ಗೋದಾಮಲ್ಲಿದ್ದ ಅಕ್ಕಿ ವ್ಯರ್ಥ: ವರದಿ ಕೇಳಿದ ಮುಖ್ಯ ಕಾರ್ಯದರ್ಶಿಬಡವರಿಗೆ ನೀಡುವ ಅಕ್ಕಿಯನ್ನು ಗೋಡೌನ್ನಲ್ಲಿ ಕಳೆದ 2 ವರ್ಷಗಳಿಂದ ಸಂಗ್ರಹಿಸಿ ಇಲಿ, ಹೆಗ್ಗಣ, ಹುಳುಗಳ ಪಾಲಾಗಿಸಿರುವ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು. ಇದರ ಬೆನ್ನಲ್ಲೆ ಆಹಾರ ಮತ್ತು ನಾಗರಿಕ ಇಲಾಖೆ ಮುಖ್ಯ ಕಾರ್ಯದರ್ಶಿಗಳು ವರದಿ ಕೇಳಿದ್ದು, ಆಹಾರ ನಿಗಮದ ಮೇಲಾಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಿದ್ದಾರೆ.ನೆಲಮಂಗಲದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋಡೌನ್ನಲ್ಲಿ ಅಕ್ಕಿ ವ್ಯರ್ಥವಾಗುತ್ತಿರುವ ಬಗ್ಗೆ ನ.21 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ‘ಗೋದಾಮಲ್ಲಿ ಅಕ್ಕಿ ಅನಾಥ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಈ ಬಗ್ಗೆ ಸಚಿವರ ಗಮನಕ್ಕೆ ಬಂದಿದ್ದು, ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ವರದಿ ಕೇಳಿದ ಬೆನ್ನಲ್ಲೆ ಆಹಾರ ನಿಗಮ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಗೋಡೌನ್ ಸ್ಥಿತಿ ಹಾಗೂ ಸಂಗ್ರಹಣೆ ಕುರಿತು ಕಳವಳ ವ್ಯಕ್ತಪಡಿಸಿ ಅಮಾನತು ಮಾಡುವ ಎಚ್ಚರಿಕೆ ನೀಡಿದ್ದಾರೆ.