ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ದಾರಿ: ಶಾಸಕ ಚಿಮ್ಮನಕಟ್ಟಿಗುಳೇದಗುಡ್ಡ: ಮಕ್ಕಳ ಆದರ್ಶ ಹಾಗೂ ಸಂಸ್ಕಾರಯುತ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಣವೇ ದಾರಿಯಾಗಿದೆ. ಸರ್ಕಾರಿ ಶಾಲೆಯಲ್ಲಿ ಕಲಿತ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಸಮೀಪದ ಪಾದನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳೂರು ಕೆಮಿಕಲ್ ಫರ್ಟಿಲೈಜರ್ ಕಂಪನಿ ಸಿ.ಎಸ್.ಆರ್.ಯೋಜನೆ ಅಡಿಯಲ್ಲಿ ಅಂದಾಜು ₹ 3.50ಲಕ್ಷ ವೆಚ್ಚದ ಶಾಲಾ ಬೆಂಚು, ಮೇಜು, ಕುರ್ಚಿ, ಗಾಡ್ರೇಜ್, ಕಪಾಟು, ಗ್ರೀನ್ ಬೋರ್ಡ್, ಊಟದ ತಟ್ಟೆ ಹೀಗೆ ಹಲವು ಕಲಿಕಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.