ಅಡಕೆ ವ್ಯಾಪಾರಿಯ ₹1 ಕೋಟಿ ದೋಚಿದ್ದು ಗೆಳೆಯ ಆ್ಯಂಡ್ ಗ್ಯಾಂಗ್!ಇತ್ತೀಚೆಗೆ ನಡೆದಿದ್ದ ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ಅಡಕೆ ವ್ಯಾಪಾರಿ ಎಚ್.ಎಸ್.ಉಮೇಶ್ ಅವರಿಗೆ ಸೇರಿದ ₹1 ಕೋಟಿ ಕಳ್ಳತನ ಪ್ರಕರಣ ಸಂಬಂಧ ಅವರ ಕಾರು ಚಾಲಕ ಹಾಗೂ ಆತನ ಸ್ನೇಹಿತೆ ಸೇರಿದಂತೆ ನಾಲ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದ ಪಿ.ಬಿ.ಸ್ವಾಮಿ, ಆತನ ಸ್ನೇಹಿತೆ ಬೆಂಗಳೂರಿನ ಮಹದೇವಪುರ ಸಮೀಪದ ಲಕ್ಷ್ಮೀಸಾಗರ ಬಡಾವಣೆಯ ಎನ್.ಎಂ.ಅನುಪಮಾ, ಚಿತ್ರದುರ್ಗ ಜಿಲ್ಲೆಯ ಕೆಳಗೋಟೆಯ ಎನ್.ಪವನ್ ಹಾಗೂ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಹೇಶ್ವರಿನಗರದ ಎಸ್.ಆರ್.ಕಾರ್ತಿಕ್ ಬಂಧಿತರು. ಆರೋಪಿಗಳಿಂದ ₹90.19 ಲಕ್ಷ ನಗದು, ₹6.49 ಲಕ್ಷ ಮೌಲ್ಯದ 2 ಐ–ಫೋನ್, 2 ವಾಚ್ಗಳು ಹಾಗೂ 61 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.