ಕಾಡಾನೆಗಳಿಂದ ಬೇಸತ್ತ ಜನರಿಂದ ಅರಣ್ಯಾಧಿಕಾರಿಗಳಿಗೆ ತರಾಟೆ ಬೇಲೂರು ತಾಲೂಕಿನ ಬಕ್ರವಳ್ಳಿ ಹಾಗೂ ಬಿಳಗುಳಿ ಗ್ರಾಮದಲ್ಲಿ ಅಪಾರ ಪ್ರಮಾಣದ ಕಾಫಿ, ಮೆಣಸು, ಅಡಕೆ, ಬಾಳೆ, ಭತ್ತ ಹಲವು ಬೆಳೆಗಳು ಕಾಡಾನೆಗಳ ದಾಳಿಗೆ ಸಂಪೂರ್ಣ ನೆಲಕಚ್ಚಿದ್ದು ಕೇವಲ ಬೆಳೆ ಹಾನಿಯಾದ ಸಂದರ್ಭದಲ್ಲಿ ಮಾತ್ರ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆಯವರು ಇಲ್ಲಿಗೆ ಬರುತ್ತಾರೆ. ಇದರಿಂದ ಏನು ಪ್ರಯೋಜನ ಎಂದು ಆಕ್ರೋಶಗೊಂಡು ಆನೆ ಕಾರ್ಯಾಚರಣೆಯ ಇಟಿಎಫ್ ಸಿಬ್ಬಂದಿಯನ್ನು ಬೆಳೆಗಾರರು ಕೂಡಿಹಾಕಲು ಯತ್ನಿಸಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಳೆಗಾರರಾದ ಕೋಕಿಲ, ಮೋಹನ್, ಮಲ್ಲಿಕಾರ್ಜುನ ಹಾಗೂ ವೀಣಾ ದಿನೇಶ್, ಈ ಭಾಗದಲ್ಲಿ ಸುಮಾರು ೩೮ ಕಾಡಾನೆಗಳು ಬೀಡು ಬಿಟ್ಟಿದ್ದು ಸಂಪೂರ್ಣವಾಗಿ ಈ ಭಾಗದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಕಾಫಿಬೆಳೆಗಾರರ ತೋಟಗಳು ಹಾಳಾಗಿದೆ ಎಂದು ತಿಳಿಸಿದರು.