ಸಾರಾಂಶ
ಮಂಜುನಾಥ ಯರವಿನತಲಿ
ಕನ್ನಡಪ್ರಭ ವಾರ್ತೆ ಗುತ್ತಲಲೋಕಸಭಾ ಚುನಾವಣಾ ನೀತಿ ಸಂಹಿತೆಯ ಮಧ್ಯೆಯೂ ಅಧಿಕಾರಿಗಳ ಭಯವಿಲ್ಲದೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ರಾತ್ರೋ ರಾತ್ರಿ ವಾಹನಗಳಲ್ಲಿ ಮರಳು ಸಾಗಾಟ ನಡೆಯುತ್ತಿದ್ದರೂ ಕೂಡಾ ಜಿಲ್ಲಾಡಳಿತ, ಗಣಿ, ಪೊಲೀಸ್ ಹಾಗೂ ಕಂದಾಯ ಇಲಾಖೆ ಮೌನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಮಳೆಯಿಲ್ಲದೆ ಅನೇಕ ಕೆರೆ ಕಟ್ಟೆಗಳು ಬರಿದಾಗಿದ್ದು, ರೈತ ಸಮುದಾಯ ಅಳಿದುಳಿದ ಬೆಳೆಯನ್ನು ಸಂರಕ್ಷಿಸಲು ಪರದಾಡುತ್ತಿದ್ದರೆ ಮರಳು ದಂಧೆಕೋರರು ರೈತರ ಭರವಸೆಯ ನದಿಗಳ ಒಡಲನ್ನೆ ಬಗೆದು ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿಗಾರಿಕೆಯಲ್ಲಿ ಪೊಲೀಸರೇ ಶಾಮೀಲು?: ಹಾವೇರಿ ತಾಲೂಕಿನ ಗಳಗನಾಥ, ಹುರುಳಿಹಾಳ, ಹಾವನೂರ, ಕಂಚಾರಗಟ್ಟಿ, ಹರಳಹಳ್ಳಿ, ತೆರೆದಹಳ್ಳಿ, ಮೇವುಂಡಿ ಸೇರಿದಂತೆ ಅನೇಕ ಗ್ರಾಮದ ನದಿಗಳ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಅಕ್ರಮ ತಡೆಯಬೇಕಾದ ಪೊಲೀಸ್ ಅಧಿಕಾರಿಗಳೇ ಗಣಿಗಾರಿಕೆಗೆ ಸಾಥ್ ನೀಡುತ್ತಿದ್ದಾರೆ ಎನ್ನುವದು ಸಾರ್ವಜನಿಕರ ದೂರಾಗಿದೆ. ಹಗಲು ಹೊತ್ತಿನಲ್ಲಿ ನದಿಯಲ್ಲಿ ಮರಳು ಸಂಗ್ರಹಿಸಿ ರಾತ್ರೋ ರಾತ್ರಿ ಸಾಗಾಟ ಮಾಡಲಾಗುತ್ತಿದೆ, ಹದಿನೈದು ದಿನಗಳ ಹಿಂದೆ ಲಾರಿ ಮಾಲಿಕನೊಬ್ಬ ಅಕ್ರಮ ಮರಳು ದಂಧೆ ನಡೆಸಲು ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರಿಗೆ ಹಣ ನೀಡಿದ್ದೇವೆ ಎಂಬ ವಾಟ್ಸಪ್ ಆಡಿಯೋವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.ಅಕ್ರಮ ಮರಳು ಗಣಿಗಾರಿಕೆಗೆ ನಲುಗಿದ ರೈತ: ಅಕ್ರಮ ಮರಳು ಗಣಿಗಾರಿಕೆ ಪುಂಡಾಟಕ್ಕೆ ಅನೇಕ ರೈತರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ, ಬರದ ಹಿನ್ನೆಲೆ ಬೆಳೆಗಳನ್ನು ಉಳಿಸಿಕೊಳ್ಳಲು ನದಿಯ ನೀರಿಗೆ ಅವಲಂಬಿತನಾಗಿದ್ದು, ಗಣಿಗಾರಿಕೆಯಿಂದ ನೀರು ಇಲ್ಲದಾಗುತ್ತಿದೆ ಹಾಗೂ ಹಾವೇರಿ ಹಾಗೂ ಗುತ್ತಲ ಪಟ್ಟಣಕ್ಕೆ ಕುಡಿಯಲು ನೀರು ಸಿಗದ ಸನ್ನಿವೇಶ ಎದುರಾಗಲಿದೆ. ಟ್ರ್ಯಾಕ್ಟರ್, ಲಾರಿ ಹಾಗೂ ಜೆಸಿಬಿ ವಾಹನಗಳ ಓಡಾಟದಿಂದ ಹೊಲದಲ್ಲಿನ ಬೆಳೆಗಳ ಮೇಲೆ ಅಪಾರವಾದ ಧೂಳು ಬಿದ್ದು ಬೆಳೆಗಳು ಹಾಳಾಗಿವೆ ಹಾಗೂ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ.ಐತಿಹಾಸಿಕ ದೇವಸ್ಥಾನಗಳಿಗೆ ಅಪಾಯ: ತುಂಗಭದ್ರಾ, ವರದಾ ನದಿಗಳ ದಡದಲ್ಲಿ ಇತಿಹಾಸ ದೇವಸ್ಥಾನಗಳಿದ್ದು ಅವುಗಳ ಪಕ್ಕದಲ್ಲಿಯೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಗಳಗನಾಥದ ಶ್ರೀ ಗಳಗೇಶ್ವರ ದೇವಸ್ಥಾನ, ಹರಳಹಳ್ಳಿಯ ಸೋಮೇಶ್ವರ ದೇವಸ್ಥಾನ, ಹಾವನೂರ ಗ್ರಾಮದೇವತೆ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿವೆ. ನದಿ ದಡದಲ್ಲಿ ಹಗಲು ರಾತ್ರಿ ಎಗ್ಗಿಲ್ಲದೇ ಮರಳನ್ನು ಜೆಸಿಬಿ ಯಂತ್ರ ಬಳಸಿ ತೆಗೆಯುವುದರಿಂದ ಹತ್ತಿರದ ದೇವಸ್ಥಾನಗಳಿಗೆ ಅಪಾಯ ಆಗುವ ಸಾಧ್ಯತೆ ಇದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮೌನವಾಗಿದ್ದಾರೆ.ಕ್ರಮ ಕೈಗೊಳ್ಳದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು: ತುಂಗಭದ್ರಾ ಹಾಗೂ ವರದಾ ನದಿ ಪಾತ್ರದಲ್ಲಿ ಸುಮಾರು ೧೫ಕ್ಕೂ ಹೆಚ್ಚು ಗ್ರಾಮಗಳಿವೆ. ಈ ಗ್ರಾಮದ ಅನೇಕ ಮನೆಗಳಲ್ಲಿ ಮನೆಗೊಂದು ಟ್ರ್ಯಾಕ್ಟರ್, ಲಾರಿ, ಟಿಪ್ಪರ್‌ಗಳಿದ್ದು, ಮರಳು ತುಂಬುವ ನೂರಾರು ಬಡ ಕಾರ್ಮಿಕರಿಗೆ ದಿನನಿತ್ಯ ೧೫೦೦-೨೦೦೦ ರು. ಕೂಲಿ ಸಿಗುತ್ತಿದೆ. ಹೀಗಾಗಿ ಗ್ರಾಮಸ್ಥರು ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ತುಟಿ ಬಿಚ್ಚುವದಿಲ್ಲ. ಅದರಲ್ಲೂ ತುಂಗಭದ್ರಾ ನದಿಯ ಮರಳು ಉತ್ಕೃಷ್ಟ ಗುಣಮಟ್ಟದಿಂದ ಕೂಡಿದ್ದು, ಗದಗ, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಲ್ಲೂ ಬೇಡಿಕೆ ಹೊಂದಿದೆ. ಅಕ್ರಮ ಮರಳು ಆಟಾಟೋಪದಿಂದ ಸಾವು, ನೋವು, ಹಲ್ಲೆ ನಡೆಯುತ್ತಿದ್ದರೂ ಹಿರಿಯ ಅಧಿಕಾರಿಗಳು, ಜನ ಪ್ರತಿನಿಧಿಗಳು ಮೌನಕ್ಕೆ ಜಾರಿದ್ದು ಆಶ್ಚರ್ಯ ಮೂಡಿಸಿದೆ.
ಅಕ್ರಮ ಮರಳುಗಾರಿಕೆ ತಡೆಯಲು ಪೊಲೀಸ್ ಇಲಾಖೆಯಿಂದ ನಿರಂತರವಾಗಿ ದಾಳಿ ಕೈಗೊಳ್ಳಲಾಗುತ್ತಿದೆ. ಕೆಲವು ದಿನಗಳಲ್ಲಿ 59 ಕೇಸ್ ದಾಖಲಿಸಿ, 415 ಲೋಡ್ ಅಕ್ರಮ ಮರಳು ಹಾಗೂ ಇದಕ್ಕೆ ಬಳಸಿದ 38 ವಾಹನಗಳನ್ನು ಸೀಜ್ ಮಾಡಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಅಕ್ರಮ ತಡೆಯಲು ಕ್ರಮ ವಹಿಸಲಾಗುವುದು. ಅಕ್ರಮ ಮರಳು ಸಾಗಣೆ ಮಾಡುವ ವಾಹನಗಳ ಪರವಾನಗಿ ರದ್ದು ಪಡಿಸುವಂತೆ ಆರ್‌ಟಿಒ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಅಂಶುಕುಮಾರ ಹೇಳಿದರು.