ಸಾರಾಂಶ
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಿನ ದಿನಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ) ಬದಲು ಹಿಂದೆ ಇದ್ದಂತೆ ಬ್ಯಾಲೆಟ್ ಪೇಪರ್ ಮೂಲಕ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು, ಈ ಸಂಬಂಧ ಅಗತ್ಯ ಕಾನೂನು ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಬೆಂಗಳೂರು : ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಿನ ದಿನಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ) ಬದಲು ಹಿಂದೆ ಇದ್ದಂತೆ ಬ್ಯಾಲೆಟ್ ಪೇಪರ್ ಮೂಲಕ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು, ಈ ಸಂಬಂಧ ಅಗತ್ಯ ಕಾನೂನು ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಜತೆಗೆ, ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವೇ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಲು ಮತ್ತು ಅದನ್ನು ಕಾಲಕಾಲಕ್ಕೆ ಪರಿಷ್ಕರಿಸುವಂತೆ ಅವಕಾಶ ಕಲ್ಪಿಸಲು ಅಗತ್ಯ ಕಾನೂನು ತಿದ್ದುಪಡಿ ಮತ್ತು ನಿಯಮಾವಳಿಗಳಿಗೆ ಬದಲಾವಣೆ ತರಲು ತೀರ್ಮಾನಿಸಲಾಗಿದೆ. ಜತೆಗೆ ಈ ಚುನಾವಣೆಗಳನ್ನು ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನದ ಮೂಲಕ ನಡೆಸಲು ಆಯೋಗಕ್ಕೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು, ರಾಜ್ಯದಲ್ಲಿ ಈವರೆಗೆ ಕೇಂದ್ರ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಗೆ ಸಿದ್ಧಪಡಿಸುತ್ತಿದ್ದ ಮತದಾರರ ಪಟ್ಟಿ ತೆಗೆದುಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೋಗುತ್ತಿದ್ದೆವು. ಆದರೆ, ಇಂದಿನ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧಪಡಿಸಲು ಹಾಗೂ ಪರಿಷ್ಕರಿಸುವ ಅವಕಾಶ ನೀಡಲು ಅಗತ್ಯ ಕಾನೂನು ತಿದ್ದುಪಡಿ ಮತ್ತು ನಿಯಮಾವಳಿಗಳ ಬದಲಾವಣೆಗೆ ತೀರ್ಮಾನಿಸಲಾಗಿದೆ ಎಂದರು.
ಇದರಿಂದ ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಮ್ಮದೇ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಲು, ಪರಿಷ್ಕರಿಸಲು ಅವಕಾಶ ಸಿಗಲಿದೆ. ಈ ತಿದ್ದುಪಡಿಯೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೇಗೆ ಮಾಡಬೇಕು, ಯಾವ ಪದ್ಧತಿಯಲ್ಲಿ ಮಾಡಬೇಕು ಎನ್ನುವ ಬಗ್ಗೆ ಶಿಫಾರಸು ಮಾಡಬೇಕಾಗುತ್ತದೆ. ಪ್ರಮುಖವಾಗಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಿ ಚುನಾವಣಾ ಮತದಾನ ನಡೆಸಲು ಶಿಫಾರಸು ಮಾಡಲು ಕೂಡ ತೀರ್ಮಾನಿಸಲಾಗಿದೆ ಎಂದರು.
ಇದಕ್ಕೆ ಯಾವುದೇ ಕಾನೂನು ತೊಡಕು ಬರುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಚುನಾವಣಾ ಆಯೋಗ ಕೂಡ ಒಂದು ಸ್ವತಂತ್ರ ಸಂಸ್ಥೆ. ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೇಗೆ ಮಾಡಬೇಕು, ಯಾವ ಪದ್ಧತಿ ಅನುಸರಿಸಬೇಕೆಂದು ಕಾಯ್ದೆ, ನಿಯಮ ಮಾಡಬಹುದು. ಅದರಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಕಾಯ್ದೆಯಲ್ಲಿ ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಗೆ ಮತದಾರಪಟ್ಟಿ ಸಿದ್ಧಪಡಿಸಲು ರಾಜ್ಯ ಆಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ಮತದಾರ ಪಟ್ಟಿ ಸಿದ್ಧಪಡಿಸಲು ಮತ್ತು ಪರಿಷ್ಕರಿಸಲು ಅವಕಾಶ ಕೋರಿ ಆಯೋಗದ ಆಯುಕ್ತರು ಪತ್ರ ಬರೆದಿದ್ದರು. ಇದನ್ನು ಆಧರಿಸಿ ಸಂಪುಟ ನಿರ್ಧಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.
ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನಕ್ಕೆ ಶಿಫಾರಸು ನಿರ್ಧಾರಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ, ಇತ್ತೀಚಿನ ದಿನಗಳಲ್ಲಿ ಮತದಾರರ ಪಟ್ಟಿ ತಯಾರಿಕೆಯಲ್ಲಿ ಸಾಕಷ್ಟು ಲೋಪಗಳಾಗುತ್ತಿರುವ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಬಂದಿವೆ. ಇದು ದೇಶಾದ್ಯಂತ ಕೇಳಿಬರುತ್ತಿದೆ. ಮತಗಳ್ಳತನದ ಮಾತುಗಳೂ ನಡೆಯುತ್ತಿವೆ. ಜನರಲ್ಲೂ ಇವಿಎಂ ಮತದಾನ ಪ್ರಕ್ರಿಯೆಯಲ್ಲಿ ವಿಶ್ವಾಸ ಕಡಿಮೆ ಆಗುತ್ತಿದೆ ಎನ್ನುವ ಅಭಿಪ್ರಾಯಗಳು ಬರುತ್ತಿವೆ. ಈ ಕಾರಣದಿಂದ ಈ ನಿರ್ಧಾರ ಮಾಡಲಾಗಿದೆ ಎಂದರು.
ರಾಜ್ಯ ಚುನಾವಣಾ ಆಯುಕ್ತರು ಏನಂತಾರೆ?
ರಾಜ್ಯ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಹಾಗೂ ಸ್ವಾಯತ್ತ ಸಂಸ್ಥೆ. ರಾಜ್ಯ ಸರ್ಕಾರ ಮಾಡುವ ಕಾಯ್ದೆ, ಕಾನೂನು, ನಿಯಮಾವಳಿಗಳನ್ನು ಅನುಸರಿಸಿ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಕಾಯ್ದೆ, ನಿಯಮಗಳಿಗೆ ತಿದ್ದುಪಡಿ ಮಾಡಿದರೆ ಅದರ ಪ್ರಕಾರ ಮಾಡಬೇಕಾಗುತ್ತದೆ ಎಂದು ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.
ಸಚಿವ ಸಂಪುಟದ ನಿರ್ಧಾರದ ಕುರಿತು ‘ಕನ್ನಡಪ್ರಭ’ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ರಾಜ್ಯ ಸಚಿವ ಸಂಪುಟದ ನಿರ್ಧಾರದಿಂದ ಯಾವುದೇ ಕಾನೂನು ತೊಡಕು ಉದ್ಭವಿಸುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿಧಾನಸಭಾ ಚುನಾವಣಾ ಮತದಾರರ ಪಟ್ಟಿ ಪರಿಗಣಿಸಬೇಕು ಎಂದು ಕೇಂದ್ರ ಅಥವಾ ರಾಜ್ಯದ ಯಾವುದೇ ನಿಯಮದಲ್ಲಿ ಹೇಳಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಸೂಕ್ತ ಕಾಯ್ದೆ, ನಿಯಮಾವಳಿ ಬದಲಾವಣೆ ಮಾಡಿ ನಮ್ಮದೇ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಲು ಹಾಗೂ ಪರಿಷ್ಕರಿಸಲು ಅವಕಾಶ ನೀಡಿದರೆ ನಾವು ಮಾಡುತ್ತೇವೆ. ಅದೇ ರೀತಿ ಸ್ಥಳೀಯ ಸಂಸ್ಥೆಗಳಿಗೆ ಇವಿಎಂ ಮತದಾನ ಕಡ್ಡಾಯ ಮಾಡಿಲ್ಲ. ಸರ್ಕಾರ ಕಾಯ್ದೆ, ಕಾನೂನಾತ್ಮಕವಾಗಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಪ್ರಕ್ರಿಯೆ ನಡೆಸಿ ಎಂದರೆ ಅದನ್ನೂ ನಾವು ಮಾಡಬೇಕಾಗುತ್ತದೆ ಎಂದರು.
ಏಕೆ ಈ ನಿರ್ಧಾರ?
ಮತದಾರರ ಪಟ್ಟಿ ತಯಾರಿಕೆಯಲ್ಲಿ ಸಾಕಷ್ಟು ಲೋಪಗಳಾಗಿರುವ ಬಗ್ಗೆ ದೂರುಗಳು ಬರುತ್ತಿವೆ- ದೇಶಾದ್ಯಂತ ಮತಗಳ್ಳತನ ಪ್ರಕ್ರಿಯೆ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿದೆ- ಇವಿಎಂ ಮತದಾನ ಪ್ರಕ್ರಿಯೆ ಕುರಿತು ಜನರಲ್ಲಿ ವಿಶ್ವಾಸ ಕಡಿಮೆಯಾಗಿದೆ ಎಂಬ ವಾದಗಳಿವೆ- ಹೀಗಾಗಿ ಸರ್ಕಾರ ಇಂತಹ ತೀರ್ಮಾನವನ್ನು ತೆಗೆದುಕೊಂಡಿದೆ
ಸಚಿವ ಎಚ್.ಕೆ. ಪಾಟೀಲ್
ಕಾಯ್ದೆ ತಿದ್ದುಪಡಿ ತಂದರೆ ನಾವು ಮಾಡಲೇಬೇಕು
ರಾಜ್ಯ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಹಾಗೂ ಸ್ವಾಯತ್ತ ಸಂಸ್ಥೆ. ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಕಾಯ್ದೆ, ನಿಯಮಗಳಿಗೆ ತಿದ್ದುಪಡಿ ಮಾಡಿದರೆ ಅದರ ಪ್ರಕಾರ ಮಾಡಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿಧಾನಸಭಾ ಚುನಾವಣೆ ಮತದಾರರ ಪಟ್ಟಿ ಪರಿಗಣಿಸಬೇಕು ಎಂದು ಯಾವುದೇ ನಿಯಮದಲ್ಲಿ ಹೇಳಿಲ್ಲ. ನಮ್ಮದೇ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಲು ಹಾಗೂ ಪರಿಷ್ಕರಿಸಲು ಅವಕಾಶ ನೀಡಿದರೆ ನಾವು ಮಾಡುತ್ತೇವೆ.
- ಜಿ.ಎಸ್.ಸಂಗ್ರೇಶಿ, ರಾಜ್ಯ ಚುನಾವಣೆ ಆಯೋಗದ ಆಯುಕ್ತ
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))