ಕಾಫಿ ತೋಟದಲ್ಲಿ ಕಾಡಾನೆ ದಾಳಿ: ಮಹಿಳೆ ಸಾವು
Nov 09 2023, 01:00 AM ISTಕಾಫಿ ತೋಟದ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರ ಮೇಲೆ ಬುಧವಾರ ಕಾಡಾನೆ ದಾಳಿ ನಡೆಸಿದ್ದು, ಗಾಳಿಗುಂಡಿ ಗ್ರಾಮದ ಮೋಹನ್ ಅವರ ಪುತ್ರಿ ಮೀನಾ (29) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಲ್ದೂರು ಸಮೀಪದ ಗಾಳಿಗುಂಡಿ ಗ್ರಾಮದಿಂದ ಹೆಡದಾಳು ಗುಡ್ಡದಕೆರೆ ಬಳಿಯ ಕಾಫಿ ತೋಟದ ಕೆಲಸಕ್ಕೆ ಬುಧವಾರ ಬೆಳಗ್ಗೆಯೇ ಆರು ಮಂದಿ ಹೋಗಿದ್ದರು. ಮನೆಯಿಂದ ತೆಗೆದುಕೊಂಡು ಹೋಗಿದ್ದ ಉಪಾಹಾರವನ್ನು ಕೆಲಸ ಆರಂಭಿಸುವ ಮೊದಲೆ ತಿನ್ನಲು ಒಟ್ಟಿಗೆ ನಾಲ್ವರು ಯುವತಿಯರು ಕುಳಿತಿದ್ದರು. ಈ ಸಂದರ್ಭದಲ್ಲಿ ಬಂದ ಆನೆಯನ್ನು ನೋಡಿದ ಎಲ್ಲರೂ ಓಡಿದರು. ಆದರೆ, ಮೀನಾ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೀನಾ ಅವರ ತಲೆಯ ಮೇಲೆ ಆನೆ ಕಾಲಿಟ್ಟಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹ ನೋಡಿದ ಮತ್ತೊಬ್ಬ ಮಹಿಳೆ ಚಂದ್ರಿ (52) ಆಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದು, ಅವರನ್ನು ಆಲ್ದೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.