ಚಂದ್ರವಳ್ಳಿಯಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವಕನ್ನಡ ರಾಜ್ಯೋತ್ಸವ ಆಚರಣೆ ಅಂದಾಕ್ಷಣ ಭುವನೇಶ್ವರಿ ಮೆರವಣಿಗೆ, ಆರ್ಕೆಸ್ಟ್ರಾ ಆಯೋಜನೆ, ಕನ್ನಡ ಭಾಷೆ ಅಳಿವು ಉಳಿವಿನ ಬಗ್ಗೆ ಭಾಷಣಗಳು ಮಾಮೂಲು. ಆದರೆ ಇದರೆಲ್ಲದರಾಚೆ ವಿನೂತನ ರಾಜ್ಯೋತ್ಸವ ಆಚರಣೆಗೆ ಭಾನುವಾರ ಚಿತ್ರದುರ್ಗ ಸಾಕ್ಷಿಯಾಯಿತು. ಚಿತ್ರದುರ್ಗ ಚಂದ್ರವಳ್ಳಿಯಲ್ಲಿರುವ ಮಯೂರವರ್ಮನ ಶಾಸನದ ಮಾಹಿತಿ ಪ್ರಚುರ ಪಡಿಸುವ ಮೂಲಕ ಕನ್ನಡದ ಮೊದಲ ಸಾಮ್ರಾಜ್ಯ ಉದಯವಾದ ಐತಿಹ್ಯ ಮನನ ಮಾಡಿಕೊಡಲಾಯಿತು.ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದರು. ಚಂದ್ರವಳ್ಳಿಯಲ್ಲಿ ನಿತ್ಯ ನೂರಾರು ವಾಯುವಿಹಾರಿಗಳು ಜಮಾವಣೆಗೊಳ್ಳುತ್ತಿದ್ದು ಅವರೆಲ್ಲರ ಸಮ್ಮುಖದಲ್ಲಿ ಖ್ಯಾತ ಶಾಸನ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಶಾಸನದಲ್ಲಿನ ಹೂರಣವ ಬಿಚ್ಚಿಟ್ಟರು. ಮುಂಜಾನೆ ಚುಮು ಚುಮು ಚಳಿಯ ನಡುವೆ ಶಾಸನದ ಮುಂಭಾಗವೇ ಕಾರ್ಯಕ್ರಮ ಆಯೋಜನೆಗೊಂಡಿದ್ದು ವಿಶೇಷ.