ಮೈತ್ರಿ ಅಭ್ಯರ್ಥಿಗಳು ಗೆಲುವು: ದಳ - ಕಮಲ ವಿಜಯೋತ್ಸವ

| Published : Jun 09 2024, 01:42 AM IST

ಮೈತ್ರಿ ಅಭ್ಯರ್ಥಿಗಳು ಗೆಲುವು: ದಳ - ಕಮಲ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದ ಮುಂದಿನ ದಿನಗಳಲ್ಲಿ ಇಂತಹ ಅಸಹ್ಯಕರ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದೆ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ರೀತಿಯ ಫಲಿತಾಂಶ ಪುನರಾವರ್ತನೆ ಆಗುವುದರಲ್ಲಿ ಸಂಶಯವಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರು

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆಯಲ್ಲಿ ತಾಲೂಕಿನ ನಗರಕೆರೆ ಗ್ರಾಮದ ಉಭಯ ಪಕ್ಷಗಳ ಮುಖಂಡರು ಶನಿವಾರ ರೈತರಿಗೆ ತೆಂಗಿನ ಸಸಿಗಳನ್ನು ‌ವಿತರಿಸುವ ಮೂಲಕ ವಿನೂತನವಾಗಿ ವಿಜಯೋತ್ಸವ ಆಚರಿಸಿದರು.

ಗ್ರಾಮದ ಹೂರವಲಯದ ಕೆರೆ ಅಂಗಳದಲ್ಲಿರುವ ಶ್ರೀ ದೈತಮ್ಮ ನವರ ದೇವಾಲಯದ ಆವರಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರು ಕ್ಷೇತ್ರದಿಂದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಬೆಂಗಳೂರು ಗ್ರಾಮಾಂತರದಿಂದ ಹೃದಯ ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಗೆಲುವಿನ ಅಂಗವಾಗಿ ರೈತರಿಗೆ ಸುಮಾರು 1000 ತೆಂಗಿನ ಸಸಿಗಳನ್ನು ವಿತರಿಸುವ ಮೂಲಕ ಆಚರಿಸಿದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಈ ತ್ರಿಮೂರ್ತಿಗಳು ಲೋಕಸಭೆಯಲ್ಲಿ ಕಾವೇರಿ ನದಿ ನೀರಿನ ಸಮಸ್ಯೆ, ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವ ಕೆಲಸ ಮಾಡಲಿ ಮತ್ತು ಕೇಂದ್ರದಿಂದ ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಕುರಿತು ಹೋರಾಟ ನಡೆಸಲಿ ಎಂದು ನಗರಕೆರೆ ಗ್ರಾಪಂ ಸದಸ್ಯ ಹನುಮೇಗೌಡ ಆಶಿಸಿದರು.

ಜೆಡಿಎಸ್ ಮುಖಂಡ ಪ್ರಸನ್ನ ಮಾತನಾಡಿ, ಮಂಡ್ಯದ ಜೆಡಿಎಸ್ ನಾಯಕರ ಗಂಡಸ್ತನದ ಬಗ್ಗೆ ಮತ್ತು ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿರುವ ಕ್ಷೇತ್ರದ ಶಾಸಕರಿಗೆ ಮತದಾರರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಕ್ಷೇತ್ರದ ಮುಂದಿನ ದಿನಗಳಲ್ಲಿ ಇಂತಹ ಅಸಹ್ಯಕರ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದೆ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ರೀತಿಯ ಫಲಿತಾಂಶ ಪುನರಾವರ್ತನೆ ಆಗುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.

ನಗರಕೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರೂಪ ರಾಜಶೇಖರ್, ನಿರ್ದೇಶಕರಾದ ರಾಜಶೇಖರ್, ಯಜಮಾನ್ ಶಿವಲಿಂಗಯ್ಯ, ನಾಗರಾಜು, ದೊಡ್ಡ ಲಿಂಗೇಗೌಡ, ಗಂಗಾಧರ್, ರಾಮಲಿಂಗಯ್ಯ, ಬಸವಚಾರಿ ಹಾಗೂ ಗ್ರಾಮದ ಮುಖಂಡರು ಇದ್ದರು.