ಸಾರಾಂಶ
ಬೆಂಗಳೂರು, ದೆಹಲಿಯಲ್ಲಿ ಹೈಪರ್‌ಲೂಪ್, ಮೆಟ್ರಿನೋ ಪಾಡ್ ಟ್ಯಾಕ್ಸಿ, ಮತ್ತು ಪಿಲ್ಲರ್ ಆಧಾರಿತ ಸಮೂಹ ಸಾರಿಗೆ ವ್ಯವಸ್ಥೆ ಹಾಗೂ 135 ಸೀಟುಗಳ ವಿದ್ಯುತ್‌ಚಾಲಿತ ತ್ವರಿತ ಸಮೂಹ ಸಾರಿಗೆ ಬಸ್ ಪರಿಚಯಿಸಲು ಉದ್ದೇಶಿಸಿರುವುದಾಗಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ರಾಂಚಿ : ಅತಿ ಹೆಚ್ಚು ಜನದಟ್ಟಣೆ, ಸಂಚಾರ ದಟ್ಟಣೆ ಇರುವ ಮಹಾನಗರಗಳಾದ ಬೆಂಗಳೂರು, ದೆಹಲಿಯಲ್ಲಿ ಹೈಪರ್‌ಲೂಪ್, ಮೆಟ್ರಿನೋ ಪಾಡ್ ಟ್ಯಾಕ್ಸಿ, ಮತ್ತು ಪಿಲ್ಲರ್ ಆಧಾರಿತ ಸಮೂಹ ಸಾರಿಗೆ ವ್ಯವಸ್ಥೆ ಹಾಗೂ 135 ಸೀಟುಗಳ ವಿದ್ಯುತ್‌ಚಾಲಿತ ತ್ವರಿತ ಸಮೂಹ ಸಾರಿಗೆ ಬಸ್ ಪರಿಚಯಿಸಲು ಉದ್ದೇಶಿಸಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮುಂದಿನ ತಲೆಮಾರಿನ ಸಮೂಹ ಸಾರಿಗೆ ವ್ಯವಸ್ಥೆಯ ಕುರಿತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿಯನ್ನು ಬಹಿರಂಗಪಡಿಸಿದ್ದಾರೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.
ವಿಶೇಷ ಬಸ್:
ಎಲೆಕ್ಟ್ರಿಕ್ ತುರ್ತು ಸಾರಿಗೆ ಯೋಜನೆಗಳ ಕುರಿತು ವಿವರ ನೀಡಿದ ಅವರು, ಸದ್ಯ 135 ಸೀಟ್‌ನ ಎಲೆಕ್ಟ್ರಿಕ್ ಸಾರಿಗೆ ಬಸ್ ನಾಗ್ಪುರದಲ್ಲಿ ಪ್ರಾಯೋಗಿಕವಾಗಿ ಸಂಚರಿಸುತ್ತಿದೆ. ಈ ಪರೀಕ್ಷೆ ಪೂರ್ಣಗೊಂಡರೆ ಬೆಂಗಳೂರು- ಚೆನ್ನೈ, ದೆಹಲಿ-ಚಂಡೀಗಢ, ದೆಹಲಿ-ಡೆಹ್ರಾಡೂನ್, ದೆಹಲಿ-ಮೀರತ್, ದೆಹಲಿ-ಜೈಪುರ, ಮುಂಬೈ-ಪುಣೆ, ಮುಂಬೈ-ಔರಂಗಾಬಾದ್ ಮತ್ತು ಇತರೆ ನಗರಗಳ ನಡುವೆಯೂ ಪರಿಚಯಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಸಾರಿಗೆ ವ್ಯವಸ್ಥೆಯಲ್ಲಿ ಆವಿಷ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಮೂಹ ಸಾರಿಗೆ ವಿಚಾರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡುತ್ತಿದ್ದೇವೆ. ಅಮೆರಿಕದ ಗುಣಮಟ್ಟದ ರಸ್ತೆಯನ್ನು ದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವುದಾಗಿ ಗಡ್ಕರಿ ನುಡಿದರು.
ಮೆಟ್ರೋಪಾಲಿಟನ್ ನಗರಗಳು ಮಾತ್ರವಲ್ಲ, ಕುಗ್ರಾಮಗಳಲ್ಲೂ ಸಾರಿಗೆ ಸೌಲಭ್ಯಕ್ಕೆ ಸಾಕಷ್ಟು ಆದ್ಯತೆ ನೀಡಲಾಗುವುದು. ರೋಪ್‌ವೇಗಳು, ಕೇಬಲ್ ಕಾರುಗಳು ಮತ್ತು ಫನಿಕುಲರ್ ರೈಲ್ವೆ ಸೇವೆಯನ್ನು ಕೇದಾರನಾಥ್ ಸೇರಿ ದೇಶದ 360 ಸ್ಥಳಗಳಲ್ಲಿ ನಿರ್ಮಿಸುತ್ತಿದ್ದೇವೆ. ಇದರಲ್ಲಿ 60 ಯೋಜನೆಗಳಲ್ಲಿ ಕಾಮಗಾರಿ ಈಗಾಗಲೇ ಆರಂಭವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಫನಿಕುಲರ್ ರೈಲ್ವೆ ಯೋಜನೆಯು ಎಲಿವೇಟರ್‌ಗಳು ಮತ್ತು ರೈಲ್ವೆ ತಂತ್ರಜ್ಞಾನ ಅಳವಡಿಸಿಕೊಂಡ ಸಾರಿಗೆ ವ್ಯವಸ್ಥೆಯಾಗಿದೆ. ಬೆಟ್ಟ ಪ್ರದೇಶಗಳಲ್ಲಿ ಇದು ಜಾರಿಗೆ ಬರಲಿದೆ. ಈ ಯೋಜನೆಗಳ ವೆಚ್ಚ 200 ಕೋಟಿಯಿಂದ 5000 ಕೋಟಿ ರು. ವರೆಗೆ ಇರುತ್ತದೆ. ಒಮ್ಮೆ ಈ ಯೋಜನೆ ಪೂರ್ಣಗೊಂಡರೆ ಭಾರತದ ಚಿತ್ರಣವೇ ಬದಲಾಗಲಿದೆ ಎಂದಿದ್ದಾರೆ ಗಡ್ಕರಿ.
ಏನೇನು ಯೋಜನೆ?
- 25,000 ಕಿ.ಮೀ.ನ ದ್ವಿಪಥದ ಹೈವೇ ಚತುಷ್ಪಥಗೊಳಿಸುವುದು
- ಪ್ರಮುಖ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಸಮೂಹ ಸಾರಿಗೆ ಸ್ಥಾಪನೆ
- ಪ್ರತಿ ದಿನ 100 ಕಿ.ಮೀ.ವರೆಗೆ ರಸ್ತೆ ನಿರ್ಮಾಣ ಮಾಡುವ ಗುರಿ
- ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ 25 ಕೋಟಿ ಮರ ನೆಡುವುದು
- ಹೆದ್ದಾರಿಗಾಗಿ 1 ಮರ ಕಡಿದರೆ ಪರ್ಯಾಯವಾಗಿ 5 ಮರ ನೆಡುವುದು
- ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ವಿಶ್ವಮಟ್ಟದ ಸೌಲಭ್ಯ
ಬೆಂಗಳೂರಿಗೆ ಏನೇನು?
ದೈತ್ಯ ಇ-ಬಸ್: ಮೆಟ್ರೋ ರೀತಿಯಲ್ಲಿ 3 ಬೋಗಿ ಹೊಂದಿರುವ ಎಲೆಕ್ಟ್ರಿಕ್ ಬಸ್. ಗಂಟೆಗೆ 125 ಕಿ.ಮೀ. ವೇಗದಲ್ಲಿ ಓಡುವ ಬಸ್ ಇದು. ಬೆಂಗಳೂರು- ಚೆನ್ನೈ ಮಾರ್ಗದಲ್ಲಿ ಸಂಚಾರ ಉದ್ದೇಶ
ಪಾಡ್ ಟ್ಯಾಕ್ಸಿ: ಮೋನೋ ರೈಲಿನ ಮಾದರಿಯ ಆದರೆ ಕಡಿಮೆ ಪ್ರಯಾಣಿಕರು ಸಂಚರಿಸುವ ವ್ಯವಸ್ಥೆ. ಇದು ಸಣ್ಣ ಕಾರಿನ ರೀತಿ ಇರುತ್ತದೆ. 2ರಿಂದ 6 ಜನ ಕೂರಬಹುದು. ಗಂಟೆಗೆ 130 ಕಿ.ಮೀ. ವೇಗ.
ಹೈಪರ್‌ಲೂಪ್: ನಿರ್ವಾತ ಪ್ರದೇಶದಲ್ಲಿ ಸಾಗಬಲ್ಲ ಶರವೇಗದ ಮಿನಿರೈಲು. 1200 ಕಿ.ಮೀ. ವೇಗ ಸಾಧ್ಯ. ನೆಲ, ನೆಲದಾಳ ಅಥವಾ ಆಗಸದಲ್ಲಿ ಇದಕ್ಕೆ ವಿಶೇಷ ವ್ಯವಸ್ಥೆ ಬೇಕು. ವಿಶ್ವದಲ್ಲಿ ಎಲ್ಲೂ ಇಂಥ ಸೇವೆ ಇಲ್ಲ.
ಎಲೆಕ್ಟ್ರಿಕ್ ಬಸ್ ವಿಶೇಷ
ಇದು ಮೆಟ್ರೋ ರೀತಿ ಮೂರು ಬೋಗಿಗಳನ್ನು ಹೊಂದಿರುವ ಬಸ್. ಒಳಗೆ ಆರಾಮದಾಯಕ ಸೀಟ್, ಎಸಿ, ಪ್ರತಿ ಸೀಟ್ ಬಳಿ ಲ್ಯಾಪ್ ಇಡಲು ವ್ಯವಸ್ಥೆ, ಪ್ಯಾಕ್ ಮಾಡಿದ ಆಹಾರ ಸೇರಿ ಹಲವು ವ್ಯವಸ್ಥೆ ಹೊಂದಿರುತ್ತದೆ. ಇವು ಗಂಟೆಗೆ 120ರಿಂದ 125 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲವು. ಡೀಸೆಲ್ ಬಸ್‌ಗಿಂತ ಶೇ.30ರಷ್ಟು ಕಡಿಮೆ ವೆಚ್ಚ. ಪರಿಸರ ಮಾಲಿನ್ಯವೂ ಕಡಿಮೆ. ಬಸ್‌ಗಳು ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಹೊಂದಿರಲಿದ್ದು, 30 ನಿಮಿಷಕ್ಕೆ ಪೂರ್ಣ ರೀಚಾರ್ಜ್ ಸಾಧ್ಯ.
ಮೆಟ್ರಿನೋ ಪಾಡ್ ಟ್ಯಾಕ್ಸಿ
ಇದು ಮೋನೋ ರೈಲಿನ ರೀತಿ ಆಗಸದಲ್ಲಿ ಹಳಿಗಳ ಆಧಾರದಲ್ಲಿ ಚಲಿಸುವ ವ್ಯವಸ್ಥೆ. ಆದರೆ ಸಣ್ಣ ಕಾರಿನ ರೀತಿಯಲ್ಲಿ ಇರುತ್ತದೆ. ಒಮ್ಮೆಗೆ 2-6 ಜನ ಪ್ರಯಾಣಿಸಬಹುದು. ಗಂಟೆಗೆ 60-130 ಕಿ.ಮೀ ವೇಗದಲ್ಲಿ ಸಂಚಾರ ಸಾಧ್ಯ. ನಿಗದಿತ ಮಾರ್ಗಗಳಲ್ಲಿ ಸಂಚಾರ ಮಾಡುತ್ತದೆ. ಪ್ರಯಾಣಿಕರು ನಿಲ್ದಾಣದಲ್ಲಿ ಇಳಿಯುವುದು, ಹತ್ತುವುದು ಮಾಡಬಹುದು. ತ್ವರಿತ ಸಂಚಾರ ಸಾಧ್ಯ
ಹೈಪರ್‌ಲೂಪ್
ಇದು ಇನ್ನೂ ಪ್ರಯೋಗದ ಹಂತದಲ್ಲಿರುವ ವ್ಯವಸ್ಥೆ. ನಿರ್ವಾತ ಪ್ರದೇಶದಲ್ಲಿ ಸಾಗಬಲ್ಲ ಮಿನಿ ರೈಲು ಎನ್ನಬಹುದು. ಇದಕ್ಕೆ ನೆಲ, ನೆಲದಾಳ ಅಥವಾ ಆಗಸದಲ್ಲಿ ವಿಶೇಷ ವ್ಯವಸ್ಥೆ ರಚನೆಯಾಗಬೇಕು. ಗಂಟೆಗೆ 700-1200 ಕಿ.ಮೀ. ವೇಗದವರೆಗೆ ಸಂಚರಿಸಬಲ್ಲ ಸಾಮರ್ಥ್ಯ ಇದಕ್ಕಿದೆ. ಇದುವರೆಗೆ ವಿಶ್ವದಲ್ಲಿ ಎಲ್ಲೂ ಇಂಥ ವ್ಯವಸ್ಥೆ ಜಾರಿಯಾಗಿಲ್ಲ. ದೂರ ಪ್ರಯಾಣಕ್ಕೆ ಹೆಚ್ಚಿನ ಅನುಕೂಲ.