ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನರು ಹೈರಾಣ!ಬ್ಯಾಕೋಡು ವ್ಯಾಪ್ತಿಯಲ್ಲಿ ಮಳೆಗಾಲದ ಪ್ರಾರಂಭದಲ್ಲೇ ಕರೆಂಟ್ ಕೈಕೊಟ್ಟಿದೆ. ಒಂದು ಗಂಟೆ ಸಮಯ ಸುರಿದ ಮಳೆಗೆ ದಿನಗಟ್ಟಲೇ ವಿದ್ಯುತ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಈಗಲೇ ಹೀಗಾದಾರೆ ಮಧ್ಯ ಮಳೆಗಾಲದ ಪರಿಸ್ಥಿತಿ ಹೇಗೆ ಎಂಬುದು ಜನರನ್ನು ಚಿಂತೆಗೀಡು ಮಾಡಿದೆ. ಕರೂರು ಬಾರಂಗಿ ರೈತರು ಕರುನಾಡಿಗೆ ಬೆಳಕು ನೀಡುವ ಸಲುವಾಗಿ ತಮ್ಮ ಫಲವತ್ತಾದ ಜಮೀನನ್ನು ನೀರಿನಲ್ಲಿ ಮುಳುಗಿಸಲು ಬಿಟ್ಟಿದ್ದಾರೆ. ತಮ್ಮ ಬದುಕನ್ನು ಸಮರ್ಪಿಸಿದ್ದಾರೆ. ಆದರೆ, ಇಡೀ ರಾಜ್ಯಕ್ಕೆ ಬೆಳಕು ಕೊಟ್ಟ ಜನರಿಗೆ ಇಂದು ಬೆಳಕು ಸಮರ್ಪಕವಾಗಿ ದೊರಕದಂತಾಗಿದೆ.