ಸಾರಾಂಶ
ಬಹುನಿರೀಕ್ಷಿತ ಒಲಿಂಪಿಕ್ಸ್ ಮತ್ತೆ ಬಂದಿದೆ. ‘ಸಿಟಿ ಆಫ್ ಲವ್’, ‘ಸಿಟಿ ಆಫ್ ಲೈಟ್ಸ್’ ಎಂದೇ ಖ್ಯಾತಿ ಪಡೆದಿರುವ ಪ್ಯಾರಿಸ್ 33ನೇ ಆವೃತ್ತಿಯ ಜಾಗತಿ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿದೆ. ಒಲಿಂಪಿಕ್ಸ್ ಆತಿಥ್ಯ ವಿಚಾರದಲ್ಲಿ ಪ್ಯಾರಿಸ್ ಎದುರಿಸುತ್ತಿರುವ ಸವಾಲುಗಳೇನು? ಭದ್ರತೆಗೆ ಕೈಗೊಂಡಿರುವ ಕ್ರಮಗಳೇನು? ಕನಸಿನ ನಗರಿ ಎನಿಸಿಕೊಂಡಿರುವ ಕ್ರೀಡಾ ಗ್ರಾಮದ ವಿಶೇಷತೆಗಳೇನು? ಒಲಿಂಪಿಕ್ಸ್ ಆಯೋಜನೆಯಿಂದ ಫ್ರಾನ್ಸ್‌ಗೇನು ಲಾಭ? ಈ ಎಲ್ಲದರ ಕುರಿತ ಸಮಗ್ರ ಮಾಹಿತಿಯನ್ನು ‘ಕನ್ನಡಪ್ರಭ’ ಓದುಗರ ಮುಂದಿಡುತ್ತಿದೆ.ಪ್ಯಾರಿಸ್ ಮೇಲೆ ವಿಶ್ವದ ಕಣ್ಣು
2024ರ ಪ್ಯಾರಿಸ್ ಒಲಿಂಪಿಕ್ಸ್ ಮೇಲೆ ಈಗ ವಿಶ್ವದ ಕಣ್ಣು ನೆಟ್ಟಿದೆ. ಜುಲೈ 26ರಂದು ಪ್ಯಾರಿಸ್ ನಗರದಲ್ಲಿ ಹರಿಯುವ ಸೀನ್ ನದಿಯಲ್ಲಿ ವಿಧ್ಯುಕ್ತ ಚಾಲನೆ ಪಡೆಯಲಿರುವ ಒಲಿಂಪಿಕ್ಸ್‌ಗೆ ಆಗಸ್ಟ್ 11ರಂದು ತೆರೆ ಬೀಳಲಿದೆ. 2021ರಲ್ಲಿ ಟೋಕಿಯೋದಲ್ಲಿ ಈ ಹಿಂದಿನ ಒಲಿಂಪಿಕ್ಸ್ ನಡೆದಿತ್ತು. 2020ರಲ್ಲಿ ನಡೆಯಬೇಕಿದ್ದರೂ ಕೋವಿಡ್ ಕಾರಣದಿಂದಾಗಿ 1 ವರ್ಷ ಮುಂದೂಡಲಾಗಿತ್ತು. ಹೀಗಾಗಿ 2021ರ ಬಳಿಕ ಅಂದರೆ ಕೇವಲ 3 ಮೂರು ವರ್ಷದಲ್ಲೇ ಮತ್ತೊಂದು ಮೆಗಾ ಕ್ರೀಡಾಕೂಟ ನಡೆಯಲಿದೆ. ಕೋವಿಡ್ ಮಹಾಮಾರಿಯ ಕಾಟ ಈ ಬಾರಿ ಒಲಿಂಪಿಕ್ಸ್‌ಗೆ ಇಲ್ಲದಿದ್ದರೂ, ಫ್ರಾನ್ಸ್ ಸರ್ಕಾರಕ್ಕೆ, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಗೆ ಇರುವ ಸವಾಲುಗಳಿಗೇನೂ ಕಮ್ಮಿಯಿಲ್ಲ. ಆದರೆ ಅದೆಲ್ಲವನ್ನೂ ಮೆಟ್ಟಿನಿಂತು ಫ್ರಾನ್ಸ್ ಜಾಗತಿಕ ‘ಕ್ರೀಡಾ ಕುಂಭಮೇಳ’ದ ಆಯೋಜನೆಗೆ ಸಜ್ಜಾಗಿದೆ.ಮೊದಲ ಬಾರಿ ನದಿ ಮೇಲೆ ಉದ್ಘಾಟನಾ ಸಮಾರಂಭಈ ಬಾರಿ ಒಲಿಂಪಿಕ್ಸ್ ಹಲವು ಕಾರಣಗಳಿವೆ ವಿಶೇಷ. ಯಾವುದೇ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಸಾಮಾನ್ಯವಾಗಿ ಕ್ರೀಡಾಂಗಣದಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಸೀನ್ ನದಿಯ ಮೇಲೆ ಒಲಿಂಪಿಕ್ಸ್‌ಗೆ ವಿಧ್ಯುಕ್ತ ಚಾಲನೆ ಸಿಗಲಿದೆ. ಅಥ್ಲೀಟ್‌ಗಳ ಬೃಹತ್ ಪಥ ಸಂಚಲನ ಇದೇ ನದಿಯಲ್ಲಿ ದೋಣಿಗಳಲ್ಲಿ ನಡೆಯಲಿದೆ. ಈ ಕಾರಣಕ್ಕಾಗಿ ಸೀನ್ ನದಿ ಪ್ರವೇಶಕ್ಕೆ ಕೆಲ ದಿನಗಳ ಹಿಂದೆಯೇ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.ಮೊದಲ ಬಾರಿ ನೇರಳೆ ಬಣ್ಣದ ಟ್ರ್ಯಾಕ್ ಬಳಕೆ
ಯಾವುದೇ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ಗೆ ಸಾಮಾನ್ಯವಾಗಿ ಕಂದು ಬಣ್ಣದ ಟ್ರ್ಯಾಕ್ ಬಳಸಲಾಗುತ್ತದೆ. ಆದರೆ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ಗೆ ನೇರಳೆ ಅಥವಾ ಲ್ಯಾವೆಂಡರ್ ಬಣ್ಣದ ಟ್ರ್ಯಾಕ್ ಅಳವಡಿಸಲಾಗಿದೆ. ಈ ಬಾರಿ ಒಲಿಂಪಿಕ್ಸ್ ನೀಲಿ, ಹಸಿರು ಹಾಗೂ ನೇರಳೆ ಬಣ್ಣದ ಥೀಮ್ ಹೊಂದಿದ್ದು, ಇದೇ ಕಾರಣಕ್ಕೆ ನೇರಳೆ ಬಣ್ಣದ ಟ್ರ್ಯಾಕ್ ಬಳಸಲಾಗುತ್ತದೆ. ಈ ಟ್ರ್ಯಾಕ್ ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಾಗಿದ್ದು, ಹಲವು ಹೊಸ ದಾಖಲೆಗಳು ನಿರ್ಮಾಣವಾಗುವ ನಿರೀಕ್ಷೆ ಇದೆ ಎಂದು ಐಒಸಿ ಭರವಸೆ ವ್ಯಕ್ತಪಡಿಸಿದೆ.ಗೇಮ್ಸ್‌ಗೆ ಭಯೋತ್ಪಾದಕರು, ಸೈಬರ್ ಕಳ್ಳರ ದಾಳಿ ಭೀತಿ!ಕಳೆದ ಬಾರಿ ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆದಾಗ ಜಪಾನ್‌ಗೆ ಪ್ರಮುಖ ಸವಾಲಾಗಿದ್ದು ಕೋವಿಡ್. ಈ ಬಾರಿ ಪ್ಯಾರಿಸ್‌ಗೆ ಪ್ರಮುಖ ಸವಾಲು ಭಯೋತ್ಪಾದಕರದ್ದು. ಐಸಿಸ್ ಸೇರಿ ಕೆಲ ಉಗ್ರ ಸಂಘಟನೆಗಳಿಂದ ಪ್ಯಾರಿಸ್‌ನಲ್ಲಿ ದಾಳಿ ಆತಂಕವಿದೆ. ಹೀಗಾಗಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಪ್ಯಾರಿಸ್ ಮಾತ್ರವಲ್ಲದೆ ಫ್ರಾನ್ಸ್‌ನ ವಿವಿಧ ಕಡೆಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಗಸ್ತು ಹೆಚ್ಚಿಸಿ, ಅಪಾರ ಪ್ರಮಾಣದಲ್ಲಿ ಸಿಸಿಟೀವಿ ಕ್ಯಾಮರಾಗಳನ್ನೂ ಅಳವಡಿಸಲಾಗಿದೆ. ಶಂಕಿತ ದಾಳಿಯನ್ನು ಹಿಮ್ಮೆಟ್ಟಿಸಲು ಅಲ್ಲಿನ ಸರ್ಕಾರ ಸರ್ವ ರೀತಿಯಲ್ಲಿ ಸಜ್ಜಾಗಿದೆ.ಪ್ಯಾರಿಸ್‌ಗಿದೆ ಭಯೋತ್ಪಾದಕ ದಾಳಿಯ ಕರಾಳ ಇತಿಹಾಸ!ಈ ಸಲ ಒಲಿಂಪಿಕ್ಸ್ ಆಯೋಜಿಸುತ್ತಿರುವ ಪ್ಯಾರಿಸ್‌ಗೆ ಭಯೋತ್ಪಾದಕರ ದಾಳಿಯ ಕರಾಳ ಇತಿಹಾಸವಿದೆ. 2015ರ ಜನವರಿಯಲ್ಲಿ ಪ್ಯಾರಿಸ್ ನಗರದಲ್ಲಿ ‘ಚಾರ್ಲೀ ಹೆಬ್ಡೋ’ ದಾಳಿ ಮೂಲಕ ಅಲ್ ಖೈದಾ ಉಗ್ರರು 10ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದರು. ಅದೇ ವರ್ಷ ನವೆಂಬರ್‌ನಲ್ಲಿ ಪ್ಯಾರಿಸ್ ನಗರದಲ್ಲಿ ಸುಮಾರು 10 ಉಗ್ರರು 130ಕ್ಕೂ ಹೆಚ್ಚು ನಾಗರಿಕರನ್ನು ಶೂಟೌಟ್, ಬಾಂಬ್ ಮೂಲಕ ಹತ್ಯೆಗೈದಿದ್ದರು. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.ಸೈಬರ್ ಕಳ್ಳರ ಕಾಟ
ಒಲಿಂಪಿಕ್ಸ್‌ಗೆ ಪ್ರತಿ ಬಾರಿಯಂತೆ ಈ ಬಾರಿಯೂ ಸೈಬರ್ ಕಳ್ಳರ ದಾಳಿ ಭೀತಿಯಿದೆ. 2018ರ ಚಳಿಗಾಲದ ಒಲಿಂಪಿಕ್ಸ್ ಸೈಬರ್ ದಾಳಿಗೆ ತುತ್ತಾಗಿತ್ತು. ಇದರಿಂದಾಗಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡು ಒಲಿಂಪಿಕ್ಸ್‌ನ ವೆಬ್‌ಸೈಟ್ ಕೂಡಾ ಶಟ್‌ಡೌನ್ ಆಗಿತ್ತು. ಈ ಬಾರಿ ಸೈಬರ್ ದಾಳಿ ತಡೆಗಟ್ಟಲು ಫ್ರಾನ್ಸ್ ಸರ್ಕಾರ ಕೃತಕ ಬುದ್ಧಮತ್ತೆ (ಎಐ) ತಂತ್ರಜ್ಞಾನ ಬಳಸಲಿದ್ದು, ಸೈಬರ್ ಪರಿಣಿತರ ವಿಶೇಷ ತಂಡಗಳನ್ನೂ ರಚಿಸಿದೆ.
ರಷ್ಯಾದಿಂದ ಎದುರಾಗುತ್ತಾ ಸಮಸ್ಯೆ?ಡೋಪಿಂಗ್ ಹಾಗೂ ಉಕ್ರೇನ್ ಮೇಲಿನ ಯುದ್ಧದ ಕಾರಣಕ್ಕೆ ಈ ಬಾರಿಯೂ ರಷ್ಯಾ, ಒಲಿಂಪಿಕ್ಸ್‌ನಿಂದ ನಿಷೇಧಕ್ಕೊಳಗಾಗಿದೆ. ಈ ಕಾರಣಕ್ಕೆ ರಷ್ಯಾ, ಒಲಿಂಪಿಕ್ಸ್‌ನ ಖ್ಯಾತಿ ಕುಗ್ಗಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಿಸುತ್ತಿದೆ ಎನ್ನುವ ಆರೋಪವಿದೆ. ಭ್ರಷ್ಟಾಚಾರ, ಭಯೋತ್ಪಾದನೆ ದಾಳಿ ಸಂಭವ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುವ ಮೂಲಕ ಅಪಪ್ರಚಾರದಲ್ಲಿ ತೊಡಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.ಪ್ಯಾರಿಸ್ ನಗರಿಗೆ 45000+ ಸೈನಿಕರಿಂದ ಕಾವಲು!
ಒಲಿಂಪಿಕ್ಸ್ ವೇಳೆ ಭದ್ರತೆಗೆ ಸುಮಾರು 45 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಯು ಸೇನೆಯ 3 ಸಾವಿರ ಯೋಧರು, 18 ಸಾವಿರ ಫ್ರಾನ್ಸ್ ಸೈನಿಕರು, 35 ಸಾವಿರ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
2000+ ವಿದೇಶಿ ಯೋಧರ ನೆರವು
ಭದ್ರತಾ ವಿಚಾರದಲ್ಲಿ ಹಲವು ದೇಶಗಳು ಕೂಡಾ ಫ್ರಾನ್ಸ್ ಜೊತೆ ಕೈಜೋಡಿಸಿವೆ. ವಿವಿಧ ದೇಶಗಳಿಂದ 2000ಕ್ಕೂ ಹೆಚ್ಚು ಸೈನಿಕರು ಪ್ಯಾರಿಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪೋಲೆಂಡ್ ತನ್ನ ಬಾಂಬ್ ನಿಗ್ರಹ ಘಟಕವನ್ನೂ ಪ್ಯಾರಿಸ್‌ಗೆ ಕಳುಹಿಸಿದೆ.ಒಲಿಂಪಿಕ್ಸ್ ಭದ್ರತೆಗೆ ಭಾರತದ ಶ್ವಾನಪಡೆ
ಒಲಿಂಪಿಕ್ಸ್ ವೇಳೆ ಭದ್ರತೆಗೆ ಭಾರತದಿಂದಲೂ ಶ್ವಾನಪಡೆ, ಸೈನಿಕರನ್ನು ಪ್ಯಾರಿಸ್‌ಗೆ ಕಳುಹಿಸಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಹಾಗೂ ವಿಶೇಷ ಕಮಾಂಡೋ ಪಡೆಯಲ್ಲಿ ತರಬೇತಿ ಪಡೆದ 10 ನಾಯಿಗಳು ಹಾಗೂ 17 ಮಂದಿ ಭದ್ರತಾ ಸಿಬ್ಬಂದಿ ಒಲಿಂಪಿಕ್ಸ್ ವೇಳೆ ಕಾರ್ಯನಿರ್ವಹಿಸಲಿದ್ದಾರೆ.
ಕನಸಿನ ನಗರಿ ‘ಪ್ಯಾರಿಸ್ ಕ್ರೀಡಾ ಗ್ರಾಮ’
ಒಲಿಂಪಿಕ್ಸ್‌ಗಾಗಿ ಪ್ಯಾರಿಸ್‌ನಲ್ಲಿ ಕ್ರೀಡಾ ಗ್ರಾಮವನ್ನು ನಿರ್ಮಿಸಲಾಗಿದೆ. ಅಂದರೆ ಗೇಮ್ಸ್ ವೇಳೆ ಅಥ್ಲೀಟ್‌ಗಳಿಗೆ, ಕೋಚ್ ಹಾಗೂ ಸಹಾಯಕ ಸಿಬ್ಬಂದಿಗೆ ಉಳಿದುಕೊಳ್ಳಲು, ತರಬೇತಿ ಪಡೆಯಲು, ಸಮಯ ಕಳೆಯಲು ತಯಾರು ಮಾಡಿರುವ ವಿಶೇಷ ಗ್ರಾಮವಿದು. ಇದು ಅಂತಿಂಥಾ ಗ್ರಾಮವಲ್ಲ. ಒಂದರ್ಥದಲ್ಲಿ ಕನಸಿನ ನಗರಿ. ಎಲ್ಲಾ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ.ಪ್ಯಾರಿಸ್‌ನ 3 ಪ್ರದೇಶಗಳಾದ ಸೇಂಟ್ ಡೆನಿಸ್, ಸೇಂಟ್ ಯುನ್ ಹಾಗೂ ಲಿಲ್ಲೇ ಸೇಂಟ್ ಡೆನಿಸ್ ಭಾಗಗಳಲ್ಲಿ ಒಟ್ಟು 52 ಹೆಕ್ಟೇರ್ ಜಾಗದಲ್ಲಿ ಕ್ರೀಡಾ ಗ್ರಾಮವಿದೆ. ಇದರಲ್ಲಿ 82 ಬೃಹತ್ ಕಟ್ಟಡಗಳು, 3000 ಫ್ಲ್ಯಾಟ್‌ಗಳಿವೆ. ಅಥ್ಲೀಟ್‌ಗಳಿಗಾಗಿ 7200 ಕೋಣೆಗಳನ್ನು ನಿರ್ಮಿಸಲಾಗಿದೆ. ಒಲಿಂಪಿಕ್ಸ್ ವೇಳೆ ಒಟ್ಟು 14500 ಮಂದಿ ಕ್ರೀಡಾ ಗ್ರಾಮಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಇಲ್ಲಿ ಫ್ಲ್ಯಾಟ್, ಕೋಣೆಗಳು ಮಾತ್ರವಲ್ಲದೇ ಅಥ್ಲೀಟ್‌ಗಳಿಗೆ ಜಿಮ್, ಪುನಶ್ಚೇತನ ಶಿಬಿರ, ಆಸ್ಪತ್ರೆಗಳಿವೆ. ತರಬೇತಿ ಹಾಗೂ ಫಿಟ್ನೆಸ್ ಸೆಂಟರ್, ಬಾಸ್ಕೆಟ್‌ಬಾಲ್, ಕುಸ್ತಿ ಸೇರಿದಂತೆ ಕೆಲ ಒಳಾಂಗಣ ಕ್ರೀಡಾಂಗಣಗಳು, ಈಜುಕೊಳ, ಬ್ಯೂಟಿ ಪಾರ್ಲರ್‌ಗಳಿವೆ. ಊಟಕ್ಕಾಗಿ ಹಲವು ರೆಸ್ಟೋರೆಂಟ್‌ಗಳಿವೆ. ಮುಖ್ಯ ರೆಸ್ಟೋರೆಂಟ್‌ನಲ್ಲಿ 3200 ಆಸನ ಸಾಮರ್ಥ್ಯವಿದ್ದು, ಪ್ರತಿದಿನ 40000 ಪ್ಲೇಟ್‌ಗಳಷ್ಟು ಊಟ ವಿತರಿಸಲಾಗುವುದು ಎಂದು ಅಂದಾಜಿಸಲಾಗಿದೆ. ರೆಸ್ಟೋರೆಂಟ್‌ನಲ್ಲಿ ಸುಮಾರು 200 ಬಾಣಸಿಗರಿದ್ದು ಅಥ್ಲೀಟ್‌ಗಳಿಗೆ 500ಕ್ಕೂ ಅಧಿಕ ಬಗೆಯ ಖಾದ್ಯಗಳು ತಯಾರಾಗಲಿದೆ. ಕ್ರೀಡಾ ಗ್ರಾಮದಲ್ಲಿ 600 ಬೃಹತ್ ವಾಷಿಂಗ್ ಮೆಷಿನ್‌ಗಳಿವೆ.ಹಣ ಉಳಿತಾಯ ಮಾಡಲು ಸ್ಟೀಲ್‌ಗಿಂತ ಹೆಚ್ಚು ಮರ ಬಳಕೆ!
ಕ್ರೀಡಾ ಗ್ರಾಮದಲ್ಲಿ ಸ್ಟೀಲ್‌ಗಿಂತ ಹೆಚ್ಚಾಗಿ ಮರಗಳನ್ನೇ ಬಳಸಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಬೃಹತ್ ಕಟ್ಟಡಗಳ ಮೊದಲ 8 ಅಂತಸ್ತುಗಳಿಗೆ ಮರಗಳನ್ನೇ ಬಳಸಲಾಗಿದ್ದು, ಬಳಿಕ ಸುರಕ್ಷತೆಗಾಗಿ ಸ್ಟೀಲ್‌ಗಳನ್ನು ಉಪಯೋಗಿಸಲಾಗಿದೆ. ಗೋಡೆ, ಆಸನ, ನೆಲ, ಮೇಲ್ಚಾವಣಿಗಳಿಗೂ ಮರ (ಪ್ಲೈ ವುಡ್)ಗಳನ್ನು ಬಳಸಲಾಗಿದೆ. ಇದರಿಂದಾಗಿ ಕಳೆದ 3 ಒಲಿಂಪಿಕ್ಸ್‌ಗಳಿಗಿಂತ ಸಾವಿರಾರು ಕೋಟಿ ರು. ಕಡಿಮೆ ಖರ್ಚಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮೀನಿನ ಬಲೆಯಿಂದ ಹಾಸಿಗೆ ತಯಾರಿ
ಕ್ರೀಡಾ ಗ್ರಾಮದಲ್ಲಿ ಅಥ್ಲೀಟ್‌ಗಳು ಮಲಗಲು ಇಟ್ಟಿರುವ ಹಾಸಿಗೆಗಳನ್ನು ಮೀನು ಬಲೆಗಳನ್ನು ತಯಾರಿಸಲು ಬಳಸುವ ವಸ್ತುವಿನಿಂದ ಮಾಡಲಾಗಿದೆ. ಒಲಿಂಪಿಕ್ಸ್ ಮುಗಿದ ಬಳಿಕ ಈ ಹಾಸಿಗೆಗಳನ್ನು ಬಡ ಜನರಿಗೆ, ವಿದ್ಯಾರ್ಥಿಗಳಿರುವ ಹಾಸ್ಟೆಲ್‌ಗಳಿಗೆ ನೀಡಲಾಗುತ್ತದೆ. ಪ್ಲೈ ವುಡ್ ಬಳಸಿ ಮಂಚಗಳನ್ನು ಸಿದ್ಧಪಡಿಸಲಾಗಿದ್ದು, ಅದನ್ನೂ ಮರು ಬಳಕೆ ಮಾಡಬಹುದಾಗಿದೆ.ಕ್ರೀಡಾ ಗ್ರಾಮದ ವಿಶೇಷತೆಗಳು
- 52 ಎಕ್ಟೇರ್ ವಿಸ್ತೀರ್ಣ- 82 ಕಟ್ಟಡಗಳ ನಿರ್ಮಾಣ
- 3000 ಫ್ಲ್ಯಾಟ್‌ಗಳು- 7200 ಕೋಣೆಗಳು- 3.45 ಲಕ್ಷ ಫರ್ನೀಚರ್‌ಗಳು- 14500 ಜನರ ಭೇಟಿ ನಿರೀಕ್ಷೆ
- 600 ವಾಷಿಂಗ್ ಮೆಷಿನ್- 40,000 ಪ್ಲೇಟ್ ಊಟ (ಪ್ರತಿದಿನ)ಒಲಿಂಪಿಕ್ಸ್ ಕೇವಲ ಕ್ರೀಡಾಕೂಟವಲ್ಲ, ಅದು ಬಿಲಿಯನ್ ಡಾಲರ್ ವ್ಯವಹಾರ!
ಒಲಿಂಪಿಕ್ಸ್ ಕೇವಲ ಕ್ರೀಡೆಯಷ್ಟೇ ಅಲ್ಲ. ಅದೊಂದು ಬಿಲಿಯನ್ ಡಾಲರ್ ವ್ಯವಹಾರ ಕೂಡ ಹೌದು. ಒಲಿಂಪಿಕ್ಸ್ ಆಯೋಜಿಸುವ ಐಒಸಿಗೆ ಮಾಧ್ಯಮ ಪ್ರಸಾರ ಹಕ್ಕು ಹಾಗೂ ಪ್ರಾಯೋಜಕ್ವದಿಂದಲೇ ಕೋಟಿ ಕೋಟಿ ಹಣ ಹರಿದುಬರಲಿದೆ. ಟೋಕಿಯೋ ಒಲಿಂಪಿಕ್ಸ್ ಅವಧಿಯಲ್ಲಿ ಐಒಸಿಗೆ 7.6 ಬಿಲಿಯನ್ ಡಾಲರ್ ಹಣ ದೊರೆತಿತ್ತು. ಇನ್ನು ಈ ಬಾರಿ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಫ್ರಾನ್ಸ್ ಸಹ ಭಾರಿ ಲಾಭ ಗಳಿಸುವ ನಿರೀಕ್ಷೆಯಲ್ಲಿದೆ. ಸಾವಿರಾರು ಪ್ರವಾಸಿಗಳು ಒಲಿಂಪಿಕ್ಸ್ ವೀಕ್ಷಣೆಗೆ ಬರಲಿದ್ದು, ವಿಮಾನ, ಹೋಟೆಲ್ ಬುಕ್ಕಿಂಗ್, ರೆಸ್ಟೋರೆಂಟ್, ಪಬ್‌ಗಳಿಗೆ ದೊಡ್ಡ ಪ್ರಮಾಣದ ಲಾಭವಾಗಲಿದೆ. ಇನ್ನು ಪ್ಯಾರಿಸ್ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ತವರು. ಶಾಪಿಂಗ್ ಪ್ರಿಯರು ಒಲಿಂಪಿಕ್ಸ್ ವೇಳೆ ಪ್ಯಾರಿಸ್‌ನಲ್ಲಿ ಹಣದ ಹೊಳೆಯನ್ನೇ ಹರಿಸುವ ನಿರೀಕ್ಷೆ ಇದೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ, ಒಲಿಂಪಿಕ್ಸ್ ಆಯೋಜಿಸುವುದು ಜಾಗತಿಕ ಮಟ್ಟದಲ್ಲಿ ಪ್ರತಿಷ್ಠೆಯ ಸಂಕೇತ. ಜಾಗತಿಕ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ, ಹಲವು ಅಂತಾರಾಷ್ಟ್ರೀಯ ಮಟ್ಟದ, ಲಕ್ಷಾಂತರ ಕೋಟಿ ರು. ವ್ಯವಹಾರ ಒಪ್ಪಂದಗಳಿಗೂ ಸಹಿ ಹಾಕಲು ಫ್ರಾನ್ಸ್ ಎದುರು ನೋಡುತ್ತಿದೆ.