ಡಿಸೆಂಬರ್‌ನೊಳಗೆ ಎಸ್ಸೆಸ್ಸೆಲ್ಸಿ ಪಠ್ಯ ಬೋಧನೆ ಮುಗಿಸಲು ಸೂಚನೆ

| N/A | Published : Jul 11 2025, 01:49 AM IST / Updated: Jul 11 2025, 11:21 AM IST

SSLC exam
ಡಿಸೆಂಬರ್‌ನೊಳಗೆ ಎಸ್ಸೆಸ್ಸೆಲ್ಸಿ ಪಠ್ಯ ಬೋಧನೆ ಮುಗಿಸಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

  ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಮೊಬೈಲ್ ಫೋನ್ ಸೀಮಿತ ಉದ್ದೇಶಕ್ಕೆ ಬಳಸಬೇಕು, ಜುಲೈನಿಂದಲೇ ಪ್ರತಿ ದಿನ ಶಾಲಾ ಅವಧಿಯ ಮೊದಲು ವಿಶೇಷ ತರಗತಿ ನಡೆಸಬೇಕು,  ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಸಬೇಕು ಎಂಬುದು ಸೇರಿ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗಾಗಿ   29 ಅಂಶಗಳ ಮಾರ್ಗಸೂಚಿ 

 ಬೆಂಗಳೂರು :  ಶಾಲಾ ಅವಧಿಯಲ್ಲಿ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಮೊಬೈಲ್ ಫೋನ್ ಸೀಮಿತ ಉದ್ದೇಶಕ್ಕೆ ಬಳಸಬೇಕು, ಜುಲೈನಿಂದಲೇ ಪ್ರತಿ ದಿನ ಶಾಲಾ ಅವಧಿಯ ಮೊದಲು ವಿಶೇಷ ತರಗತಿ ನಡೆಸಬೇಕು, ಶಾಲಾ ಅವಧಿಯ ನಂತರ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಸಬೇಕು ಎಂಬುದು ಸೇರಿ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗಾಗಿ ಶಾಲಾ ಶಿಕ್ಷಣ ಇಲಾಖೆ 29 ಅಂಶಗಳ ಮಾರ್ಗಸೂಚಿ ನೀಡಿದೆ.

ಕಳೆದ ಎರಡು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ ಹಿನ್ನೆಲೆಯಲ್ಲಿ ಫಲಿತಾಂಶ ಹೆಚ್ಚಿಸಲು ಇಲಾಖೆ ಶಿಕ್ಷಕರಿಗೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಪ್ರಮುಖವಾಗಿ ಡಿಸೆಂಬರ್‌ ಅಂತ್ಯದೊಳಗೆ ಎಲ್ಲ ಪಠ್ಯವಸ್ತು ಬೋಧನೆ ಪೂರ್ಣಗೊಳಿಸಬೇಕು. ಎರಡು ತಿಂಗಳಿಗೊಮ್ಮೆ ಪಾಲಕರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳ ಕಲಿಕಾ ಮಟ್ಟ ಬಗ್ಗೆ ಮಾಹಿತಿ ನೀಡಿ ಮನೆಯಲ್ಲೂ ವ್ಯಾಸಂಗಕ್ಕೆ ಹೆಚ್ಚಿನ ಉತ್ತೇಜನ ನೀಡಲು ತಿಳಿಸಬೇಕು. ಡಯಟ್ ಅಧಿಕಾರಿಗಳು ವಾರದಲ್ಲಿ ಐದು ದಿನ ಶಾಲೆಗಳಿಗೆ ಭೇಟಿ ನೀಡಿ ಪರಿಹಾರ ಬೋಧನಾ ತರಗತಿಗಳಲ್ಲಿ ಭಾಗವಹಿಸುವುದು, ಮಕ್ಕಳಿಂದ ಗಟ್ಟಿಯಾಗಿ ಓದಿಸುವ ಅಭ್ಯಾಸ ಮಾಡಿಸುವುದು, ಇದರಲ್ಲಿ ಸರಾಸರಿ, ಸರಾಸರಿಗಿಂತ ಕಡಿಮೆ ಮತ್ತು ಹೆಚ್ಚು ಎಂಬ ಮೂರು ಗುಂಪುಗಳನ್ನು ರಚಿಸಬೇಕು. ಪ್ರತಿ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿಗಳನ್ನು ದತ್ತು ನೀಡಬೇಕು. ನಿಧಾನಗತಿಯ ಕಲಿಕಾ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೆ ಗುಂಪು ಅಧ್ಯಯನ ಚಟುವಟಿಕೆಗಳನ್ನು ರೂಪಿಸಬೇಕು, ಮಧ್ಯವಾರ್ಷಿಕ ಮತ್ತು ಪೂರ್ವಸಿದ್ಧತಾ ಪರೀಕ್ಷೆಗಳನ್ನು ವೆಬ್‌ಕಾಸ್ಟಿಂಗ್‌ ಕಣ್ಗಾವಲಿನಲ್ಲಿ ನಡೆಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಸುತ್ತೋಲೆ ಹೊರಡಿಸಿದ್ದಾರೆ.

ಪ್ರತಿದಿನ ಮುಂಜಾನೆ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದುನ್ನು ಪರಿಶೀಲಿಸಲು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ವೇಕ್‌ ಅಪ್ ಕಾಲ್ ಮಾಡಬೇಕು. ಒತ್ತಡ ನಿವಾರಣೆಗೆ ವಾರದಲ್ಲಿ ಕನಿಷ್ಠ ಒಂದು ಅವಧಿಯನ್ನು ಕ್ರೀಡೆಗೆ ಮೀಸಲಿಡುವುದು. ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ಗೀಳು ತಪ್ಪಿಸಬೇಕು. ಹಿಂದಿನ ವರ್ಷಗಳಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಗೆ ದೀರ್ಘಾವಧಿ, ಮಧ್ಯಮಾವಧಿ ಮತ್ತು ಅಲ್ಪಾವಧಿ ಕ್ರಿಯಾ ಯೋಜನೆ ರೂಪಿಸಬೇಕು. ಶೂನ್ಯ ಫಲಿತಾಂಶ ಪಡೆದ ಶಾಲೆಗಳು, ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಿಗೆ ಬಿಇಓ ಮತ್ತು ಡಿಡಿಪಿಐಗಳು ನಿರಂತರವಾಗಿ ಭೇಟಿ ನೀಡಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಬೇಕು ಎಂಬುದು ಸೇರಿ ಇನ್ನೂ ಹಲವು ಅಂಶಗಳನ್ನು ನೀಡಲಾಗಿದೆ.

Read more Articles on