ಸಾರಾಂಶ
ಇತಿಹಾಸದಲ್ಲಿ ತನ್ನದೇ ಆದ ಅನನ್ಯವಾದ ಸ್ಥಾನವನ್ನು ಹೊಂದಿದ್ದ ಅಕ್ಕಾದೇವಿಯ ಎರಡು ಬಂಗಾರದ ನಾಣ್ಯಗಳು ಕೆಲವು ದಿನಗಳ ಹಿಂದೆ ತೆಲಂಗಾಣ ರಾಜ್ಯದಲ್ಲಿ ಪತ್ತೆಯಾಗಿವೆ.
ವಿಜಯ್ ಮಹಾಂತೇಶ. ಪಾಪನಾಳ, ಪ್ರಾಚೀನ ಇತಿಹಾಸ, ಶಾಸನ ಕ್ಷೇತ್ರದ ಸ್ವತಂತ್ರ ಸಂಶೋಧಕರು.
ಬಾದಾಮಿ ಚಾಲುಕ್ಯರ ಸೋದರ ಸಂಬಂಧಿಗಳಾದ ಪಾಶ್ಚಿಮಾತ್ಯ ಚಾಲುಕ್ಯ ಅಥವಾ ಕಲ್ಯಾಣಿ ಚಾಲುಕ್ಯರು ಇಂದಿನ ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ರಾಜ್ಯಭಾರ ಮಾಡಿದರು. ಸಾಮಾನ್ಯ ಶಕವರ್ಷ 973 ರಿಂದ 1184ರ ವರೆಗೆ ಸ್ವತಂತ್ರ ರಾಜ್ಯವಾಗಿ ಆಡಳಿತ ನಡೆಸಿದ ಕನ್ನಡದ ಈ ಆಳರಸರು ಅಂದಿನ ದಖನ್ ಪ್ರಸ್ಥಭೂಮಿಯ ಮತ್ತು ಮಧ್ಯಭಾರತದ ಬಹುಭಾಗದ ಮೇಲೆ ತಮ್ಮ ಶಾಸನ ನಡೆಸಿದರು. ಬಸವಕಲ್ಯಾಣವು ಇವರ ಪ್ರಧಾನ ರಾಜಧಾನಿಯಾದರೂ ಆಡಳಿತದ ಅನುಕೂಲಕ್ಕಾಗಿ ಇನ್ನೂ ಕೆಲವು ಉಪರಾಜಧಾನಿಗಳನ್ನು ಸ್ಥಾಪಿಸಿದ್ದರು. ಕಲ್ಯಾಣದ ಚಾಲುಕ್ಯರ ಇಂಥ ಒಂದು ಉಪರಾಜಧಾನಿಯ ಹೆಸರು - ಅರಸೀಬೀದಿ. ಇದು ಇಂದಿನ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿದೆ. ವಿಶ್ವವಿಖ್ಯಾತ ಐಹೊಳೆಯಿಂದ ಬರುವಾಗ ಹತ್ತಿರದ ಗುಡೂರ ಗ್ರಾಮದಿಂದ ೪ ರಿಂದ ೫ ಕಿಲೋಮೀಟರ್ ಗಳಷ್ಟು ದೂರದಲ್ಲಿದೆ. ಹಳ್ಳಿ ಜನರ ಆಡುಮಾತಿನಲ್ಲಿ, ಗ್ರಾಮ್ಯ ಭಾಷೆಯಲ್ಲಿ ''ಅರಸಿಬುಡ್ಡಿ'' ಎಂದೇ ಕರೆಯಲ್ಪಡುವ ಈ ಗ್ರಾಮದ ನಿಜವಾದ ಹೆಸರು ‘ಅರಸೀಬೀದಿ’. ಇದಕ್ಕೆ ಎರಡು ಅರ್ಥಗಳಿವೆ - ಮೊದಲನೆಯದು ‘ರಾಣಿಯ ದಾರಿ, ಹಾದಿ’ ಎಂದು; ಎರಡನೆಯದು ‘ರಾಣಿಯ ಬಿಡಾರ, ಆವಾಸಸ್ಥಾನ’ ಎಂದು.
ಅರಸೀಬೀದಿಯ ಮೂಲ ಹೆಸರು ವಿಕ್ರಮಪುರ: ಕಲ್ಯಾಣಿ ಚಾಲುಕ್ಯರ ಶಾಸನಗಳಲ್ಲಿ ಈ ಊರಿಗೆ ಇನ್ನೂ ಒಂದು ಹೆಸರಿದೆ - ಅದು ‘ವಿಕ್ರಮಪುರ’ ಎಂದು. ಸಂಭವತಃ ಇದು ಐದನೆಯ ವಿಕ್ರಮಾದಿತ್ಯನಿಂದ ನಿರ್ಮಾಣವಾಗಿರಬಹುದಾದ ಕಾರಣದಿಂದ ಈ ಊರಿಗೆ ವಿಕ್ರಮಪುರ ಎಂಬ ಹೆಸರು ಇದ್ದಿತ್ತು ಎಂದು ಸತಾರ್ಕಿಕವಾಗಿ ಹೇಳಬಹುದು. ಆ ಕಾಲದಲ್ಲಿ ಇದು ಬಸವಕಲ್ಯಾಣದೊಂದಿಗೆ ಎರಡನೆಯ ರಾಜಧಾನಿಯಾಗಿತ್ತು. ಇಂದು ಸಂಪೂರ್ಣವಾಗಿ ಪಾಳುಬಿದ್ದಂತಾಗಿದೆ. ಅರಸೀಬೀದಿಯು ಅಂದಿನ ಕಾಲದಲ್ಲಿ ಒಂದು ಜೈನ ಕಲಿಕಾ ಕೇಂದ್ರವಾಗಿತ್ತು. ಜೊತೆಗೆ ‘ರಾಜಧಾನಿ ವಿಕ್ರಮಪುರ’ ಎಂಬ ಶಾಸನೋಕ್ತ ಉಲ್ಲೇಖವೂ ಇದೆ. ಇಂಥ ಪ್ರಮುಖವಾದ ಈ ಸ್ಥಳವು ‘ಕಿಸುಕಾಡು-70 ’ ಎಂಬ ಆಡಳಿತ ವಿಭಾಗದ ಕೇಂದ್ರ-ರಾಜಧಾನಿಯಾಗಿತ್ತು. ಈ ಅರಸೀಬೀದಿಗೆ ಹತ್ತಿರದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಪಟ್ಟದಕಲ್ಲಿಗೆ ಪ್ರಾಚೀನ ಕಾಲದಲ್ಲಿ ‘ಕಿಸುವೊಳಲ್’ ಎಂಬ ಹೆಸರಿತ್ತು ಎನ್ನುವುದನ್ನು ಸ್ಮರಿಸಿಕೊಂಡರೆ ಈ ವಿಭಾಗದ ಹೆಸರಿನ ಅರ್ಥ ಸ್ಪಷ್ಟವಾಗುತ್ತದೆ. ಹಳಗನ್ನಡದಲ್ಲಿ ‘ಕಿಸು’ ಎಂಬ ಶಬ್ದಕ್ಕೆ ಕೆಂಪು ಬಣ್ಣ ಎಂದು ಅರ್ಥವಿದೆ. ಆದ್ದರಿಂದ, ‘ಕಿಸುಗಾಡು’ ಅಥವಾ ‘ಕಿಸುಕಾಡು’ ಎಂದರೆ ಕೆಂಪು ಮಣ್ಣಿನ ಭೂಮಿ ಎಂದು ಅರ್ಥವಾಗುತ್ತದೆ.
ಗುಣದ ಬೆಡಂಗಿ - ಅಕ್ಕಾದೇವಿ: ಇಂಥ ಕಿಸುಕಾಡು-70 ರ ಕೇಂದ್ರವಾಗಿದ್ದ ಅರಸೀಬೀದಿಗೆ ಅರಸಿ ಎಂದರೆ ಆಡಳಿತಗಾರ್ತಿಯಾಗಿದ್ದವಳೇ ಅಕ್ಕಾದೇವಿ. ಈಕೆಯು ಕಲ್ಯಾಣಿ ಚಾಲುಕ್ಯರ ಮೊದಲ ಚಕ್ರವರ್ತಿ ಇಮ್ಮಡಿ ತೈಲಪನ ಎರಡನೇ ಮಗನಾದ ದಶವರ್ಮ ಮತ್ತು ಭಾಗ್ಯವತಿ (ಅಥವಾ ಬಾಗಲಾದೇವಿ) ಯರ ಮಗಳು. ಈಕೆಗೆ ಐದನೆಯ ವಿಕ್ರಮಾದಿತ್ಯ (ಸಾ.ಶ. 1008 1015), ಅಯ್ಯನರೆಂಬ ಇಬ್ಬರು ಅಣ್ಣಂದಿರೂ ಹಾಗೂ ಇಮ್ಮಡಿ ಜಯಸಿಂಹ (ಸಾ.ಶ. ೧೦೧೫-೧೦೪೨) ಎಂಬ ಒಬ್ಬ ತಮ್ಮನೂ ಇದ್ದನು. ಬಸವಕಲ್ಯಾಣದಿಂದ ಈಕೆಯ ತಮ್ಮನಾದ ಇಮ್ಮಡಿ ಜಯಸಿಂಹನು ಪಾಶ್ಚಿಮಾತ್ಯ ಚಾಲುಕ್ಯರ ಸಾಮ್ರಾಟನಾಗಿ ಆಳುತ್ತಿರುವಾಗ ಈ ಅಕ್ಕಾದೇವಿಯನ್ನು ಕಿಸುಕಾಡು-೭೦ ಆಡಳಿತ ವಿಭಾಗಕ್ಕೆ ಆಡಳಿತಗಾರ್ತಿಯಾಗಿ ನೇಮಿಸಿದ್ದನು. ಸಾಮಾನ್ಯ ಶಕವರ್ಷ ೧೦೧೦ ರಿಂದ ೧೦೫೪ ರವರೆಗೆ ಅಕ್ಕಾದೇವಿಯು ಈ ಪ್ರದೇಶವನ್ನು ಅರಸೀಬೀದಿಯ ಕೇಂದ್ರದಿಂದ ಆಳಿದ್ದಳು.
ಕಲ್ಯಾಣದ ಚಾಲುಕ್ಯರ ಶಾಸನಗಳಲ್ಲಿ ಈ ಅಕ್ಕಾದೇವಿಯನ್ನು ‘ಗುಣದ ಬೆಡಂಗಿ’ ಎಂಬ ಬಿರುದಿನಿಂದ ವರ್ಣಿಸಲಾಗಿದೆ. ಅರಸೀಬೀದಿಯ ಗುಡ್ಡದ ಮೇಲೆ ಜೈನ ಬಸದಿಯ ಪಕ್ಕದ ಬಲಭಾಗದ ಕಲ್ಲಿನ ಮೇಲೆ ಕೆತ್ತಲಾಗಿರುವ ಒಂದನೇ ಸೋಮೇಶ್ವರನ ಶಾಸನವು ಸಾಮಾನ್ಯ ಶಕವರ್ಷ ೧೦೫೩ ರ ಕಾಲದ್ದು. ಈ ಶಾಸನದಲ್ಲಿ ಅಕ್ಕಾದೇವಿಯನ್ನು ಹೀಗೆ ವರ್ಣಿಸಲಾಗಿದೆ: ‘ಅರಿ ನೃಪ ಮಕುಟ ಘಟ್ಟಿತ ಚರಣಾರವಿಂದೆಯರ್, ಗಂಗಾಸ್ನಾನ ಪವಿತ್ರೆಯರ್, ದೀನಾನಾಥ ಚಿಂತಾಮಣಿ ವಿವೇಕಚೂಡಾಮಣಿಗಳ್, ಏಕವಾಕ್ಯೆಯರ್, ಗುಣದ ಬೆಡಂಗಿಯರಪ್ಪ ಶ್ರೀ ಮದ್ ಅಕ್ಕಾದೇವಿಯರು’ ಇಲ್ಲಿ ವರ್ಣಿಸಿರುವಂತೆ ಅಕ್ಕಾದೇವಿಯ ಪಾದಕಮಲಗಳು ಶತ್ರು ರಾಜರ ಕಿರೀಟಗಳಿಂದ ಅಲಂಕೃತವಾಗಿರುತ್ತಿದ್ದು, ಆಕೆಯು ಗಂಗಾಸ್ನಾನ ಮಾಡಿದ ನಿರ್ಮಲಳು, ಮತ್ತು ದೀನರಿಗೆ, ಅನಾಥರಿಗೆ ಬಯಸಿದ್ದನ್ನು ನೀಡುವ ತಿಳಿವಿನ ರತ್ನದಾಭರಣ ಸ್ವರೂಪಿಯು, ಯಾವಾಗಲೂ ಒಂದೇ ಮಾತಿನವಳು, ಮಾತಿನಲ್ಲಿ ಏಕತೆಯನ್ನೂ, ಸ್ಥಿರತೆಯನ್ನೂ ಉಳ್ಳವಳು, ಇಷ್ಟೆಲ್ಲ ಸದ್ಗುಣಗಳ ಬೆಡಗಿ, ಸುಂದರಿಯರೆ ಈ ಅಕ್ಕಾದೇವಿಯರು! ‘ಗುಣದ ಬೆಡಂಗಿ’ ಎಂದರೆ ‘ಸದ್ಗುಣಗಳ ಸುಂದರಿ, ಚೆಲುವೆ’ ಎಂದು ಅರ್ಥವಾಗುತ್ತದೆ. ಈಕೆಯು ಕೇವಲ ಸುಜನೆಯೂ, ಚೆಲುವೆಯೂ ಮಾತ್ರವಾಗಿರದೆ ಯುದ್ಧ ಕಲಾ ನಿಪುಣೆಯೂ ಆಗಿದ್ದಳೆಂದೂ, ಈಕೆಯನ್ನು ರಣರಂಗದಲ್ಲಿ ಸಾಕ್ಷಾತ್ ‘ಭೈರವಿ’ ಎಂದೂ ಕರೆಯಲಾಗಿದೆ.
ಸಾಮಾನ್ಯ ಶಕವರ್ಷ 1047 ರಲ್ಲಿ ಬಂಡಾಯವೊಂದನ್ನು ಹತ್ತಿಕ್ಕಲು ‘ಗೋಕಾಗೆ’ (ಇಂದಿನ ಗೋಕಾಕ್) ಕೋಟೆಗೆ ಮುತ್ತಿಗೆ ಹಾಕಿದ್ದಳೆಂದು ಶಾಸನಗಳಲ್ಲಿ ದಾಖಲಾಗಿದೆ. ಅದು ಅಕ್ಕಾದೇವಿಯ ಶೌರ್ಯಕ್ಕೆ ಸಾಕ್ಷಿಯಂತಿದೆ. ಹೀಗೆ ಅನೇಕ ವಿಧವಾದ ಗುಣ ವರ್ಣನೆಗಳಿಂದ ಕನ್ನಡ ನಾಡಿನ ಇತಿಹಾಸದಲ್ಲಿ ಮಾತ್ರವಲ್ಲದೆ ಭಾರತದ ಪ್ರಾಚೀನ ಕಾಲದ ಪ್ರಭಾವಶಾಲಿ ಮಹಿಳಾಮಣಿಗಳ ಇತಿಹಾಸದಲ್ಲಿ ತನ್ನದೇ ಆದ ಅನನ್ಯವಾದ ಸ್ಥಾನವನ್ನು ಹೊಂದಿದ್ದ ಇಂಥ ಅಕ್ಕಾದೇವಿಯ ಎರಡು ಬಂಗಾರದ ನಾಣ್ಯಗಳು ಕೆಲವು ದಿನಗಳ ಹಿಂದೆ ತೆಲಂಗಾಣ ರಾಜ್ಯದಲ್ಲಿ ಪತ್ತೆಯಾಗಿವೆ. ತೆಲಂಗಾಣದ ಮಾದುಗುಳ ಎಂಬ ಗ್ರಾಮದಲ್ಲಿ ಹಳ್ಳಿಗರಿಗೆ ದೊರೆತ ಈ ನಾಣ್ಯಗಳು ಡಾ। ರಾಜಾರೆಡ್ಡಿಯವರ ಮೂಲಕ ಭಾರತೀಯ ಪುರಾತತ್ವ ಇಲಾಖೆಯ ಶಾಸನಶಾಸ್ತ್ರ ವಿಭಾಗದ ನಿರ್ದೇಶಕರಾದ ಡಾ। ಮುನಿರತ್ನಂ ರೆಡ್ಡಿಯವರಿಗೆ ದೊರಕಿದ್ದು ಆಸಕ್ತಿಕರ ಸಂಗತಿಯಾಗಿದೆ. ಈಗ ದೊರೆತಿರುವ ಅಕ್ಕಾದೇವಿಯ ಎರಡೂ ಬಂಗಾರದ ನಾಣ್ಯಗಳ ಮೇಲೆ ಕನ್ನಡ ಭಾಷೆ ಮತ್ತು ಲಿಪಿಯಲ್ಲಿ ‘ಶ್ರೀ ಗುಣದ ಬೆಡಂಗಿ’ ಎಂದು ಮುದ್ರಿಸಲಾಗಿದೆ. ಈ ಮೊದಲೇ ವಿವರಿಸಿದಂತೆ ಇದುವರೆಗೂ ಅಧ್ಯಯನ ಮಾಡಿದ ಶಾಸನಗಳಲ್ಲಿ ಅಕ್ಕಾದೇವಿಯನ್ನು ಇದೇ ವಿಶೇಷಣದಿಂದ ವರ್ಣಿಸಿರುವುದನ್ನು ಗಮನದಲ್ಲಿಟ್ಟುಕೊಂಡರೆ ಇವು ಕಲ್ಯಾಣ ಚಾಲುಕ್ಯರ ರಾಜಕುಮಾರಿ ಅಕ್ಕಾದೇವಿಯ ನಾಣ್ಯಗಳು ಎನ್ನುವುದು ಇನ್ನಷ್ಟು ಸುಸ್ಪಷ್ಟವಾಗುತ್ತದೆ.
ಕರ್ನಾಟಕದ ಪದ್ಮಟಂಕಗಳು: ಈಗ ದೊರೆತಿರುವ ಅಕ್ಕಾದೇವಿಯ ಬಂಗಾರದ ನಾಣ್ಯಗಳು ‘ಪದ್ಮಟಂಕ’ ಗಳೆಂದು ನಾಣ್ಯಶಾಸ್ತ್ರದಲ್ಲಿ ಕರೆಯಲ್ಪಡುತ್ತವೆ. ಮೊದಲು ಇಂಥ ನಾಣ್ಯಗಳನ್ನು ‘ಅಚ್ಚೊತ್ತಿದ ಬಂಗಾರದ ನಾಣ್ಯ’ಗಳು (Punch Marked Gold Coins) ಎಂದು ಕರೆಯಲಾಗುತ್ತಿತ್ತು. ಆದರೆ ಇವುಗಳ ರಚನಾ ವಿನ್ಯಾಸದ ಕ್ರಮವನ್ನು ಗುರುತಿಸಿ ಇಂಥ ನಾಣ್ಯಗಳನ್ನು ‘ಪದ್ಮಟಂಕ’ ಗಳೆಂದು ಶಾಸ್ತ್ರೀಯವಾಗಿ ಕರೆಯಲಾಗುತ್ತದೆ. ಕರ್ನಾಟಕದ ಈ ಪದ್ಮಟಂಕಗಳು ಪ್ರಾಚೀನ ಕಾಲದಲ್ಲಿ ಎಷ್ಟು ಆಕರ್ಷಕವೂ, ಪ್ರಸಿದ್ಧವೂ ಆಗಿದ್ದುವೆಂದರೆ ಕಾಶ್ಮೀರದ ರಾಜ ಹರ್ಷನು ಇದೇ ಮಾದರಿಯನ್ನು ಅನುಸರಿಸಿ ತನ್ನ ಬಂಗಾರದ ನಾಣ್ಯಗಳನ್ನು ಮುದ್ರಿಸುತ್ತಿದ್ದನು ಎಂದು ಕಲ್ಹಣನು ತನ್ನ ‘ರಾಜತರಂಗಿಣಿ’ಯಲ್ಲಿ ದಾಖಲಿಸುತ್ತಾನೆ. ರಾಜತರಂಗಿಣಿಯಲ್ಲಿನ ಈ ಉಲ್ಲೇಖವನ್ನು ಗಮನಿಸಿ:
‘ದಾಕ್ಷಿಣಾತ್ಯಾಭವದ್ ಭಂಗಿಃ ಪ್ರಿಯಾ ತಸ್ಯ ವಿಲಾಸಿನಃ
ಕರ್ನಾಟಾನುಗುನಶ್ ಟಂಕಾಸ್ ತತಸ್ ತೇನ ಪ್ರವರ್ತಿತಃ’
[ಆಕರ: ಕಲ್ಹಣ, ರಾಜತರಂಗಿಣಿ, ಪುಸ್ತಕ -೭, ಶ್ಲೋಕ ಸಂಖ್ಯೆ: ೯೨೬]
ಇದು ನಮ್ಮ ಕನ್ನಡ ನಾಡಿನಲ್ಲಿ ಅಂದು ಮುದ್ರಿತವಾಗುತ್ತಿದ್ದ ಬಂಗಾರದ ನಾಣ್ಯಗಳ ಮಹತ್ವವನ್ನು ವಿವರಿಸುವ ಉಲ್ಲೇಖವಾಗಿದೆ. ಬಾದಾಮಿಯಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಸೂಡಿ ಮತ್ತು 76 ಕಿ.ಮೀ ದೂರದಲ್ಲಿರುವ ಲೋಕಿಗುಂಡಿ (ಇಂದಿನ ಲಕ್ಕುಂಡಿ)ಗಳು ಮಧ್ಯಕಾಲೀನ ಕರ್ನಾಟಕದಲ್ಲಿ ನಾಣ್ಯಗಳನ್ನು ತಯಾರಿಸುವ ಟಂಕಸಾಲೆಗಳಾಗಿದ್ದವು. ಇತ್ತೀಚೆಗೆ ಈ ಲಕ್ಕುಂಡಿಯಲ್ಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ, ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆಗಳು ಜಂಟಿಯಾಗಿ ಹೊಸದಾಗಿ ಉತ್ಖನನ ಕಾರ್ಯ ಕೈಗೊಂಡಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆ. ಆದರೆ ರಾಜ್ಯದಲ್ಲಿ ಇನ್ನೂ ಇಂಥ ಎಷ್ಟೋ ಐತಿಹಾಸಿಕ ಸ್ಥಳಗಳು ಒಂದು ಕಾಯಕಲ್ಪದ ನಿರೀಕ್ಷೆಯಲ್ಲಿವೆ. ಈ ನಿಟ್ಟಿನಲ್ಲಿ ಈಗ ದೊರೆತಿರುವ ಅಕ್ಕಾದೇವಿಯ ಈ ಎರಡು ಬಂಗಾರದ ನಾಣ್ಯಗಳಾದ ಪದ್ಮಟಂಕಗಳು ಆಕೆಯ ಪ್ರಥಮ ನಾಣ್ಯಗಳಾಗಿದ್ದು, ಇವುಗಳ ಶೋಧದಿಂದ ಭಾರತೀಯ ನಾಣ್ಯಶಾಸ್ತ್ರಕ್ಕೆ ಅಮೂಲ್ಯವಾದ ಆಸಕ್ತಿಕರ ಅಧ್ಯಾಯವೊಂದು ಸೇರಿದಂತಾಗಿದ್ದು, ಅದು ‘ಅರಸಿಬುಡ್ಡಿ’ ಅರಸೀಬೀದಿಯ ಅರಸಿ ಅಕ್ಕಾದೇವಿಯ ಕಾಣ್ಕೆಯಾಗಿದೆ.