ಬೆಟ್ಟದಕೂರ್ಲಿಯಲ್ಲಿ ವಿಜೃಂಭಣೆಯ ಹೋರಿಹಬ್ಬಕನ್ನಡಪ್ರಭ ವಾರ್ತೆ ಸೊರಬ ಮಲೆನಾಡು ಮತ್ತು ಬಯಲುಸೀಮೆ ಭಾರದ ರೈತರ ಅಚ್ಚುಮೆಚ್ಚಿನ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ತಾಲೂಕಿನ ಬೆಟ್ಟದಕೂರ್ಲಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಗ್ರಾಮ ಸಮಿತಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಿದರು. ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸುಮಾರು 200ಕ್ಕೂ ಅಧಿಕ ಹೋರಿಗಳು ಆಗಮಿಸಿದ್ದವು. ಒಂದಕ್ಕಿಂತ ಒಂದು ಹೋರಿಗಳು ನಾವೇನು ಯಾರಿಗೂ ಕಮ್ಮಿ ಇಲ್ಲ ಎನ್ನುವ ಹಾಗೆ ಮಿಂಚಿನ ಓಟ ಮಾಡಿ, ನೋಡುಗರ ಗಮನ ಸೆಳೆದವು. ಅಖಾಡದಲ್ಲಿ ಹೋರಿಗಳು ಓಡುವುದನ್ನು ನೋಡಲು ನೆರೆಯ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ಹೋರಿ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ರೋಮಾಂಚನಗಳಿಸಿತು. ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣ ಬಣ್ಣದ ಜೂಲ, ಬಲೂನು, ಹೂವು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸಿದ್ದರು.