ಬ್ಯಾಂಕ್ ದರೋಡೆಕೋರರಿಗೆ ಗನ್ ನೀಡಿದ್ದವರ ಸೆರೆಕನ್ನಡಪ್ರಭ ವಾರ್ತೆ ವಿಜಯಪುರ ಹಳೆಯ ವೈಷಮ್ಯ, ಕೊಲೆ, ಸುಲಿಗೆಗಳಿಂದಾಗಿಯೇ ಮೊದಲಿನಿಂದಲೂ ಭೀಮಾತೀರ ಕುಖ್ಯಾತಿ ಗಳಿಸಿದೆ. ಇದೀಗ ಎರಡು ಬ್ಯಾಂಕ್‌ಗಳ ದರೋಡೆ ಪ್ರಕರಣಗಳ ಮೂಲಕ ಬ್ಯಾಂಕಿಂಗ್ ಕ್ಷೇತ್ರವನ್ನು ತಲ್ಲಣಗೊಳಿಸಿವೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಿನಲ್ಲಿ ನಡೆದ ಎರಡು ಬ್ಯಾಂಕ್ ದರೋಡೆ ಪ್ರಕರಣಗಳು ಇಲ್ಲಿಯ ಜನರನ್ನು ಆತಂಕಕ್ಕೆ ದೂಡಿವೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ವಿಜಯಪುರ ಪೊಲೀಸರು ಎರಡೂ ಪ್ರಕರಣಗಳು ನಡೆದು ಒಂದೊಂದು ತಿಂಗಳಲ್ಲಿಯೇ ಕಾರ್ಯಾಚರಣೆ ಮೂಲಕ ದರೋಡೆಕೋರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನೀವು ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ ಕೆಳಗೆ ನುಸುಳುತ್ತೇವೆ ಎಂಬುದನ್ನು ಪೊಲೀಸರು ದರೋಡೆಕೋರರಿಗೆ ಎಚ್ಚರಿಕೆ ಗಂಟೆ ನೀಡಿದ್ದಾರೆ.