್ಟೊಂದು ಹೆಂಗಸರು ತನ್ನನ್ನು ಕಾಣಲು ಬಂದಿದ್ದಾರೆ ಅನ್ನುವುದರ ಲಾಭ ಪಡೆದು ಡಾ। ಅಂಬೇಡ್ಕರ್ ಅವರು ಅವರನ್ನೆಲ್ಲ ಕೂರಿಸಿ ‘ನಿಮಗೆ ಕೆಲವು ಸಮಾಜ ಹಿತದ ಮಾತುಗಳನ್ನು ನಾನು ಹೇಳಬಯಸುತ್ತೇನೆ. ಹಾಗಾಗಿ ನೀವು ಸಾಯಂಕಾಲ ಪರಿಷತ್ತಿಗೆ ಬನ್ನಿರೆಂದು ವಿನಂತಿಸಿಕೊಳ್ಳುತ್ತೇನೆʼ ಅಂದರು. ಅವರ ವಿನಂತಿಗೆ ಬೆಲೆ ಕೊಟ್ಟು ಎಲ್ಲ ಹೆಂಗಸರು ಅಲ್ಲಿಯೇ ಉಳಿದರು. ಮಧ್ಯಾಹ್ನ ನಿರ್ಧರಿಸಿದ್ದಂತೆ ಎಲ್ಲ ಮಹಿಳೆಯರು ಸಂಕೋಚಬಿಟ್ಟು ಮಂಟಪದಲ್ಲಿ ಬಂದು ಕುಳಿತಿದ್ದರು. ಅವರಿಗೆ ಕುಳಿತುಕೊಳ್ಳಲು ಮಧ್ಯದಲ್ಲಿ ಜಾಗ ಬಿಡಲಾಗಿತ್ತು. ಡಾ। ಅಂಬೇಡ್ಕರ್ ಅವರನ್ನುದ್ದೇಶಿಸಿ ಮಾತನಾಡುತ್ತಾ, ‘ನೀವೆಲ್ಲಾ ಈ ಸಭೆಗೆ ಬಂದಿರುವುದು ನೋಡಿ ನನಗೆ ತುಂಬಾ ಖುಷಿಯಾಗುತ್ತಿದೆ. ಮನೆಯ ಸಮಸ್ಯೆಗಳನ್ನು ಗಂಡು-ಹೆಣ್ಣು ಸೇರಿ ಬಿಡಿಸುವಂತೆ, ಸಮಾಜದ ಸಮಸ್ಯೆಗಳನ್ನು ಕೂಡ ಇವರಿಬ್ಬರೂ ಸೇರಿ ಬಿಡಿಸಬೇಕು. ಕೇವಲ ಗಂಡಸರೇ ಈ ಜವಾಬ್ದಾರಿಯನ್ನು ಹೊತ್ತರೆ ಅವರಿಗೆ ಸಮಯ ಬೇಕಾಗಬಹುದು ಅನ್ನುವುದರಲ್ಲಿ ಅನುಮಾನವಿಲ್ಲ. ಹೆಂಗಸರು ಈ ಕೆಲಸದಲ್ಲಿ ಬೇಗ ಯಶಸ್ಸು ಗಳಿಸಬಹುದು ಎಂದು ನನಗೆ ಅನ್ನಿಸುತ್ತದೆ. ತಾವೊಬ್ಬರೇ ಈ ಜವಾಬ್ದಾರಿ ವಹಿಸಲಾರೆ ಎನಿಸಿದರೆ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಗಂಡಸರಿಗೆ ಸಹಾಯ ಮಾಡಬಹುದು. ಅದಕ್ಕಾಗಿ ನೀವು ಇನ್ನು ಮುಂದೆ ಪರಿಷತ್ತುಗಳಲ್ಲಿ ಭಾಗವಹಿಸಿ. ನಿಜ ಹೇಳಬೇಕೆಂದರೆ ಅಸ್ಪೃಶ್ಯತೆಯನ್ನು ತೊಲಗಿಸುವ ಕೆಲಸ ಗಂಡಸರದ್ದು ಅಲ್ಲ ಹೆಂಗಸರದ್ದೇ.
ನೀವು ನಮ್ಮಂತಹ ಗಂಡಸರಿಗೆ ಜನ್ಮ ಕೊಟ್ಟಿದ್ದೀರಿ. ಜನರೆಲ್ಲ ನಮ್ಮನ್ನು ಹೇಗೆ ಪ್ರಾಣಿಗಿಂತಲೂ ಕಡೆಯಾಗಿ ಕಾಣುತ್ತಾರೆ ಅನ್ನುವುದು ನಿಮಗೆ ಗೊತ್ತಿದೆ. ನಮ್ಮ ನೆರಳು ಅವರಿಗೆ ಆಗುವುದಿಲ್ಲ. ಉಳಿದವರಿಗೆ ಕೋರ್ಟು ಕಚೇರಿಗಳಲ್ಲಿ ಗೌರವದ ಹುದ್ದೆಗಳು ಸಿಗುತ್ತದೆ. ಆದರೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಪೊಲೀಸ್ ಖಾತೆಯಲ್ಲಿ ಸಿಪಾಯಿ ಹುದ್ದೆಯು ಸಿಗುವುದಿಲ್ಲ ಅನ್ನುವಷ್ಟು ನಮ್ಮದು ಹೀನ ದರ್ಜೆಯಾಗಿದೆ. ಹೀಗೆಲ್ಲ ಇರುವಾಗ ನೀವು ಏಕೆ ನಮ್ಮನ್ನು ಹುಟ್ಟಿಸಿದ್ದೀರಿ ಅನ್ನುವ ಪ್ರಶ್ನೆಯನ್ನು ನಿಮ್ಮ ಮಕ್ಕಳು ಕೇಳಿದರೆ ನೀವೇನು ಉತ್ತರ ಹೇಳುವಿರಿ? ಇಲ್ಲಿ ಕುಳಿತಿರುವ ಕಾಯಸ್ಥ ಹಾಗೂ ಇತರ ಮೇಲ್ಜಾತಿಯ ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲಿ, ನಿಮ್ಮ ಹೊಟ್ಟೆಯಲ್ಲಿ ಹುಟ್ಟಿರುವ ನಮ್ಮಂತಹ ಮಕ್ಕಳಲ್ಲಿ ಯಾವ ವ್ಯತ್ಯಾಸವಿದೆ? ಬ್ರಾಹ್ಮಣ ಹೆಣ್ಣಿನಲ್ಲಿ ಇರುವಷ್ಟೇ ಶೀಲ ನಿಮ್ಮಲ್ಲೂ ಇದೆ. ಬ್ರಾಹ್ಮಣ ಹೆಣ್ಣಿನಲ್ಲಿರುವ ಪಾತಿವ್ರತ್ಯ ನಿಮ್ಮಲ್ಲೂ ಇದೆ ಅನ್ನುವುದರ ಬಗ್ಗೆ ನೀವು ಯೋಚಿಸಬೇಕು. ನಿಮ್ಮಲ್ಲಿರುವ ದೃಢ ನಿರ್ಧಾರ, ಮನೋಧೈರ್ಯ ಹಾಗೂ ಶಕ್ತಿ ಮಾತ್ರ ಬ್ರಾಹ್ಮಣ ಸ್ತ್ರೀಯರಲ್ಲಿ ಇಲ್ಲ. ಹೀಗಿರುವಾಗ ಬ್ರಾಹ್ಮಣ ಮಹಿಳೆಯ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗೆ ಗೌರವ ಹಾಗೂ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗೆ ಎಲ್ಲೆಡೆ ಉಪೇಕ್ಷೆ, ಅವಮಾನ. ನಿಮ್ಮ ಮಗುವಿಗೂ ಮನುಷ್ಯತ್ವದ ಹಕ್ಕು ಸಿಗಬಾರದೆ ಅನ್ನುವುದರ ಬಗ್ಗೆ ಎಂದಾದರು ಯೋಚಿಸಿದ್ದೀರಾ? ನನಗನಿಸಿದ ಮಟ್ಟಿಗೆ ನೀವು ಅದರ ಬಗ್ಗೆ ಎಂದೂ ಯೋಚಿಸಿಲ್ಲ’.
‘ನೀವು ಯೋಚಿಸಿದ್ದೇ ಆಗಿದ್ದರೆ ಗಂಡಸರಿಗಿಂತ ಮೊದಲು ನೀವೇ ಸತ್ಯಾಗ್ರಹ ಪ್ರಾರಂಭ ಮಾಡುತ್ತಿದ್ದೀರಿ. ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ್ದೇವೆ ಅನ್ನುವುದಷ್ಟೇ ನಾವು ಮಾಡಿರುವ ಪಾಪ. ಇತರ ಹೆಂಗಸರ ಹೊಟ್ಟೆಯಲ್ಲಿ ಹುಟ್ಟುವುದು ಪುಣ್ಯವೇಕೆ ಆಗಬೇಕು ಅನ್ನುವುದರ ಬಗ್ಗೆ ನೀವು ಯೋಚಿಸಿದರೆ ಮುಂಬರುವ ಪೀಳಿಗೆಯನ್ನು ಹುಟ್ಟಿಸುವುದು ನಿಲ್ಲಿಸಬೇಕಾಗುತ್ತದೆ. ಇಲ್ಲವಾದರೆ, ನಿಮ್ಮಿಂದ ಅವರಿಗೆ ತಗಲುವ ಕಳಂಕವಾದರೂ ತೊಳೆಯಬೇಕಾಗುತ್ತದೆ. ಇನ್ನು ಮುಂದೆ ಇಂತಹ ಕಳಂಕಿತ ಸ್ಥಿತಿಯಲ್ಲಿ ನಾವು ಬದುಕುವುದಿಲ್ಲ ಎಂದು ಪ್ರತಿಜ್ಞೆ ಮಾಡಿ. ಸಮಾಜದ ಏಳಿಗೆ ಮಾಡುವುದಕ್ಕಾಗಿ ಗಂಡಸರು ನಿರ್ಧರಿಸುವಂತೆ ನೀವು ನಿರ್ಧರಿಸಿ.
ನಿಮಗೆ ಹೇಳಬೇಕಿರುವ ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ನೀವು ಹೊಲಸಾದ ರೂಢಿ ಪರಂಪರೆಗಳನ್ನು ಆಚರಿಸುವುದನ್ನು ಬಿಟ್ಟುಬಿಡಬೇಕು. ನಿಜ ಹೇಳಬೇಕೆಂದರೆ ಈತ ಅಸ್ಪೃಶ್ಯ ಎಂದು ತೋರಿಸುವ ಯಾವುದೇ ಅಚ್ಚು ಅಸ್ಪೃಶ್ಯನ ಹಣೆಯ ಮೇಲೆ ಒತ್ತಿರುವುದಿಲ್ಲ. ಆದರೆ, ಅಸ್ಪೃಶ್ಯರ ರೂಢಿ ಸಂಪ್ರದಾಯ ಪರಂಪರೆಗಳಿಂದ ಎಲ್ಲರಿಗೂ ನೀವು ಅಸ್ಪೃಶ್ಯರು ಎನ್ನುವುದು ಗೊತ್ತಾಗುತ್ತದೆ. ಈ ರೂಢಿ ಪರಂಪರೆಗಳು ಒಂದಾನೊಂದು ಕಾಲದಲ್ಲಿ ನಮ್ಮ ಮೇಲೆ ಒತ್ತಾಯದಿಂದ ಹೇರಲಾಗಿತ್ತು ಎಂದು ನನಗನಿಸುತ್ತದೆ. ಆದರೆ ಬ್ರಿಟಿಷರ ರಾಜ್ಯದಲ್ಲಿ ಇಂತಹ ಒತ್ತಾಯಗಳು ಇರಲಾರವು. ಹಾಗಾಗಿ ನೀವು ಅಸ್ಪೃಶ್ಯರೆಂದು ಗುರುತಿಸಲ್ಪಡುವ ಆಚಾರ, ರೂಢಿಗಳನ್ನು ನೀವು ತೊರೆಯಬೇಕು. ನೀವು ಸೀರೆ ಉಡುವ ರೀತಿ ನಿಮ್ಮ ಅಸ್ಪೃಶ್ಯತೆಗೆ ಸಾಕ್ಷಿ. ಮೇಲ್ಜಾತಿಯ ಹೆಂಗಸರು ಸೀರೆ ಉಡುವ ರೀತಿಯಲ್ಲಿ ನೀವು ಪ್ರಯತ್ನಿಸಬೇಕು. ಹಾಗೆ ಮಾಡುವುದರಲ್ಲಿ ನಿಮ್ಮ ಗಂಟೇನೂ ಹೋಗುವುದಿಲ್ಲ. ಹಾಗೆಯೇ ಕತ್ತಿನಲ್ಲಿ ನೂರಾರು ಸರಗಳು, ಕೈಯಲ್ಲಿ ಮೇಲಿನ ತನಕ ಬೆಳ್ಳಿಯ ಇಲ್ಲವೇ ಲಾಖ ಬಳೆಗಳನ್ನು ಹಾಕುವ ಪದ್ಧತಿಯೂ ನಿಮ್ಮನ್ನು ಅಸ್ಪೃಶ್ಯರೆಂದು ಪರಿಚಯಿಸುತ್ತದೆ. ಒಂದಕ್ಕಿಂತ ಹೆಚ್ಚು ಸರಗಳಿರುವ ಅಗತ್ಯವಿಲ್ಲ. ಹೆಚ್ಚು ಸರಗಳನ್ನು ಹಾಕಿಕೊಂಡರೆ ಗಂಡನ ಆಯುಷ್ಯ ಹೆಚ್ಚುತ್ತದೆ ಎಂದೇನೂ ಇಲ್ಲ. ನಮ್ಮ ಶರೀರಕ್ಕೆ ಮೆರಗು ಬರುತ್ತದೆ ಎಂದೇನು ಇಲ್ಲ. ಒಡವೆಗಳಿಗಿಂತ, ಬಟ್ಟೆಯಿಂದ ನಮ್ಮ ಶರೀರಕ್ಕೆ ಮೆರಗು ಸಿಗುತ್ತದೆ. ಆದ್ದರಿಂದ ಲಾಖ ಇಲ್ಲವೇ ಬೆಳ್ಳಿಯ ಒಡವೆಗಳಲ್ಲಿ ಹಣ ಖರ್ಚು ಮಾಡುವುದಕ್ಕಿಂತ ಒಳ್ಳೆಯ ಬಟ್ಟೆಯನ್ನು ಕೊಂಡುಕೊಳ್ಳಲು ಹಣ ಖರ್ಚು ಮಾಡಿ. ಒಡವೆಗಳನ್ನು ಹಾಕಲೇಬೇಕೆಂದರೆ ಒಡವೆಗಳನ್ನು ಮಾಡಿಸಿ ಹಾಕಿಕೊಳ್ಳಿ, ಇಲ್ಲವೇ ಹಾಕಲೇಬೇಡಿ. ಅದರಂತೆ ಸ್ವಚ್ಛವಾಗಿರಲು ಪ್ರಯತ್ನಿಸಿ’.
‘ನೀವು ಮನೆಯ ಲಕ್ಷ್ಮಿಗಳು. ಮನೆಯಲ್ಲಿ ಯಾವುದೇ ರೀತಿಯ ಅಮಂಗಳವಾಗದಂತೆ ನೀವು ಎಚ್ಚರಿಕೆ ವಹಿಸಬೇಕು. ಕಳೆದ ಮಾರ್ಚ್ ತಿಂಗಳಿನಿಂದ ನೀವೆಲ್ಲರೂ ಸತ್ತ ಪ್ರಾಣಿಗಳ ಮಾಂಸ ತಿನ್ನುವುದನ್ನು ನಿಲ್ಲಿಸಿದ್ದೀರಿ ಎನ್ನುವುದು ಸಂತೋಷದ ವಿಷಯ. ಆದರೆ, ಯಾವುದಾದರೂ ಕುಟುಂಬದಲ್ಲಿ ಇನ್ನೂ ತಿನ್ನುತ್ತಿದ್ದರೆ ಅದನ್ನು ನಿಲ್ಲಿಸುವ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳಬೇಕು. ಸತ್ತ ಪ್ರಾಣಿಯ ಮಾಂಸವನ್ನು ನಿಮ್ಮ ಗಂಡ ಮನೆಗೆ ತಂದರೆ ಇಂತಹ ಅಮಂಗಲ ಪ್ರಕಾರ ಇನ್ನು ಮುಂದೆ ನನ್ನ ಮನೆಯಲ್ಲಿ ನಡೆಯುವುದಿಲ್ಲ ಎಂದು ಅವನಿಗೆ ಸ್ಪಷ್ಟವಾಗಿ ಹೇಳಿ. ನೀವು ಮನಸ್ಸು ಮಾಡಿದರೆ ಇಂತಹ ಘಟನೆಗಳನ್ನು ತಪ್ಪಿಸಬಹುದು ಎನ್ನುವ ಭರವಸೆ ನನಗಿದೆ. ಜೊತೆಗೆ, ನೀವು ನಿಮ್ಮ ಮಕ್ಕಳಿಗೆ ವಿದ್ಯೆ ಕಲಿಸಬೇಕು. ಜ್ಞಾನ ಹಾಗೂ ವಿದ್ಯೆ ಇವೆರಡೂ ಕೇವಲ ಗಂಡಸರ ಸ್ವತ್ತಲ್ಲ. ಹೆಂಗಸರಿಗೂ ಕಡ್ಡಾಯವಾಗಿ ಸಿಗಬೇಕಂತದ್ದು ಅನ್ನುವುದನ್ನು ನಮ್ಮ ಪೂರ್ವಜರು ತಿಳಿದುಕೊಂಡಿದ್ದರು. ಇಲ್ಲದಿದ್ದರೆ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಪೂರ್ವಜರು ತಮ್ಮ ಹುಡುಗಿಯರಿಗೆ ವಿದ್ಯೆಯನ್ನು ಕಲಿಸುತ್ತಿರಲಿಲ್ಲ. ಫಲವತ್ತಾದ ಭೂಮಿಯಲ್ಲಿ ಬೆಳೆಯುವ ಬೆಳೆಯು ಫಲವತ್ತಾಗಿಯೇ ಬರುತ್ತದೆ ಅನ್ನುವುದನ್ನು ನೆನಪಿಟ್ಟು ನಿಮ್ಮ ಮುಂದಿನ ಪೀಳಿಗೆಯನ್ನು ಸುಧಾರಿಸಬೇಕು ಎಂದಿದ್ದರೆ ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ಕಲಿಸಲೇಬೇಕು. ನಾನು ಇಂದು ನಿಮಗೆ ಕೊಟ್ಟಿರುವ ಉಪದೇಶವನ್ನು ನೀವು ಗಾಳಿಗೆ ತೂರಲಾರಿರಿ ಎನ್ನುವ ಅಪೇಕ್ಷೆ ಇದೆ. ಆದಷ್ಟು ಬೇಗ ಅದನ್ನು ಜಾರಿಗೆ ತನ್ನಿ. ಹಾಗಾಗಿ, ನೀವು ಬೆಳಗ್ಗೆ ಮನೆಗೆ ಹೋಗುವ ಮೊದಲು ನೀವು ಸೀರೆ ಉಡುವ ರೀತಿಯನ್ನು ಬದಲಿಸಿ ತೋರಿಸಿದರೆ, ನಾನು ಹೇಳಿದ್ದು ಸಾರ್ಥಕ ಅಂದುಕೊಳ್ಳುತ್ತೇನೆʼ ಎಂದರು. ಮಹಿಳೆಯರು ಅವರ ಮಾತುಗಳಿಗೆ ತಾವು ಹಾಗೇ ಬದುಕುವುದಾಗಿ ಆಶ್ವಾಸನೆ ನೀಡಿದರು.
ಅಸಾಧಾರಣ ಪರಿಣಾಮ ಬೀರಿದ ಭಾಷಣ
ಈ ಭಾಷಣವು ಮಹಿಳೆಯರ ಮೇಲೆ ಅಸಾಧಾರಣವಾದ ಪರಿಣಾಮವನ್ನು ಬೀರಿತು. ಕೊಂಕಣ ಪ್ರದೇಶದ ವಿಶೇಷವಾಗಿ ಥಾಣೆ ಮತ್ತು ಕೊಲಾಬಾ ಜಿಲ್ಲೆಗಳಲ್ಲಿ ಅಸ್ಪೃಶ್ಯ ಮಹಿಳೆಯರು (ಮಹಾರ್, ಚಾಂಭಾರ್) ಸೀರೆ ಉಡುತ್ತಿದ್ದ ರೀತಿಯಲ್ಲಿ ಅವರ ಮೊಣಕಾಲುಗಳು, ತೊಡೆಗಳೂ ಸಹ ಕಾಣುತ್ತಿದ್ದವು. ಇದನ್ನು ನೋಡಿಯೇ ಯಾವ ಜಾತಿ ಎಂದು ಗುರುತಿಸುತ್ತಿದ್ದರು. ಬಾಬಾ ಸಾಹೇಬರ ಭಾಷಣ ಕೇಳಿದ ನಂತರ ಸಮ್ಮೇಳನಕ್ಕೆ ಬಂದ ಮಹಿಳೆಯರು ಮಾರನೇ ದಿನವೇ ಮೇಲ್ವರ್ಗದ ಮಹಿಳೆಯರು ಉಡುವ ರೀತಿಯಲ್ಲಿ ತಮ್ಮ ಒಂಬತ್ತು ಗಜದ ಸೀರೆಯನ್ನು ಉಟ್ಟರು. ಅದಕ್ಕೆ ಶ್ರೀಮತಿ ಚಿತ್ರೆ ಮತ್ತು ಶ್ರೀಮತಿ ಟಿಪ್ನಿಸ್ ಅವರು ಸಹಾಯ ಮಾಡಿದರು. ಅವರ ನಿಷ್ಠೆಯನ್ನು ಕಂಡು ಬಾಬಾ ಸಾಹೇಬರಿಗೆ ಮನ ತುಂಬಿ ಬಂತು. ಅವರ ಈ ನಿರ್ಧಾರಕ್ಕಾಗಿ ಒಬ್ಬೊಬ್ಬರಿಗೆ ಬಳೆ ಮತ್ತು ಕುಪ್ಪಸ ಖರೀದಿಸಲು ಎಂಟಾಣೆ ಕೊಡಲಾಯಿತು. ಅದರಂತೆ ಗಂಡಸರಲ್ಲೂ ಬದಲಾವಣೆ ಕಾಣುತ್ತಿತ್ತು. ಅವರು ಕೂಡ ಮೂಗಲ್ಲಿ, ಕೈಯಲ್ಲಿ ಹಾಕುತ್ತಿದ್ದ ವಿಚಿತ್ರ ರೀತಿಯ ಒಡವೆಗಳನ್ನು ತೆಗೆದಿದ್ದರು.
ಆಗಸ್ಟ್ ೩, ೧೯೪೨ರಲ್ಲಿ ಅಖಿಲ ಭಾರತ ನಿಮ್ನ ವರ್ಗಗಳ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಜಿ.ಟಿ.ಮೇಶ್ರಾಮ್ ಅವರಿಗೆ ಅಂಬೇಡ್ಕರ್ ಅವರು ಬರೆದ ಪತ್ರದಲ್ಲಿ ದಲಿತ ಮಹಿಳಾ ಪರಿಷತ್ತಿನ ಕುರಿತು ಹೀಗೆ ಹೇಳಿದ್ದಾರೆ, ‘ಮಹಿಳಾ ಸಮ್ಮೇಳನ ನನ್ನ ಮೇಲೆ ಅಪಾರ ಪ್ರಭಾವ ಮೂಡಿಸಿದೆ. ನಾನು ಮಹಿಳೆಯರ ಪಕ್ಷಪಾತಿ. ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು ಎಂಬುದು ನನ್ನ ಬಯಕೆ. ಸಾವಿರಾರು ಮಹಿಳೆಯರು ಸಮ್ಮೇಳನದಲ್ಲಿ ಭಾಗವಹಿಸುವಂತಹ ಅದ್ಭುತ ದೃಶ್ಯವನ್ನು ದೇವರುಗಳೇ ನೋಡಬಯಸುತ್ತಾರೆ. ವಿಶೇಷವಾಗಿ ಅವರ ಉಡುಪುಗಳನ್ನು, ಸ್ವಚ್ಛತೆಯನ್ನು ಮತ್ತು ಆತ್ಮವಿಶ್ವಾಸದಿಂದ ಸಮ್ಮೇಳನದಲ್ಲಿ ನಡೆದುಕೊಂಡಿದ್ದನ್ನು ನೋಡಿ ಅಪಾರ ಸಂತೋಷವಾಯಿತುʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೊತೆಗೆ ಭಾಗವಹಿಸುತ್ತಿದ್ದ ಮಹಿಳೆಯರಿಗೆಲ್ಲ ಸ್ಪೂರ್ತಿದಾಯಕ ಮಾತುಗಳಾಗಿದ್ದವು. ಹೀಗೆ ಸಂದರ್ಭಗಳು ದೊರೆತಾಗಲೆಲ್ಲಾ ದಲಿತ ಮಹಿಳೆಯರನ್ನು ಜಾಗೃತಗೊಳಿಸುವ, ಅರಿವನ್ನು ಹೆಚ್ಚಿಸುವ, ಮಹಿಳೆಯರು ಶಿಕ್ಷಣ ಪಡೆಯಲು ಒತ್ತಾಸೆ ನೀಡಿದ ಮಹಾನ್ ನಾಯಕ ಬಾಬಾ ಸಾಹೇಬರು.
ಹಿಂದೂ ಕೋಡ್ ಬಿಲ್ ತಂದ ಕ್ರಾಂತಿ
ಅಂದು ಅಂಬೇಡ್ಕರ್ ಮಂಡಿಸಿದ ʻಹಿಂದೂ ಕೋಡ್ ಬಿಲ್ಲಿʼನ ಫಲಾನುಭವಿಗಳು ನಾವೆಲ್ಲ. ಕತ್ತಲ ಕೂಪದಲ್ಲಿದ್ದ ಭಾರತೀಯ ಮಹಿಳೆಯರಿಗೆ ಕಾನೂನಿನ ಬೆಂಬಲ, ಶಿಕ್ಷಣ, ಆತ್ಮ ಗೌರವ, ಸ್ವಾಭಿಮಾನ, ಅಂತಃಶಕ್ತಿ ಇವೆಲ್ಲವೂ ದೊರಕಿರುವುದು ಅಂದು ಅವರು ಮಂಡಿಸಿದ ಮಸೂದೆಯಿಂದ. ಇಂದು ಮಹಿಳೆ ವಿದ್ಯಾವಂತಳಾಗುತ್ತಿದ್ದಾಳೆ. ಶಿಕ್ಷಣ ಅವಳ ಯೋಚನಾ ಶಕ್ತಿಯನ್ನು ಬದಲಿಸಿದೆ. ಎಲ್ಲಾ ರಂಗಗಳಲ್ಲಿಯೂ ಮಹಿಳೆ ತನ್ನ ಛಾಪನ್ನು ಒತ್ತುತ್ತಿದ್ದಾಳೆ. ಅವಳು ಪ್ರವೇಶ ಮಾಡದ ರಂಗವೇ ಇಲ್ಲ. ಕುಟುಂಬ, ಸಮಾಜದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಳೆ. ತನ್ನ ಅಸ್ಮಿತೆಯ ಅರಿವು ಅವಳಿಗಾಗಿದೆ. ಸ್ತ್ರೀ ಅಂದರೆ ಅಷ್ಟೇ ತಾನೇ? ಎನ್ನುವ ಕಾಲವನ್ನು ತನ್ನ ಕಾಲ ಕೆಳಗಾಕಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಉದ್ಯೋಗ, ಕೈಗಾರಿಕೆ, ವಿಜ್ಞಾನ, ಕ್ರೀಡೆ, ಕೃಷಿ, ಕಲೆ, ತಂತ್ರಜ್ಞಾನ ಹೀಗೆ ನಾವು ಪಟ್ಟಿ ಮಾಡುತ್ತಾ ಹೋದರೆ ಯಾವ ಕ್ಷೇತ್ರದಲ್ಲಿ ಮಹಿಳೆ ಇಲ್ಲ. ಆಕೆ ಇಲ್ಲದ ಕ್ಷೇತ್ರವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
೨೦ನೇ ಶತಮಾನದಲ್ಲಿ ಪಿತ್ರಾರ್ಜಿತ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ ಏಕೈಕ ವ್ಯಕ್ತಿ ಅಂಬೇಡ್ಕರ್ ಅವರು. ಅವರು ಬಾಂಬೆ ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ ದುಡಿಯುವ ಮಹಿಳೆಯರಿಗಾಗಿ ಮೆಟಿರ್ನಿಟಿ ರಜೆಯೊಂದಿಗೆ ಅನೇಕ ಸೌಲಭ್ಯಗಳನ್ನು ಮಹಿಳೆಯರಿಗಾಗಿ ಚಿಂತಿಸಿ ಅವುಗಳನ್ನು ೧೯೪೨ರಲ್ಲಿಯೇ ಜಾರಿಗೆ ತರುತ್ತಾರೆ. ಸಂವಿಧಾನದ ಮೂಲಕ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಅಧಿಕಾರ ನೀಡುವ ಮೂಲಕ ಅನೇಕ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣರಾದರು. ಇಂದು ಮಹಿಳೆಗೆ ಮದುವೆ, ಮಕ್ಕಳು, ವಿಚ್ಛೇದನ ಇವೆಲ್ಲವೂ ತನ್ನದೇ ನಿರ್ಧಾರ ಎಂದು ಬದುಕುವ ಸ್ವಾತಂತ್ರ್ಯ ಸಿಕ್ಕಿದೆ.
ಮಹಿಳೆಯರ ಸ್ವಾಭಿಮಾನದ ಮೂಲ
ಆರ್ಥಿಕ ಸ್ವಾತಂತ್ರ್ಯ ಪಡೆದ ಮಹಿಳೆ ತನ್ನ ಸ್ವಂತ ನಿರ್ಧಾರಗಳಿಗೆ ಬದ್ಧಳಾಗುತ್ತಿದ್ದಾಳೆ. ತಮ್ಮ ಅಸ್ಮಿತೆಯ ಆಳ-ಅಗಲದ ಬಗ್ಗೆ ಮಾತನಾಡುವ ಗಂಡುಗಳ ಬಾಯಿ ಮುಚ್ಚಿಸುತ್ತಿದ್ದಾರೆ. ತಮಗೆ ನ್ಯಾಯ ದೊರಕಿಸಿಕೊಳ್ಳುವುದಕ್ಕಾಗಿ ಹೋರಾಟಕ್ಕಾಗಲಿ, ಕೋರ್ಟ್ ಮೊರೆ ಹೋಗುವುದಕ್ಕಾಗಲಿ ಹಿಂಜರಿಯುತ್ತಿಲ್ಲ. ದನಿ ಇಲ್ಲದವರಿಗೆ ದನಿಯಾದ, ತಾವೇನು ಎಂದು ಅರಿಯದವರಿಗೆ ಅವರೇನು ಎಂದು ಅರಿವನ್ನು ತುಂಬಿದ, ಪರಂಪರೆ, ಸಂಸ್ಕೃತಿ ಹೆಸರಿನ ಕೆಸರಿನಲ್ಲಿ ಹೂತು ಹೋಗುತ್ತಿದ್ದ ಮಹಿಳೆಯರನ್ನು ಅವರ ಹಕ್ಕುಗಳೇನು ಎಂದು ಎಚ್ಚರಿಸಿದ, ಒಮ್ಮೆ ಮದುವೆಯಾದರೆ ಅದು ಸರಿಯೋ ತಪ್ಪೋ, ನೋವೋ-ನಲಿವೋ, ಎಂದು ಸಮಾಜಕ್ಕೆ, ಮನೆತನಕ್ಕೆ, ಹೆದರಿ ಬಾಳುತ್ತಿದ್ದ ಮಹಿಳೆಯರಿಗೆ ಅದು ಅನಿವಾರ್ಯವಲ್ಲ ಎಂದು ತಿಳಿಸಿದ, ಮನೆಯಿಂದ ಹೊರ ಹಾಕಿದ ಹೆಣ್ಣುಗಳಿಗೆ ತಂದೆ-ಗಂಡ ಮನೆಯ ಆಸ್ತಿಯಲ್ಲಿ ಹಕ್ಕಿದೆ ಎಂದು ತಿಳಿಸಿ ದೊರಕಿಸಿಕೊಳ್ಳುವ ಮಾರ್ಗ ತೋರಿದ ಬಾಬಾ ಸಾಹೇಬರು ತಮ್ಮ ಜೀವನದುದ್ದಕ್ಕೂ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಿದರು. ಅವರ ಜನ್ಮದಿನದಂದು ಭಾರತದ ಎಲ್ಲಾ ಮಹಿಳೆಯರು ಅವರಿಗೆ ಕೃತಜ್ಞರಾಗಿರಬೇಕಿದೆ.