ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯ ಬಳಿ ೧೮ ಕೋತಿಗಳು ವಿಷಪ್ರಾಶನದಿಂದ ಸಾಮೂಹಿಕವಾಗಿ ಬಲಿಯಾಗಿವೆ. 2 ಕೋತಿಗಳು ನಿತ್ರಾಣ ಸ್ಥಿತಿಯಲ್ಲಿ ಬದುಕುಳಿದಿದ್ದು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡ್ಲುಪೇಟೆ : ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಐದು ಹುಲಿಗಳು ವಿಷಪ್ರಾಶನಕ್ಕೆ ಬಲಿಯಾದ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದೆ. ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯ ಬಳಿ 18 ಕೋತಿಗಳು ವಿಷಪ್ರಾಶನದಿಂದ ಸಾಮೂಹಿಕವಾಗಿ ಬಲಿಯಾಗಿವೆ. 2 ಕೋತಿಗಳು ನಿತ್ರಾಣ ಸ್ಥಿತಿಯಲ್ಲಿ ಬದುಕುಳಿದಿದ್ದು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ಬೆಳ್ಳಂ ಬೆಳಗ್ಗೆಯೇ ಕಂದೇಗಾಲ-ಕೊಡಸೋಗೆ ರಸ್ತೆಯ ಬದಿಯಲ್ಲಿ 20 ಕೋತಿಗಳ ರಾಶಿ ಬಿದ್ದಿವೆ. ೧೮ ಕೋತಿಗಳು ವಿಷಪ್ರಾಶನದಿಂದ ಬಲಿಯಾದರೆ ಮತ್ತೆರಡು ಕೋತಿಗಳು ಬದುಕುಳಿದಿವೆ. ಕೋತಿಗಳ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ವಿಷಪ್ರಾಶನದಿಂದಲೇ ಎನ್ನಲಾಗುತ್ತಿದೆ. ಇವುಗಳನ್ನು ಬೇರೆಡೆ ಕೊಂದು ಇಲ್ಲಿಗೆ ತಂದು ಎಸೆಯಲಾಗಿದೆ ಎನ್ನುವ ಸಂಶಯ ವ್ಯಕ್ತವಾಗಿದೆ. ಕೋತಿಗಳು ಸತ್ತ ಜಾಗದ ಸಮೀಪದಲ್ಲಿಯೇ ಗೋಣಿ ಚೀಲವೂ ಪತ್ತೆ ಆಗಿದ್ದು, ಬೇರೆಡೆಯಿಂದ ತಂದು ಎಸೆದಿರುವುದಕ್ಕೆ ಪುರಾವೆ ಸಿಕ್ಕಂತಾಗಿದೆ.
ಬಂಡೀಪುರ ಸಫಾರಿ ಕೇಂದ್ರದ ಬಳಿಯ ಅರಣ್ಯ ಇಲಾಖೆಯ ಪುನರ್ವಸತಿ ಕೇಂದ್ರದಲ್ಲಿ ಅರಣ್ಯ ಇಲಾಖೆ ಪಶು ವೈದ್ಯ ವಾಸೀಂ ಮಿರ್ಜಾ ೧೮ ಕೋತಿಗಳ ಶವ ಪರೀಕ್ಷೆ ನಡೆಸಿದರು. ಮೃತ ಕೋತಿಗಳ ಕೆಲ ಅಂಗಾಂಗಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ.
ಸಿಸಿ ಕ್ಯಾಮೆರಾ ತಪಾಸಣೆ:
ಕಂದೇಗಾಲ-ಕೊಡಸೋಗೆ ರಸ್ತೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುವಂತೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಆರ್‌ಎಫ್‌ಒ ಶಿವಕುಮಾರ್ ಸೂಚಿಸಿದರು.
ಕನ್ನಡಪ್ರಭದೊಂದಿಗೆ ಆರ್‌ಎಫ್‌ಒ ಶಿವಕುಮಾರ್ ಮಾತನಾಡಿ, ಈ ಸಂಬಂಧ ವಿಷಪ್ರಾಶನದಿಂದ ಕೋತಿಗಳು ಸಾವನ್ನಪ್ಪಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಯಲಿದೆ ಎಂದರು.