ಸಾರಾಂಶ
ಜುಲೈ 13ರ ವರೆಗೆ ನಡೆಯಲಿದೆ ವಿಶ್ವದ ಅತ್ಯಂತ ಹಳೆಯ, ಪ್ರತಿಷ್ಠಿತ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ । ಈ ಬಾರಿಯದ್ದು 138ನೇ ಆವೃತ್ತಿಹಾಲಿ ಚಾಂಪಿಯನ್ ಆಲ್ಕರಜ್, ಜೋಕೋವಿಚ್, ಸಬಲೆಂಕಾ, ಯಾನಿಕ್ ಸಿನ್ನರ್, ಇಗಾ ಸ್ವಿಯಾಟೆಕ್, ಗಾಫ್ ಸೇರಿ ಪ್ರಮುಖರು ಕಣಕ್ಕೆ
ಲಂಡನ್: ವಿಶ್ವದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಾಗಿರುವ ವಿಂಬಲ್ಡನ್‌ಗೆ ಸೋಮವಾಲ ಚಾಲನೆ ಸಿಗಲಿದೆ. ಲಂಡನ್‌ನಲ್ಲಿರುವ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಆ್ಯಂಡ್ ಕ್ರೊಕೆಟ್ ಕ್ಲಬ್‌ನಲ್ಲಿ ಜುಲೈ 13ರ ವರೆಗೆ ಗ್ರ್ಯಾನ್‌ಸ್ಲಾಂ ಹಬ್ಬ ಜರುಗಲಿದೆ.
ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಬಳಿಕ ವಿಂಬಲ್ಡನ್ ವರ್ಷದ 3ನೇ ಗ್ರ್ಯಾನ್‌ಸ್ಲಾಂ ಟೂರ್ನಿ. ಈ ಬಾರಿಯೂ ಹಲವು ದಿಗ್ಗಜ ಹಾಗೂ ಯುವ ಟೆನಿಸಿಗರು ಕಿರೀಟ ಗೆಲ್ಲಲು ಸೆಣಸಾಡಲಿದ್ದಾರೆ. ಹಾಲಿ ಪುರುಷರ ಸಿಂಗಲ್ಸ್ ಚಾಂಪಿಯನ್ ಕಾರ್ಲೊಸ್ ಆಲ್ಕರಜ್, ಮಹಿಳಾ ಸಿಂಗಲ್ಸ್ ಪ್ರಶಸ್ತಿ ವಿಜೇತ ಬಾರ್ಬೊರಾ ಕ್ರೆಜಿಕೋವಾ ಟ್ರೋಫಿ ಉಳಿಸಿಕೊಳ್ಳಲು ಹೋರಾಡಲಿದ್ದಾರೆ. ಕಳೆದೆರಡು ಬಾರಿಯ ವಿಂಬಲ್ಡನ್, ಫ್ರೆಂಚ್ ಓಪನ್ ವಿಜೇತ, ಸ್ಪೇನ್ 22 ವರ್ಷದ ಆಲ್ಕರಜ್ ಮೊದಲ ಸುತ್ತಿನಲ್ಲಿ ಇಟಲಿಯ ಫ್ಯಾಬಿಯೊ ಫಾಗ್ನಿನಿ ಸವಾಲು ಎದುರಿಸಲಿದ್ದಾರೆ. 3ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಚೆಕ್ ಗಣರಾಜ್ಯದ ಕ್ರೆಜಿಕೋವಾ ಅವರು ಫಿಲಿಪ್ಪೀನ್ಸ್‌ನ ಅಲೆಕ್ಸಾಂಡ್ರಾ ಈಲ ವಿರುದ್ಧ ಆಡುವ ಮೂಲಕ ಟೂರ್ನಿಗೆ ಕಾಲಿಡಲಿದ್ದಾರೆ.
ಚೊಚ್ಚಲ ಪ್ರಶಸ್ತಿ ಗುರಿ:
ಪುರುಷರ ಸಿಂಗಲ್ಸ್‌ನ ವಿಶ್ವ ನಂ.1 ಆಟಗಾರ, ಇಟಲಿಯ ಯಾನಿಕ್ ಸಿನ್ನರ್, ಮಹಿಳಾ ಸಿಂಗಲ್ಸ್‌ನ ನಂ.1 ಅರೈನಾ ಸಬಲೆಂಕಾ ಚೊಚ್ಚಲ ವಿಂಬಲ್ಡನ್ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಬೆಲಾರಸ್‌ನ ಸಬಲೆಂಕಾ 3 ಬಾರಿ ಗ್ರ್ಯಾನ್‌ಸ್ಲಾಂ ಗೆದ್ದಿದ್ದರೂ, ಒಮ್ಮೆಯೂ ವಿಂಬಲ್ಡನ್ ಫೈನಲ್‌ಗೇರಿಲ್ಲ. ಇತ್ತೀಚೆಗಷ್ಟೇ ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ಸಿನ್ನರ್ ಕೂಡಾ ಈವರೆಗೂ ವಿಂಬಲ್ಡನ್ ಫೈನಲ್ ಪ್ರವೇಶಿಸಿಲ್ಲ. 5 ಗ್ರ್ಯಾನ್‌ಸ್ಲಾಂಗಳ ಒಡತಿ ಇಗಾ ಸ್ವಿಯಾಟೆಕ್, ಈ ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಕೊಕೊ ಗಾಫ್ ಕೂಡಾ ಚೊಚ್ಚಲ ವಿಂಬಲ್ಡನ್ ಗೆಲ್ಲುವ ಕಾತರದಲ್ಲಿದ್ದಾರೆ.
ನನಸಾಗುತ್ತಾ ಜೋಕೋ
25 ಗ್ರ್ಯಾನ್‌ಸ್ಲಾಂ ಕನಸು
ಪುರುಷರ ಟೆನಿಸ್ ಇತಿಹಾಸದಲ್ಲೇ ಅತಿ ಹೆಚ್ಚು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿರುವ ಆಟಗಾರ ನೋವಾಕ್ ಜೋಕೋವಿಚ್. ಅವರು 24 ಬಾರಿ ಟ್ರೋಫಿ ಗೆದ್ದಿದ್ದಾರೆ. 10 ಬಾರಿ ಆಸ್ಟ್ರೇಲಿಯನ್ ಓಪನ್, 3 ಫ್ರೆಂಚ್ ಓಪನ್, 7 ವಿಂಬಲ್ಡನ್, 4 ಯುಎಸ್ ಓಪನ್ ಜಯಿಸಿದ್ದಾರೆ. ಆದರೆ 25ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ಅವರ ಕನಸು ಕಳೆದ ಒಂದೂವರೆ ವರ್ಷದಿಂದ ನನಸಾಗುತ್ತಲೇ ಇಲ್ಲ. 2023ರಲ್ಲಿ ಯುಎಸ್ ಓಪನ್ ಗೆದ್ದ ಬಳಿಕ ಕಳೆದ 6 ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಒಮ್ಮೆಯೂ ಜೋಕೋವಿಚ್ ಚಾಂಪಿಯನ್ ಆಗಿಲ್ಲ. ಈ ಬಾರಿ ವಿಂಬಲ್ಡನ್ ಗೆದ್ದು, 25 ಗ್ರ್ಯಾನ್‌ಸ್ಲಾಂ ಮುಡಿಗೇರಿಸಿಕೊಂಡ ಏಕೈಕ ಟೆನಿಸ್ ಪಟು ಎನಿಸಿಕೊಳ್ಳುವ ಕಾತರದಲ್ಲಿದ್ದಾರೆ.
ಒಟ್ಟು ₹628 ಕೋಟಿ
ನಗದು ಬಹುಮಾನ!
ಈ ಬಾರಿ ವಿಂಬಲ್ಡನ್ ಟೆನಿಸ್ ಒಟ್ಟು ₹628 ಕೋಟಿ ನಗದು ಬಹುಮಾನ ಹೊಂದಿದೆ. ಪುರುಷ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗದ ವಿಜೇತರು ತಲಾ ₹35 ಕೋಟಿ, ರನ್ನರ್-ಅಪ್ ಆದವರು ತಲಾ ₹17.8 ಕೋಟಿ ನಗದು ಪಡೆಯಲಿದ್ದಾರೆ. ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ಆಟಗಾರರಿಗೂ ₹77 ಲಕ್ಷ ಸಿಗಲಿದೆ.
ಲೈನ್ ಜಡ್ಜ್‌ಗಳ ಬದಲು
450 ಕ್ಯಾಮರಾ ಬಳಕೆ!
1877ರಲ್ಲಿ ವಿಂಬಲ್ಡನ್ ಆರಂಭಗೊಂಡಿತ್ತು. 148 ವರ್ಷ ಇತಿಹಾಸವಿರುವ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಲೈನ್ ಜಡ್ಜ್ ಇರುವುದಿಲ್ಲ. ಆಟಗಾರರು ಬಾರಿಸಿದ ಚೆಂಡು ಲೈನ್‌ನ ಒಳಗಡೆ ಬಿದ್ದಿದೆಯೋ ಅಥವಾ ಹೊರಗಡೆ ಬಿದ್ದಿದೆಯೋ ಎಂಬುದನ್ನು ಗುರುತಿಸಲು ಈವರೆಗೂ ಲೈನ್ ಜಡ್ಜ್‌ಗಳು ಇರುತ್ತಿದ್ದರು. ಈ ವರ್ಷದಿಂದ ಎಲೆಕ್ಟ್ರಾನಿಕ್ ಲೈನ್ ಕಾಲಿಂಗ್ ಮೂಲಕ ತೀರ್ಪು ನೀಡಲಾಗುತ್ತದೆ. ಇದಕ್ಕಾಗಿ ವಿಂಬಲ್ಡನ್ ಪಂದ್ಯಗಳು ನಡೆಯಲಿರುವ ಅಂಕಣಗಳಲ್ಲಿ 450ಕ್ಕೂ ಹೆಚ್ಚು ಕ್ಯಾಮರಾಗಳನ್ನು ಅಳವಡಿಸಲಾಗಿದೆ. 80 ಮಾಜಿ ಲೈನ್ ಜಡ್ಜ್‌ಗಳು ಈ ಬಾರಿ ಮ್ಯಾಚ್ ಅಸಿಸ್ಟೆಂಟ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.