ಮುಂಗಾರು ಹೋಯ್ತು, ಹಿಂಗಾರು ಬಿತ್ತನೆಗೂ ಬರ!ಮುಂಗಾರು ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಭೀಕರ ಬರ ಎದುರಾಗಿ ಈಗಾಗಲೇ ರೈತರು ಸಂಕಷ್ಟ ಎದುರಿಸುತ್ತಿದ್ದು, ಹಿಂಗಾರು ಬಿತ್ತನೆಗೂ ಈಗ ಬರಸಿಡಿಲು ಎರಗಿದೆ. ಇದರಿಂದ ಜಿಲ್ಲೆಯಲ್ಲಿ ಶೇ. 50ರಷ್ಟೂ ಬಿತ್ತನೆ ಆಗದೇ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಅಕ್ಟೋಬರ್ನಲ್ಲಿ ಹಿಂಗಾರು ಬಿತ್ತನೆ ಕಾರ್ಯ ಆರಂಭವಾಗಬೇಕಿತ್ತು. ಆದರೆ, ಹಿಂಗಾರು ಮಳೆಯೂ ಕಾಲಕ್ಕೆ ತಕ್ಕಂತೆ ಬಾರದ ಹಿನ್ನೆಲೆ ನವೆಂಬರ್ನಲ್ಲಿ ರೈತರು ಹಿಂಗಾರು ಬಿತ್ತನೆ ಮಾಡಿದ್ದಾರೆ. ನವೆಂಬರ್ನಲ್ಲಿ ಭರವಸೆ ಮೂಡಿಸಿದ್ದ ಮಳೆರಾಯನನ್ನು ನಂಬಿದ ರೈತರು ಜಿಲ್ಲೆಯಲ್ಲಿ ಜೋಳ, ಗೋವಿನಜೋಳ, ಗೋದಿ, ಹೆಸರು, ಅಲಸಂದೆ, ಸೂರ್ಯಕಾಂತಿ, ಇತರ ಬೀಜ ಬಿತ್ತನೆ ಮಾಡಿದ್ದಾರೆ.