ಚಿಮ್ಮಲಗಿ ಕಾಲುವೆಗೆ ಹರಿದು ಬಂದ ಕೃಷ್ಣೆಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಗೆ ನೀರು ಹರಿದು ಬಂದಿದ್ದು, ತಾಲೂಕಿನ ರೈತರ ಆಸೆ ಕೊನೆಗೂ ಈಡೇರಿದೆ. ಕಳೆದ ವರ್ಷ ಸಕಾಲಕ್ಕೆ ಮಳೆ ಇಲ್ಲದೇ ಸಂಕಷ್ಟ ಅನುಭವಿಸಿದ್ದ ರೈತರು, ಈ ಬಾರಿ ಉತ್ತಮ ಮಳೆಯಾಗಿದೆಯಾದರೂ ಸಮರ್ಪಕ ಫಸಲು ಪಡೆಯುವಲ್ಲಿ ಕೊಂಚ ತೊಂದರೆ ಅನುಭವಿಸುವಂತಾಗಿತ್ತು. ಜನ, ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕೆಂಬ ರೈತರ ಬೇಡಿಕೆಗೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ವಿಶೇಷ ಕಾಳಜಿಗೆ ಆಲಮಟ್ಟಿ ಲಾಲಬಹಾದ್ದೂರ ಜಲಾಶಯದಿಂದ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆಗೆ ನೀರು ಹರಿದಿರುವುದರಿಂದ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಶಾಸಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.