ಕಾಲುವೆಯಲ್ಲ, ನದಿಯಿಂದ ಆಂಧ್ರ, ತೆಲಂಗಾಣಕ್ಕೆ ನೀರು

Nov 26 2023, 01:15 AM IST
ರಾಜ್ಯದ ರೈತರ ಬೆಳೆ ಕಾಪಾಡುವ ಉದ್ದೇಶದಿಂದ ಕಾಲುವೆ ಮೂಲಕವೇ ನಿಮ್ಮ ಪಾಲಿನ ನೀರನ್ನು ಪಡೆಯಿರಿ ಎಂದು ರಾಜ್ಯ ಸರ್ಕಾರಮ ಮಾಡಿಕೊಂಡ ಮನವಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ತೋರದೇ, ರಾಜ್ಯದ ರೈತರ ಬಗ್ಗೆ ಕರುಣೆಯನ್ನೂ ತೋರದ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ನದಿ ಮೂಲಕವೇ ಶನಿವಾರದಿಂದ ನೀರು ಹರಿಸಿಕೊಳ್ಳಲು ಆರಂಭಿಸಿದ್ದು ತಮ್ಮ ಮೊಂಡು ಹಠವನ್ನು ಮುಂದುವರಿಸಿವೆ. ತುಂಗಭದ್ರಾ ಜಲಾಶಯದಲ್ಲಿ ಈಗ ಇರುವುದೇ ಕೇವಲ 16 ಟಿಎಂಸಿ ನೀರು. ಇದರಲ್ಲಿ ಆಂಧ್ರ, ತೆಲಂಗಾಣ ರಾಜ್ಯದ ಪಾಲು 4 ಟಿಎಂಸಿ. ಈ ನಾಲ್ಕು ಟಿಎಂಸಿ ನೀರನ್ನು ಬಲದಂಡೆ ಮೇಲ್ಮಟ್ಟದ ಕಾಲುವೆ ಮೂಲಕ ಹರಿಸಿಕೊಂಡರೆ ಕಾಲುವೆ ವ್ಯಾಪ್ತಿಯ ಬಳ್ಳಾರಿ ಜಿಲ್ಲೆಯ ರೈತರ ಒಂದು ಲಕ್ಷ ಎಕರೆ ಪ್ರದೇಶದ ಬೆಳೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ, ಕಾಲುವೆಯ ಮೂಲಕವೇ ನೀರು ಹರಿಸಿಕೊಳ್ಳಿ ಎಂದು ರಾಜ್ಯ ಸರ್ಕಾರ ಮನವಿ ಮಾಡಿದರೂ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ಒಪ್ಪುತ್ತಿಲ್ಲ.