ಸಾರಾಂಶ
ತುಮಕೂರು ಜಿಲ್ಲೆಗೆ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ 4701.88 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ವೆಚ್ಚ ಮಾಡಿದೆ. ಇಲ್ಲಿನ ಗ್ಯಾರಂಟಿ ಯೋಜನೆಗಳ ಬಗ್ಗೆ ದೇಶ, ವಿದೇಶಗಳಲ್ಲಿ ಚರ್ಚೆಯಾಗುತ್ತಿರುವುದು ಯೋಜನೆಗಳ ಯಶಸ್ಸಿಗೆ ಸಾಕ್ಷಿ
ಬೆಂಗಳೂರು : ತುಮಕೂರು ಜಿಲ್ಲೆಗೆ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ 4701.88 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ವೆಚ್ಚ ಮಾಡಿದೆ. ಇಲ್ಲಿನ ಗ್ಯಾರಂಟಿ ಯೋಜನೆಗಳ ಬಗ್ಗೆ ದೇಶ, ವಿದೇಶಗಳಲ್ಲಿ ಚರ್ಚೆಯಾಗುತ್ತಿರುವುದು ಯೋಜನೆಗಳ ಯಶಸ್ಸಿಗೆ ಸಾಕ್ಷಿ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ, ಶಾಸಕ ದಿನೇಶ್ ಗೂಳಿಗೌಡ ಹೇಳಿದರು.
ತುಮಕೂರು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಚುನಾವಣೆ ಗೆಲುವಿಗಾಗಿ ಮಾಡಿದ ಯೋಜನೆಗಳಲ್ಲ. ಜನರ ಜೀವನಮಟ್ಟ ಸುಧಾರಣೆಗೆ 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿದ ಸಂಕಲ್ಪವನ್ನು ಜಾರಿಗೆ ತಂದಿದ್ದಾರೆ. ಇದು ನಮ್ಮ ಕಾಂಗ್ರೆಸ್ ಸರ್ಕಾರದ ಬದ್ಧತೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ತಲಾದಾಯ ಹೆಚ್ಚಳವಾಗಿದೆ. 2013ರಲ್ಲಿ 1.05 ಲಕ್ಷ ರು.ಇದ್ದ ತಲಾದಾಯ ಈಗ 2.04 ಲಕ್ಷಕ್ಕೆ ತಲುಪಿದೆ. ಇದಕ್ಕೆ ಗ್ಯಾರಂಟಿ ಯೋಜನೆಗಳ ಕೊಡುಗೆ ಸಾಕಷ್ಟಿದೆ. ಇನ್ನೂ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದರ ಜೊತೆಗೆ ರಾಜ್ಯದ 33 ಲಕ್ಷ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ ರೈತರ ನೆರವಿಗೂ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರಗೌಡ, ಉಪಾಧ್ಯಕ್ಷರಾದ ಹನುಮಂತಯ್ಯ, ನರಸೀಯಪ್ಪ, ಅಂಬರೀಶ್, ಶಿವಪ್ರಸಾದ್, ಪಂಚಾಕ್ಷರಿ ಸೇರಿದಂತೆ ಇತರರು ಇದ್ದರು.