ಸಕಲೇಶಪುರ : ಮೊದಲ ದಿನವೇ ಕಾಡಾನೆ ಸೆರೆ

| N/A | Published : May 02 2025, 12:16 AM IST / Updated: May 02 2025, 01:04 PM IST

Sakaleshpura wild elephant attacked

ಸಾರಾಂಶ

ಹಲವು ಜನರ ಜೀವಹರಣಕ್ಕೆ ಕಾರಣವಾಗಿದ್ದ ಕಾಡಾನೆ  ಡಿಎಫ್‌ಒ ಸೌರಭ್‌ ಕುಮಾರ್‌ ನೇತೃತ್ವದಲ್ಲಿ  ಸೆರೆ 

 ಸಕಲೇಶಪುರ : ಮಾನವ ಹಂತಕ ಕಾಡಾನೆಯನ್ನು ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ ಮೊದಲ ದಿನವೇ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.ಹಲವು ಜನರ ಜೀವಹರಣಕ್ಕೆ ಕಾರಣವಾಗಿದ್ದ ಕಾಡಾನೆಯನ್ನು ಕಳೆದ ಎರಡು ದಿನಗಳ ಹಿಂದೆ ಬೈಕೆರೆ ಗ್ರಾಮದಲ್ಲಿ ಷಣ್ಮುಖ ಎಂಬ ಕಾಫಿ ಬೆಳೆಗಾರರನ್ನು ಕೊಂದ ನಂತರ ಸೆರೆಹಿಡಿಯವಂತೆ ಒತ್ತಡ ಹೆಚ್ಚಾಗಿತ್ತು. 

ಅಂದು ನಡೆದ ಪ್ರತಿಭಟನೆಯ ವೇಳೆ ಸಂಸದ ಶ್ರೇಯಶ್ ಪಟೇಲ್ ನೀಡಿದ ವಾಗ್ದಾನದಂತೆ ಆನೆಚೌಕೂರು ಹಾಗೂ ದುಬಾರೆಯಿಂದ ತಲಾ ಮೂರು ಸಾಕಾನೆಗಳನ್ನು ಬುಧವಾರವೇ ತಾಲೂಕಿನ ಹಾಲೇಬೇಲೂರು ಆನೆಧಾಮಕ್ಕೆ ಕರೆತರಲಾಗಿತ್ತು. ಗುರುವಾರ ಮುಂಜಾನೆ ಡಿಎಫ್‌ಒ ಸೌರಭ್‌ ಕುಮಾರ್‌ ನೇತೃತ್ವದಲ್ಲಿ ಕಾಡಾನೆ ಸೆರೆ ಕಾರ್ಯಚರಣೆ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಬುಧವಾರದಿಂದಲೇ ಹಂತಕ ಕಾಡಾನೆ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಸಿಬ್ಬಂದಿ ಗುರುವಾರ ಮುಂಜಾನೆ ತಾಲೂಕಿನ ಹಸಿಡೆ ಗ್ರಾಮದ ಸಮೀಪ ಸಂಚರಿಸುತ್ತಿರುವ ಬಗ್ಗೆ ಕಾರ್ಯಾಚರಣೆ ಪಡೆಗೆ ಮಾಹಿತಿ ನೀಡಿದ್ದರು. ಇದರಂತೆ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ ಹಸಿಡೆ ಹಾಗೂ ಹಲಸುಲಿಗೆ ಗ್ರಾಮದ ಕಾಫಿ ತೋಟದಲ್ಲಿ ಅಡಗಿದ್ದ ಸುಮಾರು 20 ವರ್ಷದ ಗಂಡಾನೆಗೆ ಸಾಕಾನೆ ಮೇಲೆ ತೆರಳಿದ್ದ ಅರವಳಿಕೆ ತಜ್ಞರಾದ ಮುಜೀಭ್ ಹಾಗೂ ತೌಫಿಕ್ ಯಶಸ್ವಿಯಾಗಿ ಅರವಳಿಕೆ ಚುಚ್ಚುಮದ್ದು ಹಾರಿಸಿದ್ದರು. 

ಇದರಿಂದ ಬೆದರಿದ ಕಾಡಾನೆ ಕೆಲ ದೂರ ಓಡಿ ಕುಸಿದು ಬಿದ್ದಿತ್ತು. ತಕ್ಷಣವೆ ಕಾಡಾನೆ ಸುತ್ತುವರಿದ ಅರಣ್ಯ ಇಲಾಖೆ ಸಿಬ್ಬಂದಿ ನೀರು ಹಾಕಿದರೆ ಕೆಲವು ಸಿಬ್ಬಂದಿ ಚೈನು ಹಾಗೂ ಹಗ್ಗದಿಂದ ಆನೆಯನ್ನು ಬಂಧಿಸಿದರು. ತದನಂತರ ಎಚ್ಚೆತ್ತ ಕಾಡಾನೆಯನ್ನು ಸಾಕಾನೆಗಳ ಸಹಾಯದಿಂದ ರಸ್ತೆಗೆ ಎಳೆದು ತಂದು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟಕ್ಕೆ ಸಾಗಿಸಿದರು. ಕಾಡಾನೆ ಸೆರೆ ಕಾರ್ಯಾಚರಣೆ ನೇತೃತ್ವವನ್ನು ಭೀಮಾ ಆನೆ ವಹಿಸಿತ್ತು. ಕಾರ್ಯಾಚರಣೆಯಲ್ಲಿ ಆಲೂರು, ಬೇಲೂರು, ಸಕಲೇಶಪುರ ಹಾಗೂ ಅರಕಲಗೂಡು ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ಕಾರ್ಯಾಚರಣೆ ಮುಂದುವರಿಕೆ:

ಈ ಭಾಗದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳಿದ್ದು, ಅವುಗಳ ಪೈಕಿ ಕೆಲವು ಜನರಿಗೆ ತೊಂದರೆ ನೀಡುತ್ತಿವೆ. ಹೆಸರಿಗೆ ಕಾಡಾನೆ ಎನಿಸಿಕೊಂಡರೂ ಸದಾ ಜನವಸತಿ ಪ್ರದೇಶಗಳಲ್ಲಿ ಇದ್ದುಕೊಂಡು ಜನರು ಹಾಗೂ ಅವರ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದು, ಗದ್ದೆ, ಕಾಫಿ ಹಾಗೂ ಅಡಿಕೆ ತೋಟಗಳಲ್ಲಿ ಹಾನಿ ಮಾಡುತ್ತಿವೆ. ಹಾಗಾಗಿ ಇಲ್ಲಿರುವ ಎಲ್ಲಾ ಕಾಡಾನೆಗಳನ್ನೂ ಹಿಡಿದು ಸ್ಥಳಾಂತರ ಮಾಡಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯವಾಗಿದೆ. ಹಾಗಾಗಿ ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೂಡ ಈ ಬಾರಿ ಒಂದೆರೆಡು ಕಾಡಾನೆಗಳನ್ನಷ್ಟೇ ಹಿಡಿದು ಸ್ಥಳಾಂತರಿಸುವ ಬದಲು ಜನರಿಗೆ ತೊಂದರೆ ಕೊಡುತ್ತಿರುವ ಯಾವ್ಯಾವ ಆನೆಗಳಿವೆಯೋ ಅವೆಲ್ಲವನ್ನೂ ಹಿಡಿದು ಸ್ಥಳಾಂತರಿಸುವ ಕೆಲಸಕ್ಕೆ ಮುಂದಾಗಿದೆ.

ಹೇಮಾವತಿ ಇಳಿದಂತೆ ಕೆಳಗಿಳಿಯುವ ಕಾಡಾನೆಗಳು:

ಹೇಮಾವತಿ ನದಿ ಪಾತ್ರವನ್ನೇ ಅವಲಂಬಿಸಿರುವ ಕಾಡಾನೆಗಳ ಹಿಂಡು ಹೇಮಾವತಿ ನೀರಿನ ಮಟ್ಟವನ್ನು ಅವಲಂಬಿಸಿ ತಮ್ಮ ಆವಾಸ ಸ್ಥಾನವನ್ನು ಆಗಾಗ ಬದಲಿಸುತ್ತಿರುತ್ತವೆ. ಲೆಕ್ಕಾಚಾರದಂತೆ ಈ ಆನೆಗಳು ಒಂದು ವರ್ಷದಲ್ಲಿ ಹೇಮಾವತಿ ಜಲಾಶಯದ ಹಿನ್ನೀರು ಪ್ರದೇಶದಿಂದ ಹೇಮಾವತಿ ನದಿ ಉಗಮ ಸ್ಥಾನದವರೆಗೂ ಸಂಚಾರ ಮಾಡುತ್ತವೆ. ಉದಾಹರಣೆಗೆ ಮಳೆಗಾಲ ಆರಂಭಕ್ಕೂ ಮುನ್ನ ನದಿ ಬತ್ತಿರುತ್ತದೆ. ಆಗ ಹೇಮಾವತಿ ಜಲಾಶಯದಲ್ಲಿ ಮಾತ್ರ ನೀರಿರುತ್ತದೆ. ಆಗ ಈ ಕಾಡಾನೆಗಳು ಜಲಾಶಯದ ಆಸುಪಾಸು ಅಂದರೆ ಆಲೂರು ತಾಲೂಕಿನ ಮಾಗಲು ಸಮೀಪ ಇರುತ್ತವೆ. 

ಅದೇ ಮಳೆಗಾಲ ಆರಂಭವಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಜಲಾಶಯದ ನೀರಿನ ಮಟ್ಟವೂ ಏರಿಕೆಯಾದಂತೆ ಈ ಕಾಡಾನೆಗಳ ಹಿಂದು ಆಲೂರು ತಾಲೂಕನ್ನು ತೊರೆದು ಸಕಲೇಶಪುರ ತಾಲೂಕಿಗೂ ಇನ್ನೂ ನೀರಿನ ಮಟ್ಟ ಏರಿಕೆ ಆದಲ್ಲಿ ಬೇಲೂರು ತಾಲೂಕಿಗೂ ಕಾಲಿಟ್ಟು ಹೇಮಾವತಿ ಉಗಮ ಸ್ಥಾನ ಇರುವ ಮೂಡಿಗೆರೆ ತಾಲೂಕಿನವರೆಗೂ ಸಂಚರಿಸುತ್ತವೆ. ಹಾಗೆಯೇ ಮಳೆಗಾಲ ಮುಗಿದು ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಾ ಹೋದಂತೆ ಮೂಡಿಗೆರೆವರೆಗೆ ಹೋದ ಆನೆಗಳು ಪುನಃ ಬೇಲೂರು, ಸಕಲೇಶಪುರ, ಆಲೂರು ತಾಲೂಕಿನ ಮೂಲಕ ಹೇಮಾವತಿ ಹಿನ್ನೀರಿಗೆ ವಾಪಸ್ಸಾಗುತ್ತವೆ.

ಇದೀಗ ಹೇಮಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಾ ಬಂದಿದೆ. ಹಾಗಾಗಿ ಈ ಮುಂಚೆ ಬೇಲೂರು ತಾಲೂಕಿನ ಆರೇಹಳ್ಳಿ ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಗಳು ಇದೀಗ ಸಕಲೇಶಪುರ ತಾಲೂಕಿನ ಹಲಸುಲಿಗೆ ಬಳಿ ಠಿಕಾಣಿ ಹೂಡಿವೆ. ಇನ್ನಷ್ಟು ದಿನಗಳು ಕಳೆದು ಮಳೆ ಬಾರದೆ ನದಿಯಲ್ಲಿ ನೀರಿನ ಮಟ್ಟ ಇನ್ನಷ್ಟು ಇಳಿಕೆಯಾದಂತೆ ಈ ಆನೆಗಳೆಲ್ಲಾ ಸಕಲೇಶಪುರ ತಾಲೂಕಿನಿಂದ ಹೊರಟು ಆಲೂರು ತಾಲೂಕಿನ ಮಾಗಲು, ಕೆರೋಡಿಗಳಲ್ಲಿರುವ ತಮ್ಮ ಆವಾಸ ಸ್ಥಾನಗಳಿಗೆ ತಲುಪುತ್ತವೆ.