ಹೊಸದಾಗಿ 21,919 ಯುವ ಮತದಾರರು ಸೇರ್ಪಡೆ: ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ.ಬಾಗಲಕೋಟೆ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ ಒಟ್ಟು 21,919 ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಪರಿಷ್ಕೃತ ಮತದಾರರ ಪಟ್ಟಿ ವಿತರಿಸಿ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 1726 ಮತಗಟ್ಟೆಗಳಿದ್ದು, ಒಟ್ಟು 15,91,208 ಮತದಾರರಿದ್ದಾರೆ. ಈ ಪೈಕಿ 7,88,051 ಪುರುಷ ಮತದಾರರು, 8,03,068 ಮಹಿಳಾ ಮತದಾರರು ಹಾಗೂ 89 ತೃತೀಯ ಲಿಂಗ ಮತದಾರರು ಇದ್ದಾರೆ. ಲಿಂಗಾನುಪಾತ ಪ್ರತಿ 1000 ಪುರುಷ ಮತದಾರರಿಗೆ 874 ಮಹಿಳಾ ಮತದಾರರಿದ್ದಾರೆ ಎಂದು ತಿಳಿಸಿದರು.