ಹಬ್ಬದ ದಿನ ವಿದ್ಯುತ್ ವಿತರಣಾ ಕೇಂದ್ರದ ಎದುರು ರೈತರ ಪ್ರತಿಭಟನೆ
Oct 25 2023, 01:15 AM ISTಕನ್ನಡಪ್ರಭ ವಾರ್ತೆ ಕೊಪ್ಪಳಇಡೀ ನಾಡೇ ದಸರಾ ಹಬ್ಬ, ವಿಜಯ ದಶಮಿಯ ಸಂಭ್ರಮದಲ್ಲಿದ್ದರೆ ಅನ್ನದಾತರು ಮಾತ್ರ ವಿದ್ಯುತ್ ಸಮಸ್ಯೆಯಿಂದ ರೋಸಿ ಹೋಗಿ ವಿದ್ಯುತ್ ವಿತರಣಾ ಕೇಂದ್ರದ ಎದುರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ 110 ಕೆವಿ ಸ್ಟೇಷನ್ ಎದುರು ಕಾತರಕಿ, ಗುಡ್ಲಾನೂರು ರೈತರು ಮಂಗಳವಾರ ದಸರಾ ಹಬ್ಬ ಆಚರಿಸುವುದನ್ನು ಬಿಟ್ಟು, ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಪ್ರತಿಭಟನೆ ನಡೆಸಿದರು.ಹೊಲದಿಂದ ನೇರವಾಗಿ ಏಕಾಏಕಿ ಬೆಟಗೇರಿ 110 ಕೆವಿ ಸ್ಟೇಷನ ಬಳಿಗೆ ಬಂದು ನಮಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಕೊಡುವುದೇ ಐದು ಗಂಟೆ. ಅದನ್ನು ಸಹ ಸರಿಯಾಗಿ ನೀಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ ರೈತರು, ಪದೇ ಪದೆ ವಿದ್ಯುತ್ ಕಡಿತ ಮಾಡಿದರೆ, ಲೋಡಶೆಡ್ಡಿಂಗ್ ಮಾಡಿದರೆ ನಮ್ಮ ಗತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.