ಸಾರಾಂಶ
ಗ್ರಾಮದ ಶ್ರೀ ಸಂತೆಕಾಳೇಶ್ವರಿ ಶ್ರೀ ಚಿಕ್ಕಮ್ಮ ದೇವಿಯವರ ದೇವಾಲಯದಲ್ಲಿ ಶನಿವಾರ ನಡೆದ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು
ಬಾಗೂರು : ಹೋಬಳಿ ಕೇಂದ್ರದ ಶಕ್ತಿ ದೇವತೆ ಶ್ರೀ ಸಂತೆಕಾಳೇಶ್ವರಿ ಹಾಗೂ ಶ್ರೀ ಚಿಕ್ಕಮ್ಮದೇವರ ನೂತನ ರಥವನ್ನು 1.50 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ರಥ ನಿರ್ಮಾಣಕ್ಕೆ ಹೆಚ್ಚಿನ ಹಣಕಾಸಿನ ನೆರವು ನೀಡುವುದಾಗಿ ಶಾಸಕ ಸಿ ಎನ್ ಬಾಲಕೃಷ್ಣ ಭರವಸೆ ನೀಡಿದರು.
ಗ್ರಾಮದ ಶ್ರೀ ಸಂತೆಕಾಳೇಶ್ವರಿ ಶ್ರೀ ಚಿಕ್ಕಮ್ಮ ದೇವಿಯವರ ದೇವಾಲಯದಲ್ಲಿ ಶನಿವಾರ ನಡೆದ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಶ್ರೀ ಸಂತೆಕಾಳೇಶ್ವರಿ ಶ್ರೀ ಚಿಕ್ಕಮ್ಮ ದೇವಿ ನೂತನ ದೇವಾಲಯ ನಿರ್ಮಾಣಕ್ಕೆ ಈಗಾಗಲೇ ಹೇಮಾವತಿ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಅನುದಾನ ಸೇರಿದಂತೆ ಸುಮಾರು 90 ಲಕ್ಷ ಹಣವನ್ನು ಕೊಡಲಾಗಿದ್ದು, ಮುಂಬರುವ ದಿನಗಳಲ್ಲಿ ನೂತನ ರಥ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರ ಒತ್ತಾಯದಂತೆ ದೇವಾಲಯದ ಮುಂಭಾಗ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸದ್ಯದಲ್ಲೇ ಅನುದಾನ ಒದಗಿಸುವುದಾಗಿ ತಿಳಿಸಿದರು. ಬಾಗೂರು ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಬಾಗೂರು ಶಿವಣ್ಣ ಮಾತನಾಡಿ, ಈಗಾಗಲೇ ದೇವಾಲಯ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಬಾಲಕೃಷ್ಣರವರು ಹೆಚ್ಚಿನ ಸಹಕಾರ ನೀಡಿದ್ದಾರೆ. ನೂತನ ರಥವನ್ನು 1 ಕೋಟಿ 50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಪಕ್ಷಾತೀತವಾಗಿ ಎಲ್ಲಾ ಮುಖಂಡರು ಸಹಕಾರ ನೀಡಬೇಕು. ಜೊತೆಗೆ ದಾನಿಗಳು ಮತ್ತು ಭಕ್ತರು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು. 48ನೇ ದಿನದ ಪೂಜಾ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಹಿನ್ನೆಲೆಯಲ್ಲಿ ಎಲ್ಲರಿಗೂ ಅನ್ನದಾಸೋಹ ಏರ್ಪಡಿಸಲಾಗಿದೆ ಎಂದರು. ದೇವಾಲಯದ ಮುಂಭಾಗ ಬಲಿಕಲ್ಲು ಪ್ರತಿಷ್ಠಾಪನೆಗೆ ಶಾಸಕ ಸಿಎನ್ ಬಾಲಕೃಷ್ಣರವರು ಪೂಜೆ ನೆರವೇರಿಸಿ ಪ್ರತಿಷ್ಠಾಪನೆಗೆ ಚಾಲನೆ ನೀಡಿದರು.
ದೇವಾಲಯದಲ್ಲಿ 48ನೇ ದಿನದ ಮಂಡಲ ಪೂಜಾ ಮಹೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಅಮ್ಮನವರಿಗೆ ಅಭಿಷೇಕ, ವಿಶೇಷ ಪೂಜೆ, ನೈವೇದ್ಯ, ಹೂವಿನ ಅಲಂಕಾರ ಸೇರಿದಂತೆ ದೇವಾಲಯದ ಆವರಣದಲ್ಲಿ ಹೋಮ ಅವನಗಳು ನೆರವೇರಿದವು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಪೂಜಾ ಕಾರ್ಯಕ್ರಮದಲ್ಲಿ ಟಿಎಪಿಎಂಎಸ್ ನಿರ್ದೇಶಕ ಮನು, ಗುಡಿ ಗೌಡ್ರು ಕರಿಗಲ್ಲು ಶೇಖರಣ್ಣ, ಮಾಜಿಗುಡಿ ಗೌಡ್ರು ತಿಮ್ಮೇಗೌಡ (ಅಣ್ಣಯ್ಯ), ಪಾಪಣ್ಣ( ಬಳಗಟ್ಟೆ), ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಾಂತರಾಜ್, ಬಿಪಿ ಲಕ್ಷ್ಮಣ್, ತಿಮ್ಮೇಗೌಡ್ರು, ಕೃಷಿ ಪತ್ತಿನ ನಿರ್ದೇಶಕ ಬಿಎನ್ ಹರೀಶ್, ಬಿಜೆ ರಂಗಸ್ವಾಮಿ, ಗ್ರಾಪಂ ಸದಸ್ಯ ಬಿಟಿ ರಂಗಸ್ವಾಮಿ, ಮುಖಂಡರಾದ ಮಿಲ್ಟ್ರಿ ಮಧು, ಸೋಮಶೇಖರ್, ಕಾಳೇಶ್, ಚೇತನ್, ಬಿಎಸ್ ಮೋಹನ್ ಕುಮಾರ್, ದೇವರಾಜ್ ( ಅರಸು), ಅಂಚೆ ಇಲಾಖೆ ಸಂತೋಷ್ ಕುಮಾರ್, ಗ್ರಾಪಂ ಕಾರ್ಯದರ್ಶಿ ಶ್ರೀನಿವಾಸ್, ಯುವ ಮುಖಂಡ ಕರಿಗಲ್ಲು ರಘು, ಕೆನರಾ ಬ್ಯಾಂಕ್ ಬಿಟಿ ಮಂಜೇಗೌಡ, ಕಾರು ರಂಗಸ್ವಾಮಿ, ಸೊಪ್ಪಿನ ಬೀದಿ ಚೇತನ್ ಸೇರಿದಂತೆ ಬಾಗೂರು ಗ್ರಾಮ ಸೇರಿದಂತೆ ಸುತ್ತಮುತ್ತಲ ಎಲ್ಲಾ ಗ್ರಾಮದ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು.